ಕೆರೂರ: ಗುರುವಾರ ರಾತ್ರಿ ನಡೆದ ಅಗ್ಗಿ ಉತ್ಸವದಲ್ಲಿ ಹರಕೆಯಿಂದ ಮುಕ್ತರಾಗಲು ಕೆಂಡದ ರಾಶಿ ಮೇಲೆ ನಡೆದು ಅಗ್ಗಿ ಸೇವೆಗೈಯ್ಯುವ ಭಕ್ತರಂತೆ ಕಂದು ಬಣ್ಣದ ಹಸುವೊಂದು ಕೆಂಡದ ಮೇಲೆ ನಡೆದು ರಾಚೋಟೇಶ್ವರನಿಗೆ ನಮಿಸಿದ ಘಟನೆ ವಿಸ್ಮಯ ಮೂಡಿಸಿತು. ಸ್ಥಳೀಯ ರಾಚೋಟೇಶ್ವರನ ರಥೋತ್ಸವದ ಮರುದಿನ ಗುರುವಾರ ರಾತ್ರಿ ನಡೆದ ಭಕ್ತಿಯ ಪರಾಕಾಷ್ಠೆಯನ್ನು ತಲುಪುವ ‘ಅಗ್ಗಿ ಹಾಯುವ’ ಕಾರ್ಯಕ್ರಮ ಸಾವಿರಾರು ಭಕ್ತರನ್ನು ಮೈಮನ ನವಿರೇಳುವಂತೆ ಮಾಡಿತು.
ಕೆಂಡದ ರಾಶಿಯತ್ತ ಬಂದ ಹಸುವನ್ನು ಬೆದರಿಸಲು ಭಕ್ತರು ಸಾಕಷ್ಟು ಪ್ರಯತ್ನಿಸಿದರೂ ಜಗ್ಗದ ಅದು, ನಿಧಾನವಾಗಿ ಕೆಂಡ ರಾಶಿ ಮೇಲೆ ನಡೆಯತ್ತಾ ಹೋಗಿ ಮಧ್ಯದಲ್ಲಿ ಮೂತ್ರ ವಿಸರ್ಜಿಸಿ, ರಾಚಣ್ಣನ ದೇಗುಲ ದ್ವಾರದತ್ತ ಧಾವಿಸಿದ ದೃಶ್ಯ ಭಕ್ತರು ಕೊಂಡಾಡುವಂತೆ ಪ್ರೇರೇಪಿಸಿತು. ಸುಮಾರು 25 ಅಡಿ ಉದ್ದದ ಜಾಗೆಯನ್ನು ಆವರಿಸಿದ ನಿಗಿನಿಗಿ ಕೆಂಡದ (ಅಗ್ನಿ)ಯ ಮೇಲೆ ಜಾತ್ರೆಯ ವಿಶೇಷ ಅರ್ಚಕ ಈರಣ್ಣ ಪತ್ತಾರ ಮತ್ತು ಸಹೋದರರು ಮಂಗಳಾರತಿ ಎತ್ತಿ ಕೆಂಡ ಹಾಯುತ್ತಲೇ “ಶ್ರೀ ರಾಚೋಟೇಶ್ವರ ಮಹಾರಾಜ ಕೀ ಜೈ” ಎಂಬ ಹರ್ಷೋದ್ಗಾರ ಭಕ್ತರಿಂದ ಮೊಳಗಿತು.
ಅವರೊಂದಿಗೆ ಪಲ್ಲಕ್ಕಿ,11 ನಂದಿಕೋಲುಗಳು ಹಾಗೂ ತೊಯ್ದಬಟ್ಟೆಯೊಂದಿಗೆ ರಾಚಣ್ಣನ ಸ್ಮರಣೆಯಲ್ಲಿ ನೂರಾರು ಭಕ್ತರು ಬೆಂಕಿಯಲ್ಲಿ ನಡೆದರು. ಇಂಥ ರೋಮಾಂಚನಕಾರಿ ದೃಶ್ಯ ವೀಕ್ಷಿಸಲು ಆಂಧ್ರ ಪ್ರದೇಶ, ತಮಿಳುನಾಡಿನಿಂದ ಭಕ್ತರ ದಂಡೇ ಬಂದಿತ್ತು. ಇದಕ್ಕೂ ಮುನ್ನ ಪುರವಂತರು ತಮ್ಮ ಧಾರ್ಮಿಕ ಚಾತುರ್ವಿದ್ಯೆ ಪ್ರದರ್ಶಿಸುತ್ತಿದ್ದರೆ, ಇತ್ತ ಬಾಲ, ವೃದ್ಧಾದಿಗಳು ಉಗ್ರಸ್ವರೂಪಿ ರಾಚಣ್ಣನನ್ನು ಶಾಂತಗೊಳಿಸಲು ಒಡಪುಗಳ ‘ಖಡೇ’ ಹೇಳುವ ಕಾರ್ಯಕ್ರಮದಲ್ಲಿ ತಲ್ಲೆನರಾಗಿದ್ದರು.ಸಿಪಿಐ ಆರ್.ಎಸ್. ಪಾಟೀಲ ಹಾಗೂ ಸ್ಥಳೀಯ ಪಿ.ಎಸ್.ಐ ಡಿ.ಬಿ. ಪಾಟೀಲ ಹಾಗೂ ಸಿಬ್ಬಂದಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಅಖಾಡದಲ್ಲಿ ಜಂಗಿ ಕುಸ್ತಿ: ಶುಕ್ರವಾರದಿಂದ ನಿತ್ಯ ಸಂಜೆ ದೇವಾಲಯಕ್ಕೆ ಅನತಿ ದೂರದ ಕುಸ್ತಿ ಅಖಾಡದಲ್ಲಿ ಜಂಗಿ ನಿಕಾಲಿ ಕುಸ್ತಿ ಪಂದ್ಯಗಳು ಜರುಗುತ್ತಿದ್ದು, ನೂರಾರು ಕ್ರೀಡಾಪ್ರೇಮಿಗಳನ್ನು ಸೆಳೆಯುತ್ತಿದೆ.
ಧರಣಿ ಸ್ಥಳಕ್ಕೆ ತಹಸೀಲ್ದಾರ ಭೇಟಿ
ಗುಳೇದಗುಡ್ಡ: ಕಳೆದ ಒಂದು ವಾರದಿಂದ ಪುರಸಭೆ ಸದಸ್ಯರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶುಕ್ರವಾರ ತಾಲ್ಲೂಕು ತಹಸೀಲ್ದಾರ ಮಹೇಶ ಕರ್ಜಗಿ ಭೇಟಿ ನೀಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಧರಣಿ ಸತ್ಯಾಗ್ರಹವನ್ನು ಕೈಬಿಡುವಂತೆ ಮನವಿ ಮಾಡಿಕೊಂಡರು. ನಮ್ಮ ಸಮಸ್ಯೆ ಬಗೆಹರಿಯುವವರೆಗೂ ಧರಣಿ ಸತ್ಯಾಗ್ರಹದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಧರಣಿ ಕುಳಿತ ಸದಸ್ಯರಾದ ಪ್ರಕಾಶ ಮುರಗೋಡ, ವೈ. ಆರ್. ಹೆಬ್ಬಳ್ಳಿ ಹೇಳಿದಾಗ ತಹಸೀಲ್ದಾರ ಹಿಂತಿರುಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.