ADVERTISEMENT

ಅಭಿವೃದ್ಧಿಯ ಹೊನಲು ಹರಿಸುವೆ

ಸಾರ್ವಜನಿಕ ಸಭೆಯಲ್ಲಿ ಬಾದಾಮಿ ಕ್ಷೇತ್ರದ ಮತದಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 5:25 IST
Last Updated 25 ಏಪ್ರಿಲ್ 2018, 5:25 IST

ಬಾದಾಮಿ: ‘ಅಭಿವೃದ್ಧಿಯಲ್ಲಿ ಬಾದಾಮಿಯನ್ನು ರಾಜ್ಯದಲ್ಲಿಯೇ ನಂ1 ಕ್ಷೇತ್ರವಾಗಿಸುವೆ’ ಎಂದು ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನೀವು ಇಲ್ಲಿಂದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದೀರಿ’ ಎಂಬುದನ್ನು ನೆನಪಿಸಿದರು.

ನಾಮಪತ್ರ ಸಲ್ಲಿಕೆಯ ನಂತರ ಮಂಗಳವಾರ ಪಟ್ಟಣದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದ ಕಾರಣ ಎರಡು ಕಡೆ ನಿಂತರೆ ಪ್ರಚಾರ ಕಷ್ಟ ಎಂದು ಬಾದಾಮಿಯಲ್ಲಿ ನಿಲ್ಲಲು ಮೊದಲು ಒಪ್ಪಿರಲಿಲ್ಲ. ಆದರೆ ಎಸ್.ಆರ್.ಪಾಟೀಲ ನೇತೃತ್ವದಲ್ಲಿ ಜಿಲ್ಲೆಯ ನಾಯಕರು ‘ನಾಮಪತ್ರ ಸಲ್ಲಿಸಿ ಹೋಗಿ ನಾವು ನಿಮ್ಮನ್ನು ಆರಿಸಿ ತರುತ್ತೇವೆ ಎಂದು ಒತ್ತಾಯಿಸಿದರು.

ನಂತರ ಶಾಸಕ ಬಿ.ಬಿ. ಚಿಮ್ಮನಕಟ್ಟಿ ನಾಯಕತ್ವದಲ್ಲಿ ಮತ್ತೊಮ್ಮೆ ಬಂದು ಒತ್ತಾಯಿಸಿದರು. ಹೈಕಮಾಂಡ್‌ ಜೊತೆ
ಮಾತನಾಡಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದೆ. ಸ್ಪರ್ಧಿಸುವಂತೆ ಹೈಕಮಾಂಡ್ ಸೂಚನೆ ಕೂಡಕೊಟ್ಟಿತ್ತು. ಬೇರೆ ಬೇರೆ ಕ್ಷೇತ್ರಗಳಿಗೆ ಪ್ರಚಾರಕ್ಕೆ ಹೋಗಬೇಕು. ಸಮಯ ಇಲ್ಲ. ಒಂದು ಕಡೆ ಸಾಕು ಎಂದು ಹೇಳಿದರೂ ಅವರೂ ಕೇಳಲಿಲ್ಲ. ಎಲ್ಲರ ಒತ್ತಾಯದ ಫಲವಾಗಿ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ’ ಎಂದರು.

ಬಾದಾಮಿಯಲ್ಲಿ ಇಂದು ಇತಿಹಾಸ ನಿರ್ಮಾಣ ಮಾಡಿದ್ದೇವೆ. ಅನೇಕ ಬಾರಿ ಪ್ರಚಾರಕ್ಕೆ ಬಂದಿದ್ದೇನೆ. ಇಂದು ನಡೆದ ರೋಡ್ ಶೋನಲ್ಲಿ ಭಾಗವಹಿಸಿದಷ್ಟು ಜನರನ್ನು ಹಿಂದೆಂದೂ ನೋಡಿರಲಿಲ್ಲ. ವಿಶೇಷವೆಂದರೆ ಬಾದಾಮಿಯಿಂದ ಮುಖ್ಯಮಂತ್ರಿ ಅಭ್ಯರ್ಥಿಯೊಬ್ಬ ಸ್ಪರ್ಧಿಸುತ್ತಿದ್ದೇನೆ ಎಂದರು.

ADVERTISEMENT

ರಾಜ್ಯದಲ್ಲಿ ಶೇ 100ರಷ್ಟು ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನನ್ನ ನಾಯಕತ್ವದಲ್ಲಿ ಚುನಾವಣೆ ಬಂದಿದೆ. ಮತ್ತೆ ಸಿಎಂ ಆಗುವ ಅವಕಾಶ ಇದೆ. ಮುಖ್ಯಮಂತ್ರಿ ಆಗುವವರನ್ನು ನಿಮ್ಮ ಪ್ರತಿನಿಧಿಯಾಗಿ ಚುನಾಯಿಸಿ ಎಂದರು.

