ADVERTISEMENT

ಎಲ್ಲೆಲ್ಲೂ ಬೆಳಕಿನ ಹಬ್ಬದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 11:45 IST
Last Updated 27 ಅಕ್ಟೋಬರ್ 2011, 11:45 IST

ಬಾಗಲಕೋಟೆ: ಮುಳುಗಡೆ ನಗರ ಬಾಗಲಕೋಟೆ ಸೇರಿದಂತೆ ಜಿಲ್ಲೆಯಾದ್ಯಂತ ದೀಪಾವಳಿ ಹಬ್ಬದ ಸಡಗರ ಸಂಭ್ರಮ ಮನೆಮಾಡಿದೆ.

ದೀಪಾವಳಿ ಹಬ್ಬದ ಅಂಗವಾಗಿ ಮಾರುಕಟ್ಟೆಯಲ್ಲಿ ವ್ಯಾಪಾರ ಭರಾಟೆಯಿಂದ ಸಾಗಿದೆ. ಕಳೆದ ಬಾರಿಗಿಂತ ಈ ಬಾರಿ ದೀಪಗಳ ಹಬ್ಬ ದೀಪಾವಳಿಯನ್ನು ಜನತೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಬಾಗಲಕೋಟೆ ಮಾರುಕಟ್ಟೆ ಜನರಿಂದ ತುಂಬಿ ತುಳುಕುತ್ತಿದೆ.

ನಗರದ ಕೃಷ್ಣಾ ಚಿತ್ರಮಂದಿರದ ಬಳಿ ಇರುವ ನಗರಸಭೆ ಜಾಗದಲ್ಲಿ ಬಾಳೆ ಗಿಡ, ಚೆಂಡುಹೂವು, ಅಡಿಕೆ ಸಿಂಗಾರ, ಕಬ್ಬು, ಹೂವು, ಹಣ್ಣು, ಮಾವಿನ ತೋರಣ ಸೇರಿದಂತೆ ಮತ್ತಿತರ ಸಾಮಾಗ್ರಿಗಳ ಮಾರಾಟ ಭರಾಟೆಯಿಂದ ನಡೆದಿದೆ.

ಹಳೆ ಅಂಚೆ ಕಚೇರಿ ರಸ್ತೆಯಿಂದ ಟಾಂಗಾ ಸ್ಟ್ಯಾಂಡ್‌ವರೆಗೆ ಹಣ್ಣು ಹಂಪಲುಗಳು,  ಗೂಡುದೀಪ, ತೋರಣ,  ಲಕ್ಷ್ಮೀ ಪೂಜೆಗೆ ಬೇಕಾಗುವ ಉಡಿ ತುಂಬುವ ಸಾಮಾಗ್ರಿಗಳ ಮಾರಾಟ ನಡೆಯಿತು.

 ಗಿಜುಗುಡುತ್ತಿದ್ದ ಮಾರುಕಟ್ಟೆ: ಬಾಗಲಕೋಟೆ ನಗರದಲ್ಲಿ ಕಳೆದ ಒಂದು ವಾರದಿಂದ ದೀಪಾವಳಿ ಹಬ್ಬದ ಸಿದ್ಧತೆಗಾಗಿ ಹಾಗೂ ಪೂಜಾ ಸಾಮಾಗ್ರಿ, ಹೊಸ ಬಟ್ಟೆ, ಬಂಗಾರ, ಬೆಳ್ಳಿಯನ್ನು  ಜನರು ಮಾರು ಕಟ್ಟೆಯಲ್ಲಿ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕಳೆದ ಎರಡು ವರ್ಷಕ್ಕಿಂತ ಈ ಭಾರಿ ಮಾರುಕಟ್ಟೆ ಯಲ್ಲಿ ವ್ಯಾಪಾರ ಜೋರಾಗಿ ನಡೆದಿದೆ ಎಂದು ವ್ಯಾಪಾ ರಸ್ಥರ ತಿಳಿಸಿದರು.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದೀಪಾವಳಿ ಹಬ್ಬದ ಪೂಜಾ ಸಾಮಾಗ್ರಿಗಳು ದುಪ್ಪಟ್ಟು ಬೆಲೆಯಲ್ಲಿ ಮಾರಾಟವಾಗುತ್ತಿದೆ. ಚೆಂಡು ಹೂವು ಕಳೆದ ಬಾರಿ ಕೆಜಿಗೆ ರೂ. 30 ರಿಂದ 40 ಕ್ಕೆ ಸಿಕ್ಕಿದ್ದರೆ ಈ ಬಾರಿ ರೂ.80 ರಿಂದ ರೂ.100 ವರೆಗೆ ಮಾರಾಟವಾಗುತ್ತಿದೆ. 5 ಕಬ್ಬುಗಳಿಗೆ ಕಳೆದ ಬಾರಿ ರೂ. 25 ಇದ್ದರೆ ಈ ಭಾರಿ 40ರಿಂದ ರೂ.50ಕ್ಕೆ ಏರಿದೆ.

