ADVERTISEMENT

ಏರೋಲೈಟ್ ಬಳಕೆ; ಪರಿಸರಕ್ಕೆ ಧಕ್ಕೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2011, 9:45 IST
Last Updated 8 ಮಾರ್ಚ್ 2011, 9:45 IST
ಏರೋಲೈಟ್ ಬಳಕೆ; ಪರಿಸರಕ್ಕೆ ಧಕ್ಕೆ
ಏರೋಲೈಟ್ ಬಳಕೆ; ಪರಿಸರಕ್ಕೆ ಧಕ್ಕೆ   

ಬಾಗಲಕೋಟೆ: ಇಳಕಲ್ ಹಾಗೂ ಸುತ್ತಮುತ್ತಲಿನ ಗ್ರಾನೈಟ್ ಕಟಿಂಗ್ ಮತ್ತು ಪಾಲಿಶಿಂಗ್ ಘಟಕಗಳು ನೀರು ಬಳಕೆಯ ಕಟಿಂಗ್ ಯಂತ್ರ ಅಳವಡಿಕೆಗೆ ಪರವಾನಿಗೆ ಪಡೆದುಕೊಂಡಿದ್ದರೂ ಅಕ್ರಮವಾಗಿ ಏರೋಲೈಟ್ ಮತ್ತು ಸೀಮೆಎಣ್ಣೆ ಯಂತ್ರ ಅಳವಡಿಸಿಕೊಂಡು ಹಲವು ವರ್ಷಗಳಿಂದ ಪರಿಸರಕ್ಕೆ ಹಾನಿ ಉಂಟು ಮಾಡುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಪ್ರಭಾವಿ ಉದ್ಯಮಿಗಳ 20ಕ್ಕೂ ಅಧಿಕ ಕಟಿಂಗ್ ಹಾಗೂ ಪಾಲಿಶಿಂಗ್ ಘಟಕಗಳು ಅಕ್ರಮವಾಗಿ ಏರೋಲೈಟ್ ಮತ್ತು ಸೀಮೆಎಣ್ಣೆ ಯಂತ್ರಗಳನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದವು. ರಾಜ್ಯ ಮಾಲಿನ್ಯ ನಿಯಂತ್ರ ಮಂಡಳಿಯು ನೀರು ಬಳಕೆಯ ಯಂತ್ರ ಅಳವಡಿಕೆಗೆ ಮಾತ್ರ ಪರವಾನಿಗೆ ನೀಡಿತ್ತು. ಆದರೆ ಅನೇಕ ಘಟಕಗಳು ಏರೋಲೈಟ್ ಹಾಗೂ ಸೀಮೆಎಣ್ಣೆ ಬಳಸಿ ಗ್ರಾನೈಟ್ ಕತ್ತರಿಸುತ್ತಿವೆ.

ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಈ ಘಟಕಗಳು ಹೊರಸೂಸುವ ತ್ಯಾಜ್ಯ ಸುತ್ತಮುತ್ತಲಿನ  ಹಳ್ಳ-ಕೊಳ್ಳಗಳಿಗೆ ಸೇರಿಕೊಂಡು ಜಲ ಹಾಗೂ ವಾಯುಮಾಲಿನ್ಯ ಉಂಟಾಗುತ್ತಿದೆ.
ಏರೋಲೈಟ್ ತ್ಯಾಜ್ಯದಿಂದಾಗಿ ಸುತ್ತಮುತ್ತಲ ಭೂಮಿ ಬಂಜರಾಗುತ್ತಿರುವುದು ಒಂದೆಡೆಯಾದರೆ ಸ್ಥಳೀಯ ಜನರಿಗೆ ಉಸಿರಾಟ ಸಂಬಂಧಿ ಕಾಯಿಲೆ ಭೀತಿ ಕೂಡ ಎದುರಾಗಿದೆ.ಅಕ್ರಮವಾಗಿ ಏರೋಲೈಟ್ ಬಳಕೆ ಮಾಡುವ ಮೂಲಕ ಪರಿಸರ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿರುವ ಗ್ರಾನೈಟ್ ಕಟಿಂಗ್ ಹಾಗೂ ಪಾಲಿಶಿಂಗ್ ಘಟಕಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಸ್ಥಳೀಯ ಜನರು ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿಪತ್ರ ಸಲ್ಲಿಸಿದ್ದಾರೆ.