‘ಎದುರಾಳಿ ಯಾರು ಎಂದು ಯೋಚಿಸುವುದಿಲ್ಲ. ಇದು ನನ್ನ 10ನೇ ಚುನಾವಣೆ. ಎಂದಿಗೂ ಎದುರಾಳಿ ಯಾರು, ಯಾವ ಜಾತಿಗೆ ಸೇರಿದವರು ಎಂಬುದನ್ನು ಲೆಕ್ಕ ಹಾಕಿಲ್ಲ’ ಎಂದರು. ‘ಸಾಮರಸ್ಯದ ಬದುಕು, ಧರ್ಮ ಧರ್ಮಗಳ ನಡುವೆ ಸಂಘರ್ಷ, ಜಾತಿಗಳ ನಡುವೆ ವಿಷ ಬೀಜ ಬಿತ್ತಿ ರಕ್ತಪಾತ ಮಾಡುವುದು ಬಿಜೆಪಿ ಅಜೆಂಡಾ. ಆ ಪಕ್ಷಕ್ಕೆ ಯಾವುದೇ ಕಾರ್ಯಕ್ರಮ, ಸಿದ್ಧಾಂತ ಇಲ್ಲ. ಆ ಪಕ್ಷದ ನಾಯಕರು ಅಭಿವೃದ್ಧಿ ಪರ ಯಾವತ್ತೂ ಮಾತಾಡೊಲ್ಲ’ ಎಂದು ಟೀಕಿಸಿದರು.

ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರ ರೈತರಿಗೆ ಏನು ಮಾಡಿದೆ. ಬಡವರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ವಿದ್ಯಾರ್ಥಿಗಳು, ಕಾರ್ಮಿಕರಿಗೆ ಪ್ರಧಾನಿ ನರೇಂದ್ರ ಮೋದಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

‘ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ನಮ್ಮ ಸರ್ಕಾರದ ಬಗ್ಗೆ ಮಾತನಾಡಲು ಏನೂ ಉಳಿದಿಲ್ಲ. ಭ್ರಷ್ಟ ಸರ್ಕಾರ ಎಂದು ಟೀಕಿಸುವ ಅವರು, ಪಕ್ಕದಲ್ಲಿ ಯಡಿಯೂರಪ್ಪ, ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕೂರಿಸಿಕೊಂಡಿರುತ್ತಾರೆ. ನರೇಂದ್ರ ಮೋದಿಯಷ್ಟು ಸುಳ್ಳು ಹೇಳಿದ ಪ್ರಧಾನಿಯನ್ನು ಯಾರೂ ನೋಡಿಲ್ಲ. ಎರಡು ಕೋಟಿ ಉದ್ಯೋಗ ಕಲ್ಪಿಸುವೆ, ಎಲ್ಲರ ಬ್ಯಾಂಕ್ ಖಾತೆಗೆ ₹15 ಲಕ್ಷ ಹಾಕುವುದಾಗಿ ಹೇಳಿದ್ದರು. ಆದರೆ 15 ಪೈಸೆ ಹಾಕಿಲ್ಲ. ಇಷ್ಟು ಸುಳ್ಳು ಹೇಳುವವರು ಯಾರಾದರೂ ಪ್ರಧಾನಿ ಇದ್ದಾರ, ಜೈಲಿಗೆ ಹೋದ ಮುಖ್ಯಮಂತ್ರಿಗೆ ಓಟ್ ಹಾಕಬೇಕಾ’ ಎಂದು ಪ್ರಶ್ನಿಸಿದರು.‘ದೇವರಾಜ ಅರಸು ನಂತರ ಐದು ವರ್ಷ ಪೂರ್ಣಾವಧಿ ಮುಗಿಸಿದ ಸಿಎಂ ಎಂಬ ಶ್ರೇಯ ನಿಮ್ಮೆಲ್ಲರ ಆಶೀರ್ವಾದದಿಂದ ನನಗೆ ದೊರೆತಿದೆ’ ಎಂದರು.

ಕೆಪಿಸಿಸಿ ಅಧ್ಯಕ್ಷ ಎಸ್.ಆರ್.ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿದರು.ಶಾಸಕ ಬಿ.ಬಿ.ಚಿಮ್ಮನಕಟ್ಟಿ ಮಾತನಾಡಿದರು. ಇದೇ ವೇಳೆ ಬಿಜೆಪಿ ತೊರೆದ 100ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ಸಚಿವರಾದ ಎಚ್.ಕೆ.ಪಾಟೀಲ, ಎಂ.ಬಿ.ಪಾಟೀಲ, ವಿನಯ ಕುಲಕರ್ಣಿ, ಆರ್.ಬಿ.ತಿಮ್ಮಾಪುರ, ಉಮಾಶ್ರೀ, ಶಾಸಕರಾದ ಎಚ್.ವೈ.ಮೇಟಿ, ವಿಜಯಾನಂದ ಕಾಶಪ್ಪನವರ, ಸಿದ್ದು ನ್ಯಾಮಗೌಡ, ಜೆ.ಟಿ.ಪಾಟೀಲ, ಸಿ.ಎಸ್.ನಾಡಗೌಡ, ಶಿವಾನಂದ ಪಾಟೀಲ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಸೌದಾಗರ ಮತ್ತಿತರರು ಪಾಲ್ಗೊಂಡಿದ್ದರು.