ಇನ್ನೂ ಬಾಳೆ ಹಣ್ಣು ರೂ.40 ಮತ್ತು 50 ಡಜನ್‌ಗೆ ಆದರೆ ಮತ್ತಿತರ ಸಾಮಾಗ್ರಿಗಳ ಬೆಲೆಯು ದುಪ್ಪಟ್ಟಾಗಿದೆ. ವಸ್ತುಗಳ ಬೆಲೆ ಗಗನಕ್ಕೆ ಏರಿದ್ದರೂ ಜನತೆ ಮಾತ್ರ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿ ರುವ ದೃಶ್ಯ ಕಂಡುಬಂದಿದೆ.

ಲಕ್ಷ್ಮೀ ಪೂಜೆ:ದೀಪಾವಳಿ ಹಬ್ಬದ ಪ್ರಯುಕ್ತ ಬುಧವಾರ  ಸಂಜೆ ಅಂಗಡಿ, ಮುಂಗಟ್ಟು, ಕಚೇರಿಗಳಲ್ಲಿ ಲಕ್ಷ್ಮಿ ಪೂಜೆ ಹಾಗೂ  ವಾಹನಗಳನ್ನು ಹೂವಿನಿಂದ ಅಲಂಕರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.

ಮುತ್ತೈದೆಯರಿಗೆ ದೀಪಾವಳಿ ಹಬ್ಬದ ಅಂಗವಾಗಿ ಮಹಿಳೆಯರಿಗೆ ಉಡಿ ತುಂಬಿ ಸಂಭ್ರಮಿಸಿದರು. ಮನೆಗಳ ಅಂಗಳದಲ್ಲಿ ರಂಗೋಲಿಯನ್ನು ಚಿತ್ರಸಿ, ದೀಪಗಳನ್ನು ಬೆಳಗಿಸಿ ಸಂಭ್ರಮಿಸಿದರು.

ನಗರದ ದೇವಾಲಯಗಳಲ್ಲೂ ಹಬ್ಬದ ಅಂಗವಾಗಿ ವಿಶೇಷ ಪೂಜೆ-ಪುನಸ್ಕಾರಗಳು ನಡೆಯಿತು.
ಪಟಾಕಿ ಸಿಡಿತ:  ಲಕ್ಷ್ಮೀ ಪೂಜೆ ನಡೆಯುತ್ತಿದ್ದಂತೆ ಮನೆ ಗಳ ಅಂಗಳದಲ್ಲಿ ಹಾಗೂ ಆಕಾಶದಲ್ಲಿ ಬಣ್ಣ ಬಣ್ಣದ ಪಟಾಕಿಗಳ ಸಿಡಿಸಿ ಚಿಣ್ಣರು ಸಂಭ್ರಮಿಸಿದರು. 

ಸಂಚಾರಕ್ಕೆ ತೊಂದರೆ: ದೀಪಾವಳಿ ಹಬ್ಬದ ಅಂಗವಾಗಿ ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಿದ್ದ ಕಾರಣ ನಗರದ ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ ವೃತ್ತದ ಮೂಲಕ ಮಾರುಕಟ್ಟೆಯಲ್ಲಿ ಹೋಗುತ್ತಿದ್ದ ಸಂಚಾರಕ್ಕೆ ತಡೆ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.