ADVERTISEMENT

ಆಹಾರ ಪದಾರ್ಥ ಹಾಳು ಮಾಡಬೇಡಿ: ಸ್ವಾಮೀಜಿ ಕಳಕಳಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2012, 7:35 IST
Last Updated 7 ನವೆಂಬರ್ 2012, 7:35 IST

ಇಳಕಲ್: `ಜೀವಕ್ಕೆ ಶಕ್ತಿ, ಚೈತನ್ಯ ನೀಡುವ ಆಹಾರ ಪದಾರ್ಥಗಳ್ನು ಹಾಳು ಮಾಡಬಾರದು. ಆಹಾರ ತಜ್ಞರ ಸಮೀಕ್ಷೆಯೊಂದರ ಪ್ರಕಾರ ಜಗತ್ತಿನಲ್ಲಿ ದಿನವೊಂದಕ್ಕೆ 2 ಕೋಟಿ ಜನರು ಊಟ ಮಾಡಬಹುದಾದಷ್ಟು ಆಹಾರವನ್ನ ಹಾಳು ಮಾಡಲಾಗುತ್ತಿದೆ.

ತಟ್ಟೆಯ ಪ್ರತಿ ಕಾಳಿನಲ್ಲೂ ನೂರಾರು ಜನರ ಶ್ರಮ ಇರುತ್ತದೆ ಹಾಗೂ ತುತ್ತು ಅನ್ನಕ್ಕಾಗಿ ಹಸಿದ ಲಕ್ಷಾಂತರ ಒಡಲುಗಳಿವೆ ಎಂದು ನೆನಪಿಸಿಕೊಂಡು ತಟ್ಟೆ ಸ್ವಚ್ಛವಾಗುವ ಹಾಗೆ ಊಟ ಮಾಡಬೇಕು~ ಎಂದು ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಗುರು ಮಹಾಂತ ಸ್ವಾಮೀಜಿ ಹೇಳಿದರು. 

 ನಗರದ ಸಯ್ಯದ್ ಮುರ್ತುಜಾ ಷಾ ಖಾದ್ರಿ ದರ್ಗಾದ ಆವರಣದಲ್ಲಿ  ಲಿಮ್ರಾ ವೇಲ್‌ಫೇರ್ ಅಸೋಸಿಯೇಶನ್ ಆಯೋಜಿಸಿದ್ದ 9ನೇ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬದುಕಿನಲ್ಲಿ ಸಂತೋಷದಿಂದ ಇರಬೇಕಿದ್ದರೆ ಮೊದಲು ದುಶ್ಚಟಗಳನ್ನು ತ್ಯಜಿಸಿ.

ಗಂಡ ಮಾಡುವ ದುಶ್ಚಟಗಳು ಹೆಂಡತಿಯನ್ನು ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಮಾಡುತ್ತವೆ. ಇಂದಿನ ಮದುವೆಯ ಸಂಭ್ರಮ ನಿತ್ಯವೂ ನಿಮ್ಮ ಬದುಕಿನಲ್ಲಿ ಇರಬೇಕಾದರೆ ನೀವು ಚಟಗಳಿಗೆ ದಾಸರಾಗಬೇಡಿ ಎಂದು ನೂತನ ವಧು-ವರರನ್ನು  ವಿನಂತಿಸಿಕೊಂಡರು.

ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕೌಜಲಗಿ ಮಾತನಾಡಿ, `ಯಾರಿಂದಲೂ ದೇಣಿಗೆ ಸಂಗ್ರಹಿಸದೇ, ಯಾವುದೇ ಫಲಾಪೇಕ್ಷೆ ಇಲ್ಲದೇ ತಮ್ಮ ದುಡಿಮೆಯಲ್ಲಿ ಉಳಿಸಿ ಕಳೆದ 9 ವರ್ಷದಿಂದ ಸರ್ವಧರ್ಮ ಸಾಮೂಹಿಕ ವಿವಾಹ ಸೇರಿದಂತೆ ಅನೇಕ ಸಮಾಜೋದ್ಧಾರ ಕಾರ್ಯ ಮಾಡುತ್ತಿರುವ ಲಿಮ್ರೋ ಸಂಸ್ಥೆಯ ಕಾರ್ಯ ಅನುಕರಣೀಯ~ ಎಂದರು.

ಶಾಸಕ ದೊಡ್ಡನಗೌಡ ಪಾಟೀಲ, ಕೆಪಿಸಿಸಿ ಸದಸ್ಯ ವಿಜಯಾನಂದ ಕಾಶಪ್ಪನವರ, ಉಸ್ಮಾನಗಣಿ ಹುಮನಾ ಬಾದ್, ಅಬ್ದುಲ್ ಹಕೀಂ, ಸಿ.ಸಿ.ಚಂದ್ರಾಪಟ್ಟಣ ಮಾತನಾಡಿದರು. ದರ್ಗಾದ  ಸಯ್ಯದಶಾ ಅಬ್ದುಲ್ ಖಾದರ್ ಹುಸೇನಿ ಉಲ್ ಖಾದ್ರಿ ಆರೀಫ್, ಡಾ.ಮಹಾಂತ ಸ್ವಾಮೀಜಿ, ಹಾಗೂ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯದಲ್ಲಿ 48 ಮುಸ್ಲಿಂ ಹಾಗೂ 11 ಹಿಂದೂ ಜೋಡಿಗಳ ವಿವಾಹ ನೆರವೇರಿತು. 