‘ಬನಶಂಕರಿ ಆಶೀರ್ವಾದ ಅರಸಿ ಬಂದಿರುವೆ’

ಬಾದಾಮಿ: ‘ನಾನು ಬಿಜೆಪಿಯ ಶಿಸ್ತಿನ ಸಿಪಾಯಿ. ಹಾಗಾಗಿ ಹೈಕಮಾಂಡ್ ಸೂಚನೆಯಂತೆ ಸಾಮಾನ್ಯ ಕಾರ್ಯಕರ್ತನಾಗಿ ಇಲ್ಲಿಗೆ ನಾಮಪತ್ರ ಸಲ್ಲಿಸಲು ಬಂದಿದ್ದೇನೆ’ ಎಂದು ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಯಾವುದೇ ಲೆಕ್ಕಾಚಾರ ಹಾಕಿ ರಾಜಕೀಯ ಮಾಡುವ ವ್ಯಕ್ತಿಯಲ್ಲ. ಬಾದಾಮಿ ಕ್ಷೇತ್ರದಲ್ಲಿ ಮೊದಲಿನಿಂದಲೂ ಬಿಜೆಪಿ ಗಟ್ಟಿಯಾಗಿದೆ. ತಾಯಿ ಬನಶಂಕರಿಯ ಆಶೀರ್ವಾದ ಅರಸಿ ಬಂದಿದ್ದೇನೆ. ಪಕ್ಷ ಹಾಗೂ ಕ್ಷೇತ್ರದ ಹಿರಿಯರ ಆಶೀರ್ವಾದ ಪಡೆದು ಗೆಲುವು ಸಾಧಿಸಲಿದ್ದೇನೆ ಎಂದರು.

ಇದೊಂದು ಮಹಾಭಾರತದ ಯುದ್ಧ. ಹಾಗಾಗಿ ಯಾವುದೇ ಲೆಕ್ಕಾಚಾರ ಯಶಸ್ವಿಯಾಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಿಜೆಪಿ ದಿಕ್ಕು ತಪ್ಪಿದೆ: ಇಬ್ರಾಹಿಂ ಲೇವಡಿ

ಬಾದಾಮಿಯಲ್ಲಿ ಬಿಜೆಪಿಯವರಿಗೆ ದಿಕ್ಕು ತಪ್ಪಿದೆ. ಸಿಎಂ ವಿರುದ್ಧ ಆ ಪಕ್ಷದ ಮೂವರು ನಾಮಪತ್ರ ಸಲ್ಲಿಸಿರುವುದೇ ಅದಕ್ಕೆ ಸಾಕ್ಷಿ ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಲೇವಡಿ ಮಾಡಿದರು.

ಅಧಿಕಾರ, ಹಣದ ಬಲ ಬಳಸಿ ಬಿಜೆಪಿಯವರು ನಮ್ಮ ಗೆಳೆಯರ ಮೇಲೆ ದಾಳಿ ಮಾಡಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಮುಖಂಡರ ಮೇಲಿನ ಐಟಿ ದಾಳಿಯನ್ನು ಟೀಕಿಸಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆಟ ಕರ್ನಾಟಕದಲ್ಲಿ ಏನೂ ನಡೆಯುವುದಿಲ್ಲ ಎಂದು ಹೇಳಿದ ಇಬ್ರಾಹಿಂ ಒಬ್ಬ ಮಗನಿಗೆ ಟಿಕೆಟ್ ತಗೊಳ್ಳೋಕೆ ಆಗಲಿಲ್ಲ ಎಂದು ಯಡಿಯೂರಪ್ಪ ಅವರನ್ನು ಲೇವಡಿ ಮಾಡಿದರು.

‘ನಾವು ಪ್ರಾಣ ಕೊಡೋದಕ್ಕೆ ಸಿದ್ಧರಿದ್ದೇವೆ. ಆದರೆ ರಾಜ್ಯದ ಬಿಜೆಪಿ ನಾಯಕರ ರೀತಿ ತಲೆ ಬಾಗಿಸೊಲ್ಲ. ಹೈಕಮಾಂಡ್ ಮುಂದೆ ಅವರಂತೆ ಅಸಹಾಯಕರಾಗಿ ನಿಲ್ಲುವುದಿಲ್ಲ’ ಎಂದು ಛೇಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.