ADVERTISEMENT

ಅವಿಶ್ವಾಸ ನಿರ್ಣಯ ಠುಸ್?

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 10:10 IST
Last Updated 15 ಮಾರ್ಚ್ 2012, 10:10 IST

ಬಾಗಲಕೋಟೆ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕವಿತಾ ದಡ್ಡೇನವರ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಮುಂದಾಗಿರುವ ಜಿ.ಪಂ. ಬಿಜೆಪಿ ಸದಸ್ಯರ ನಡುವೆ ಭಿನ್ನಮತ ಉಂಟಾಗಿರುವ ಕಾರಣ ಅವಿಶ್ವಾಸ ಗೊತ್ತುವಳಿ ವಿಫಲವಾಗುವ ಸಾಧ್ಯತೆ ಇರುವುದಾಗಿ ತಿಳಿದುಬಂದಿದೆ.

ಅವಿಶ್ವಾಸ ನಿರ್ಣಯದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಂಬಂಧ  ನಗರದಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ ನೇತೃತ್ವದಲ್ಲಿ ನಡೆದ ಸಭೆಗೆ ಕೇವಲ ಐದು ಬಿಜೆಪಿ ಸದಸ್ಯರು ಪಾಲ್ಗೊಂಡಿದ್ದರು ಎನ್ನಲಾಗಿದೆ.

ಈ ನಡುವೆ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ಸಂಬಂಧದ ಪತ್ರಕ್ಕೆ ಸಹಿ ಮಾಡಿದ್ದ ಜಿ.ಪಂ. 17 ಸದಸ್ಯರಲ್ಲಿ 7 ಸದಸ್ಯರು ಅವಿಶ್ವಾಹ ಗೊತ್ತುವಳಿಯಿಂದ ಹಿಂದೆ ಸರಿದು, ಅಧ್ಯಕ್ಷೆಗೆ ಮತ್ತು ಜಿ.ಪಂ. ಮುಖ್ಯಕಾರ್ಯ ನಿರ್ವಹಣಾಧಿಕಾರಿ ಅವರಿಗೆ ಗೊತ್ತುವಳಿ ಹಿಂಪಡೆದಿರುವ ಪತ್ರ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಜಿ.ಪಂ. ಬಿಜೆಪಿ ಸದಸ್ಯರಲ್ಲಿ ಎರಡು ಗುಂಪಾಗಿರುವ ಹಿನ್ನೆಲೆಯಲ್ಲಿ ಹಾಲಿ ಅಧ್ಯಕ್ಷೆ ಕವಿತಾ ದಡ್ಡೇನವರ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ದೂರವಾಣಿ ಮೂಲಕ  ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ, ಸಿಇಒ ಅವರನ್ನು ಸಂಪರ್ಕಿಸಲು ಹಲವು ಭಾರಿ `ಪತ್ರಿಕೆ~ ಪ್ರಯತ್ನಿಸಿದರೂ ಇಬ್ಬರೂ ದೂರವಾಣಿ ಕರೆಯನ್ನು ಸ್ವೀಕರಿಸದ ಹಿನ್ನೆಲೆಯಲ್ಲಿ ಸ್ಪಷ್ಟವಾಗಿ ತಿಳಿದುಬಂದಿಲ್ಲ.

ಆದರೆ ಈ ಬಗ್ಗೆ `ಪ್ರಜಾವಾಣಿ~ಗೆ ಪ್ರತಿಕ್ರಿಯಸಿರುವ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ಸಂಬಂಧ ಬುಧವಾರ ನಡೆದ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಅವಿಶ್ವಾಸ ಗೊತ್ತುವಳಿ ಮಂಡಿಸಲು ಶೀಘ್ರ ಸಭೆ ಕರೆಯುವಂತೆ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಜಿ.ಪಾಟೀಲ ಅವರಿಗೆ ಗುರುವಾರ ಜಿ.ಪಂ. ಬಿಜೆಪಿ ಸದಸ್ಯರು ಮನವಿ ಪತ್ರ ನೀಡಲಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಕೆಲ ಸದಸ್ಯರು ಹಾಲಿ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರೇ ಮುಂದಿನ ಅವಧಿಗೂ ಮುಂದುವರಿಯಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು, ಆದರೆ ಬಹುತೇಕ ಸದಸ್ಯರು ಬದಲಾವಣೆಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸುವುದು ನಿಶ್ಚಿತ ಎಂದರು.

 ಒಟ್ಟಾರೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷರ ಬದಲಾವಣೆ ಸಾಧ್ಯತೆ ಬಹುತೇಕ ಆಗದು ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.