ಇದೇ ಸಂದರ್ಭದಲ್ಲಿ ವಿಜಯಾನಂದ ಕಾಶಪ್ಪನವರ, ಲಕ್ಷ್ಮಣ ಗುರುಂ, ಸಿ.ಸಿ. ಚಂದ್ರಾಪಟ್ಟಣ ಅವರಿಗೆ ಸೌಹಾರ್ಧ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಅಬ್ದುಲ್ ಹಕೀಂ, ಆದರ್ಶ ಶಿಕ್ಷಕರಾದ ಅಲ್ತಾಫ್ ಬಿಳೇಕುದರಿ ಹಾಗೂ ಅಬ್ದುಲ್ ರೆಹಮಾನ್‌ಗಡೇದ ಅವರನ್ನು ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಸನಾ ಹಳ್ಳಿ, ಸಮೀರ ನಾಲತವಾಡ, ರೀಹಾನ ಮಾಗಿ ಅವರನ್ನು ಸನ್ಮಾನಿಸಲಾಯಿತು. 

ವೇದಿಕೆ ಮೇಲೆ  ಲಿಮ್ರೋ ಸಂಸ್ಥೆ ಅಧ್ಯಕ್ಷ ರಜಾಕ ತಟಗಾರ, ಅಂಜುಮನ್ ಸಂಸ್ಥೆ ಅಧ್ಯಕ್ಷ ಉಸ್ಮಾನಗಣಿ ಹುಮ್ನೋಬಾದ, ವಿ.ವಿ.ಸಾಕಾ, ಶಾಂತಕುಮಾರ, ಜಿ.ಪಂ.ಸದಸ್ಯ ಮಹಾಂತೇಶ ನರಗುಂದ, ನಗರಸಭೆ ಅಧ್ಯಕ್ಷೆ ವಿಜಯಾ ಬಂಡಿ, ಉಪಾಧ್ಯಕ್ಷ ಹಾಸೀಮ್ ಬಾಗವಾನ, ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಕೆ.ಎಚ್.ತಟಗಾರ, ಗೌಸ್ ಮಾಗಿ, ಝೆಡ್.ಎಂ.ಬಿಳೆಕುದರಿ, ಮಲೀಕಸಾಬ ಬೀಳಗಿ, ಬಾವೂದ್ದೀನ ಖಾಜಿ ಉಪಸ್ಥಿತರಿದ್ದರು.
ಗುಲಾಂ ಹಸನಸಾಬ್ ಖಾಜಿ ಕುರಾನ ಪಠಿಸಿದರು. ಆರೀಫ್ ಫಣಿಬಂದ ಸ್ವಾಗತಿಸಿದರು. ಯುನುಸ್ ಮುದಗಲ್ಲ ನಿರೂಪಿಸಿದರು. ಸುಲೇಮಾನ ಚೋಪದಾರ ವಂದಿಸಿದರು. 

ಪೈಪೋಟಿಯಲ್ಲಿ ಸಾಮೂಹಿಕ ವಿವಾಹ
ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಜನವರಿಯಲ್ಲಿ ಮಗಳ ಮದುವೆ ಮಾಡುವಾಗ 501 ಸಾಮೂಹಿಕ ವಿವಾಹ ನಡೆಸುವುದಾಗಿ ಪ್ರಕಟಿಸಿದರು. ಕಾಂಗ್ರೆಸ್ ಮುಖಂಡ ವಿಜಯಾನಂದ ಕಾಶಪ್ಪನವರ ಕೂಡಾ ಹಿಂದೆ ಬೀಳಲಿಲ್ಲ. ತಮ್ಮ ಅವಳಿ-ಜವಳಿ ಮಕ್ಕಳ ನಾಮಕರಣ ಸಂದರ್ಭದಲ್ಲಿ 1001 ಮದುವೆ ಮಾಡುವುದಾಗಿ ಹೇಳಿದರು. 

ಯಡಿಯೂರಪ್ಪಗೆ ಈಗ ಜ್ಞಾನೋದಯ
ಕೂಡಲಸಂಗಮ ಪಂಚಮಸಾಲಿ ಪೀಠದ  ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ,  `ಧರ್ಮ ಹಾಗೂ ಕೋಮು ಭಾವನೆ ಕೆರಳಿಸುವ ಪಕ್ಷದ ಮೂಲಕ  ಸಂಘರ್ಷ ದಿಂದ ಪಡೆದ ಅಧಿಕಾರ ಅನುಭವಿಸಿ, ಈಗ ಸಂಘರ್ಷ ಒಳ್ಳೆಯದಲ್ಲಿ  ಸೌಹಾರ್ದತೆ ಶ್ರೇಷ್ಠ ಎಂದು ಜ್ಞಾನೋದಯ ವಾಗಿದೆ. ಮುಸ್ಲಿಂ ಮುಖಂಡರನ್ನು ಸೇರಿಸಿಕೊಂಡು ಕೆಜೆಪಿ ಪಕ್ಷ ಕಟ್ಟುತ್ತಿದ್ದಾರೆ. ಸಂಘರ್ಷಕ್ಕೆ ಆಯುಷ್ಯ ಕಡಿಮೆ, ಸೌಹಾರ್ದತೆ ದೀರ್ಘ ಕಾಲ ಬಾಳುತ್ತದೆ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.