ADVERTISEMENT

ಎಚ್‌ಐವಿ ಸೋಂಕಿತರ ಹೆಚ್ಚಳ: ಕಳವಳ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 7:00 IST
Last Updated 14 ಜೂನ್ 2011, 7:00 IST
ಎಚ್‌ಐವಿ ಸೋಂಕಿತರ ಹೆಚ್ಚಳ: ಕಳವಳ
ಎಚ್‌ಐವಿ ಸೋಂಕಿತರ ಹೆಚ್ಚಳ: ಕಳವಳ   

ಕೂಡಲಸಂಗಮ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಮಾರಕ ಎಚ್‌ಐವಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕಳವಳ ವ್ಯಕ್ತಪಡಿಸಿದರು.

ಇಲ್ಲಿ ನಿರ್ಮಾಣವಾಗಿರುವ ನೂತನ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡವನ್ನು ಸೋಮವಾರ ಉದ್ಘಾಟಿಸಿದ ನಂತರ  ಅವರು ಸುದ್ದಿಗಾರ ಜೊತೆ ಮಾತನಾಡಿದರು.

ಜಿಲ್ಲೆಯಲ್ಲಿ 18 ಸಾವಿರ ಎಚ್‌ಐವಿ ಸೋಂಕಿತರು ಮುಧೋಳ, ಬಾಗಲಕೋಟೆ ಮತ್ತು ಜಮಖಂಡಿಯಲ್ಲಿರುವ ಎಚ್‌ಐವಿ ಚಿಕಿತ್ಸಾ ಕೇಂದ್ರದಲ್ಲಿ ಹೆಸರು ನೊಂದಾಯಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಅನೇಖ ಮಂದಿ ಎಚ್‌ಐವಿ ಸೋಂಕಿತರು ಜಿಲ್ಲೆಯಲ್ಲಿ ಇದ್ದಾರೆ ಎಂದರು.

ಜಿಲ್ಲೆಯ ಯುವ ಜನರು ಆರೋಗ್ಯದ ಕಡೆ ಗಮನಹರಿಸಬೇಕಾಗಿದೆ, ಅಪರಿಚಿತರೊಂದಿಗೆ ಲೈಂಗಿಕ ಸಂಪರ್ಕ ಬೆಳಸದೇ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಸಚಿವರು ಮನವಿ ಮಾಡಿದರು.

ವೈದ್ಯರ ಕೊರತೆ: ರಾಜ್ಯದಲ್ಲಿ ವೈದ್ಯರ ತೀವ್ರ ಕೊರತೆ ಇದ್ದು, ಶೀಘ್ರದಲ್ಲೇ 500 ವೈದ್ಯರನ್ನು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುವುದು ಎಂದರು.

ಹಳ್ಳಿಗಳಲ್ಲಿ ವೈದ್ಯರ ಸೇವೆ ಕಡ್ಡಾಯ ಮಾಡಿದರೇ ಸರ್ಕಾರಿ ಕೆಲಸವನ್ನೇ ಬಿಟ್ಟು ಹೋಗುತ್ತಿದ್ದಾರೆ. ರಾಜ್ಯದಲ್ಲಿ ಇದೊಂದು ಕಠಿಣ ಸಮಸ್ಯೆಯಾಗಿದೆ ಎಂದ ಅವರು ವೈದ್ಯರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಮುಂದಾಗಬೇಕು ಎಂದ ಮನವಿ ಮಾಡಿದರು.

ರಾಜ್ಯ ಸರ್ಕಾರ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೇ ಹೆಚ್ಚು ಒತ್ತು ನೀಡಿದ್ದು, 2011-12ನೇ ಸಾಲಿಗೆ ರೂ. 10.500 ಕೋಟಿ ಹಣ ಮೀಸಲಿಟ್ಟಿದೆ ಎಂದರು.

ರಾಜಕಾರಣ ಅರ್ಥವಿಲ್ಲ: ಮುಧೋಳ ನಿರಾಣಿ ಸಕ್ಕರೆ ಕಾರ್ಖಾನೆ ವಿವಾದಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಲು ಬಯಸದ ಸಚಿವರು ಈ ವಿಷಯದಲ್ಲಿ ರಾಜಕಾರಣ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಜಾರಿಕೊಂಡರು.

ಹುನಗುಂದ ಶಾಸಕ ದೊಡ್ಡನಗೌಡ ಜಿ.ಪಾಟೀಲ, ಸಂಸದ ಪಿ.ಸಿ. ಗದ್ದಿಗೌಡರ, ಜಿ.ಪಂ. ಅಧ್ಯಕ್ಷೆ ಕವಿತಾ ದಡ್ಡೇನವರ, ಪಂಚಮಸಾಲಿ ಗುರುಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಜಿ.ಪಂ. ಸದಸ್ಯ ಮಹಾಂತೇಶ ಹಿಟ್ಟಿನಮಠ, ಯಲ್ಲಕ್ಕ ಗಂ. ದೊಡಮನಿ, ಕೂಡಲಸಂಗಮ ಗ್ರಾ.ಪಂ. ಅಧ್ಯಕ್ಷ ಭೀಮಪ್ಪ ಹ. ಯರಝರಿ, ಹುನಗುಂದ ತಾ.ಪಂ. ಅಧ್ಯಕ್ಷೆ ಶರಣಮ್ಮ ಬ. ಮಾಟೂರ, ಸದಸ್ಯ ಮುತ್ತಣ್ಣ ಭಜಂತ್ರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಜಿ.ಸಿ. ಪ್ರಕಾಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎ.ಬಿ. ಚೌಧರಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಿಶ್ವನಾಥ ಗಲಗಲಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.