ಘಟಕಗಳಿಗೆ ನೋಟಿಸ್: ಸಾರ್ವಜನಿಕರ ಒತ್ತಾಯ ತೀವ್ರಗೊಂಡ ಬಳಿಕ ಎಚ್ಚೆತ್ತುಕೊಂಡಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿಗಳು ಏರೋಲೈಟ್ ಬಳಕೆ ಮಾಡುತ್ತಿರುವ 14 ಉದ್ಯಮಿಗಳ ಇಪ್ಪತ್ತಕ್ಕೂ ಅಧಿಕ ಘಟಕಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಈ ಉದ್ಯಮಿಗಳ ಪೈಕಿ ಬಹುತೇಕ ಜನರು ಇಳಕಲ್‌ನ ಪ್ರಭಾವಿ ರಾಜಕಾರಣಿಯೊಬ್ಬರ ಕಟ್ಟಾ ಬೆಂಬಲಿಗರಾಗಿದ್ದಾರೆ.

ನೋಟಿಸ್ ನೀಡುವ ಮುಂಚೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ ಘಟಕಗಳು ಅಕ್ರಮವಾಗಿ ಏರೋಲೈಟ್ ಹಾಗೂ ಸೀಮೆ ಎಣ್ಣೆ ಬಳಕೆ ಮಾಡುತ್ತಿರುವುದು ದೃಢಪಟ್ಟಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಪರವಾನಿಗೆ ಪಡೆಯದೇ ಏರೋಲೈಟ್ ಬಳಕೆ ಮಾಡುತ್ತಿರುವುದನ್ನು ಹಾಗೂ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದಿರುವ ಬಗ್ಗೆ ನೋಟಿಸ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಕಟಿಂಗ್ ಮತ್ತು ಪಾಲಿಶಿಂಗ್ ಘಟಕಗಳು ಅಕ್ರಮವಾಗಿ ಏರೋಲೈಟ್ ಬಳಕೆ ಮಾಡುತ್ತಿರುವುದರಿಂದ ಜಲ ಮಾಲಿನ್ಯ ತಡೆ ಹಾಗೂ ನಿಯಂತ್ರಣ ಕಾಯ್ದೆ-1974ರ ಕಲಂ 33(ಎ) ಮತ್ತು 44ರ ಪ್ರಕಾರ ಷೋಕಾಸ್ ನೋಟಿಸ್ ನೀಡಲಾಗಿದೆ. ಷೋಕಾಸ್ ನೋಟಿಸ್‌ಗೆ ಏಳು ದಿನಗಳಲ್ಲಿ ಉತ್ತರಿಸಬೇಕು ಹಾಗೂ ನೋಟಿಸ್ ತಲುಪಿದ ಒಂದು ತಿಂಗಳೊಳಗೆ ಏರೋಲೈಟ್ ಕಟಿಂಗ್ ಹಾಗೂ ಪಾಲಿಶಿಂಗ್ ಯಂತ್ರಗಳನ್ನು ಬದಲಾಯಿಸಿ ನೀರು ಬಳಕೆಯ ಯಂತ್ರಗಳನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ನಾಳೆ ಕೊನೆ ದಿನ: ಏರೋಲೈಟ್ ಯಂತ್ರಗಳ ಬದಲಾವಣೆಗೆ ಸೂಚಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿಗಳು ಫೆಬ್ರುವರಿ 9ರಂದು ನೋಟಿಸ್ ನೀಡಿದ್ದಾರೆ. ಈ ನೋಟಿಸ್ ತಲುಪಿದ ಒಂದು ತಿಂಗಳಿನಲ್ಲಿ ಯಂತ್ರ ಬದಲಾವಣೆಗೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಲಾಗಿದೆ. ನೋಟಿಸ್‌ನ ಒಂದು ತಿಂಗಳ ಅವಧಿಯು ಮಾರ್ಚ್ 9, 2011ಕ್ಕೆ ಕೊನೆಗೊಳ್ಳಲಿದೆ.

ನೋಟಿಸ್ ಪಡೆದುಕೊಂಡಿರುವ 14 ಉದ್ಯಮಿಗಳಲ್ಲಿ ಎಷ್ಟು ಜನರು ಏರೋಲೈಟ್ ಯಂತ್ರ ಬದಲಾಯಿಸಿ ನೀರು ಬಳಕೆಯ ಯಂತ್ರ ಅಳವಡಿಸಿಕೊಂಡಿದ್ದಾರೆ ಎಂಬುದು ಕಾದು ನೋಡಬೇಕಿದೆ. ಒಂದು ವೇಳೆ ನೋಟಿಸ್‌ನಲ್ಲಿ ತಿಳಿಸಿದಂತೆ ಯಂತ್ರಗಳನ್ನು ಬದಲಾಯಿಸಿರದಿದ್ದರೆ ಮಾಲಿನ್ಯ ನಿಯಂತ್ರಣ ಮಂಡಳಿಯು ಯಾವ ರೀತಿಯ ಕ್ರಮಕೈಗೊಳ್ಳಲಿದೆ ಎಂಬುದು ಗ್ರಾನೈಟ್ ಉದ್ಯಮ ವಲಯದಲ್ಲಿ ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.