ADVERTISEMENT

ಅಪರೂಪದ ಪುರಾತನ ಶಿಲ್ಪ ಪತ್ತೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2011, 8:15 IST
Last Updated 15 ಏಪ್ರಿಲ್ 2011, 8:15 IST
ಅಪರೂಪದ ಪುರಾತನ ಶಿಲ್ಪ ಪತ್ತೆ
ಅಪರೂಪದ ಪುರಾತನ ಶಿಲ್ಪ ಪತ್ತೆ   

ರನ್ನಬೆಳಗಲಿ: ಕವಿ ಚಕ್ರವರ್ತಿ ರನ್ನನ ಜನ್ಮ ಸ್ಥಳವಾದ ರನ್ನ ಬೆಳಗಲಿಯಲ್ಲಿ ಈಚೆಗೆ ಪುರಾತನ ಅಲಂಕಾರಿಕ ಶಿಲ್ಪವೊಂದು ಪತ್ತೆಯಾಗಿದೆ. ಬಸ್ ನಿಲ್ದಾಣದ ಸಮೀಪವಿರುವ ಅಡಿವೆಪ್ಪ ಕಾಡಪ್ಪ ಧಡೂತಿ ಎಂಬುವರ ತೋಟದ ಬಾವಿ ಪಕ್ಕದಲ್ಲಿ ಈ ಶಿಲ್ಪ ದೊರೆತಿದೆ.
 
ದೇವರ ಮೂರ್ತಿಯ ಅಭಿಷೇಕ ನೀರು ಹರಿದುಹೋಗುವುದಕ್ಕಾಗಿ ಗರ್ಭಗುಡಿಗೆ ಹೊಂದಿಕೊಂಡು ನಿರ್ಮಿಸಲಾಗಿರುವ ಶಿಲ್ಪ ಇದು. 88 ಸೆಂ.ಮೀ. ಉದ್ದ ಹಾಗೂ 35 ಸೆಂ.ಮೀ. ಅಗಲ ಇರುವ ಈ ಶಿಲ್ಪದ ಮಧ್ಯಭಾಗದಲ್ಲಿ 14 ಸೆ.ಮೀ. ಅಗಲದಷ್ಟು ನೀರಿನ ಹರಿನಾಳಿಗೆ ಇದೆ. 9-10ನೇ ಶತಮಾನದ ಅವಧಿಯಲ್ಲಿ ಕಲ್ಯಾಣದ ಚಾಲುಕ್ಯರ ಸಾಮಂತ ಅರಸರಾಗಿ ರಟ್ಟರು ಆಳ್ವಿಕೆ ನಡೆಸಿರಬಹುದೆಂದು ಊಹಿಸಲಾಗಿದೆ. ಗ್ರಾಮದ ಸುತ್ತಲೂ ಆಕಸ್ಮಿಕವಾಗಿ ಬಾವಿ, ಮನೆ ಇರುವ ಭಾಗದಲ್ಲಿ ಅಡಿಪಾಯಕ್ಕೆ ಭೂಮಿಯನ್ನು ಅಗೆದಾಗ ಇಂತಹ ಶಿಲ್ಪಗಳು ದೊರೆಯುತ್ತವೆ.

ಈಗ ದೊರೆತಿರುವ ಅಪರೂಪದ ಅಲಂಕಾರಿಕ ಶಿಲ್ಪವು ಕೆಲ ಪ್ರಾಣಿಗಳನ್ನು ಹೋಲುತ್ತದೆ. ಎಡ-ಬಲ ಬದಿಗೆ ನೋಡಿದಾಗ ಆನೆಯಾಕಾರ ಗೋಚರಿಸುತ್ತದೆ. ಹಿಂಬದಿಯಲ್ಲಿ ನೋಡಿದಾಗ ಗರಿಬಿಚ್ಚಿದ ನವಿಲಿನಂತೆ ಕಾಣಿಸಿದರೆ, ಮೇಲ್ಭಾಗದಿಂದ ಗಮನಿಸಿದಾಗ ಭಗ್ನಗೊಂಡ ಮೊಸಳೆಯಾಕಾರ ಕಂಡುಬರುತ್ತದೆ. ಇಂತಹ ಅಪರೂಪದ ಶಿಲ್ಪಗಳು ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮದ ಅಲ್ಲಲ್ಲಿ ಬಿದ್ದುಕೊಂಡು ಧೂಳು ತಿನ್ನುತ್ತಿವೆ. ಸರ್ಕಾರ ತನ್ನ ದಿವ್ಯ ನಿರ್ಲಕ್ಷ್ಯ ತೊರೆದು, ಅಪರೂಪದ ಶಿಲ್ಪಗಳನ್ನು ಒಂದೆಡೆ ಸಂಗ್ರಹಿಸಿ ಇತಿಹಾಸದ ಅಧ್ಯಯನಕ್ಕೆ ಅನುವು ಮಾಡಿಕೊಡಬೇಕೆನ್ನುವುದು ಗ್ರಾಮಸ್ಥರ ಒತ್ತಾಸೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.