ADVERTISEMENT

ಇಬ್ಬರು ಸದಸ್ಯರಿಗೆ ವಿಪ್ ಜಾರಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 6:48 IST
Last Updated 17 ಸೆಪ್ಟೆಂಬರ್ 2013, 6:48 IST

ಕೆರೂರ: ಸ್ಥಳೀಯ ಪಟ್ಟಣ ಪಂಚಾಯತ ಸಭಾ ಭವನದಲ್ಲಿ ಚುನಾವಣೆ ಪ್ರಕ್ರಿಯೆ ನಡೆವ ಸಂದರ್ಭದಲ್ಲಿಯೇ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು ನೀಡಿದ್ದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಪಕ್ಷಕ್ಕೆ ಸದಸ್ಯೆ ನಿರ್ಮಲಾ ಮದಿ (ಪತ್ನಿ ಸಹ) ಅವರೊಂದಿಗೆ ಬೆಂಬಲ ಸೂಚಿಸಿದ ಬಿಜೆಪಿಯ ಸದಾನಂದ ಮದಿ (ಈಗ ಉಪಾಧ್ಯಕ್ಷ) ಹಾಗೂ ಸ್ಥಳೀಯ ಬಿಜೆಪಿ ಧುರೀಣರ ಮಧ್ಯೆ ಮಾತಿನ ಚಕಮಕಿ, ನೂಕಾಟ ನಡೆದು ಕೆಲಕಾಲ ವಾತಾವರಣ ಕಾವೇರಿತ್ತು. ಆದರೆ ಸಕಾಲಕ್ಕೆ ಪೊಲಿೀಸರ ಮಧ್ಯ ಪ್ರವೇಶದ ನಂತರ ವಾತಾವರಣ ತಿಳಿಯಾಯಿತು.

ಪ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಬಿಜೆಪಿಯ ಪ್ರಮುಖರು ಸಂಪರ್ಕಕ್ಕೆ ಸಿಗದೇ ಅಂತಿಮ ಹಂತದಲ್ಲಿ ಗುರುವಾರ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಶೀಲವಂತ (ಜೆಡಿಎಸ್‌ಗೆ ಬೆಂಬಲ ಕೋರಿ..?) ಹೊರಡಿಸಿದ ವಿಪ್ ಉಲ್ಲಂಘಿಸಿ ಮದಿಯವರು, ಕಾಂಗ್ರೆಸ್ ಪಕ್ಷಕ್ಕೆ ಪತ್ನಿಯೊಂದಿಗೆ ಬೆಂಬಲ ತೋರಿದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯ ಸಿದ್ದಣ್ಣ ಕೊಣ್ಣೂರ, ಜಿಲ್ಲಾ ಕಾರ್ಯಕಾರಣಿಯ ಅಶೋಕ ಜಿಗಳೂರ, ಪರಶುರಾಮ ಇತರರು ಸಭಾ ಭವನದ ಒಳಗಿದ್ದ ಸದಾನಂದ ಮದಿ ಹೊರ ಕರೆದು ವಿಪ್ ಪ್ರತಿ ನೀಡಲೆತ್ನಿಸಿದಾಗ ವಾಗ್ವಾದ, ಮಾತಿನ ಚಕಮಕಿ ಜರುಗಿತು.

ಮದಿ ಅವರ ನೆರವಿಗೆ ಕೆಲ ಕಾಂಗ್ರೆಸ್ ಧುರೀಣರು ಧಾವಿಸಿದ ಬಳಿಕ ವಾತಾವರಣ ಕಾವೇರಿತು. ಕೂಡಲೇ ಸಿಪಿಐ ಅಮರೇಶ ಗೂದಿಗೊಪ್ಪ, ಪಿಎಸ್ಐ ಸೀಮಾಣಿ, ಬಸನಗೌಡ ಪಾಟೀಲ ಮಧ್ಯ ಪ್ರವೇಶಿಸಿ ಬಿಜೆಪಿ ಧುರೀಣರನ್ನು ಹೊರ ಕಳಿಸಿ ವಾತಾವರಣ ಹತೋಟಿಗೆ ತಂದರು.

ನಂತರ ಪರಿಸ್ಥಿತಿ ಅರಿತ ಚುನಾವಣಾಧಿಕಾರಿ ಅಜೀಜ್ ದೇಸಾಯಿ ಯಾರನ್ನೂ ಒಳ ಬಿಡದಂತೆ ತಾಕೀತು ಮಾಡಿದ ಬಳಿಕ, ಸಾಕಷ್ಟು ಸಂಖ್ಯೆಯಲ್ಲಿದ್ದ ಪೊಲೀಸರು ಪಂಚಾಯಿ್ತ ಆವರಣದಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್‌ ನಿಯೋಜಿಸಿದ್ದರು.
ತನ್ನ ಸದಸ್ಯರಿಗೆ ವಿಪ್ ಜಾರಿಗೊಳಿಸಿರುವ ಬಿಜೆಪಿಯ ಮುಂದಿನ ನಡೆ ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.