ADVERTISEMENT

ಒಂಟಗೋಡಿ ಗ್ರಾಮಕ್ಕೆ ಕಹಿ ಸಂಕ್ರಮಣ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 10:20 IST
Last Updated 15 ಜನವರಿ 2012, 10:20 IST

ಮುಧೋಳ: “ಸಾವ ತಂದಕೊಳ್ಳಾಕ ದೇವರಿಗೆ ಹೋದಾಂಗಾತಲ್ಲೊ, ಜೀವನದಾಗ ಸುಖಾ ಕೊಡಂತ ಕೇಳಾಕಹೋದ ಮಕ್ಕಳ ಮನಿಗಿ ಬರಲಿಲ್ಲ....”

ತಾಲ್ಲೂಕಿನ ಒಂಟಗೋಡಿ ಗ್ರಾಮದ ನಾಲ್ಕು ಜನ ಹಾಗೂ ಬುದ್ನಿಯ ಒಬ್ಬ ಯುವಕ ಶಬರಿಮಲೈ ಬೆಟ್ಟಕ್ಕೆ ಹೋಗಿ ದರ್ಶನ ಪಡೆದುಕೊಂಡು ವಾಪಸ್ ಬರುತ್ತಿದ್ದಾಗ ಹರಿಹರ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಈ ಸುದ್ದಿ ಕುಟುಂಬದವರಿಗೆ ಬರಸಿಡಿಲು ಬಡಿದಂತಾಗಿದೆ.

ಶನಿವಾರ ರಾತ್ರಿ ಮೃತದೇಹಗಳು ಗ್ರಾಮಕ್ಕೆ ಬಂದಾಗ ಇಡೀ ಗ್ರಾಮದ ಜನರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಸಂಕ್ರಮಣ ಹಬ್ಬದಲ್ಲಿಯೂ ಸೂತಕದ ಛಾಯೆ ಮೂಡಿತ್ತು.

ತಿಪ್ಪಣ್ಣ ದೊಡಮನಿ (25), ವಿಠ್ಠಲ ಹರಿಜನ (30), ಸಿದ್ದು ನಾಯಿಕ (21), ಮಂಜುನಾಥ ದನಗರ (18) ಹಾಗೂ ಚಾಲಕ ಬುದ್ನಿ ಗ್ರಾಮದ ಲಕ್ಕಪ್ಪ ಮೃತಪಟ್ಟಿದ್ದಾರೆ.

ತಿಪ್ಪಣ್ಣ ದೊಡಮನಿ ಹಾಗೂ ವಿಠ್ಠಲ ಹರಿಜನ ಅವರ ಮದುವೆಯಾಗಿ ಮಕ್ಕಳೂ ಇದ್ದಾರೆ. ಆದರೆ ಸಿದ್ದು ನಾಯಿಕನಿಗೆ ಮದುವೆಯಾಗಿ ವರ್ಷವೂ ಕಳೆದಿಲ್ಲ, ಇದೇ ಮೊದಲ ಬಾರಿಗೆ ಹೆಂಡತಿಯನ್ನು ಕರೆದುಕೊಂಡು ಬರಲಾಗಿದೆ ಎಂದು ಕುಟುಂಬದವರು ಹಾಗೂ ಗ್ರಾಮಸ್ಥರು ರೋದಿಸುತ್ತಿದ್ದರು.

ಕಳೆದ ವರ್ಷ ಜ್ಯೋತಿಯ ದರ್ಶನಕ್ಕೆಂದು ಹೋಗಿದ್ದ ತಾಲ್ಲೂಕಿನ ಮಂಟೂರಿನ ಶ್ರೀಕಾಂತ ಶ್ರೀಶೈಲ ತಿಮ್ಮಾಪುರ(30) ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದರಿಂದ `ಈ ಬಾರಿ ಜ್ಯೋತಿ ದರ್ಶನಕ್ಕೆ ಕಾಯಬೇಡಿ, ಅಯ್ಯಪ್ಪ ದರ್ಶನ ಮುಗಿಸಿಕೊಂಡು ಬಂದು ಬಿಡಿ ಎಂದು ತಾಕೀತು ಮಾಡಿ ಕಳಿಸಲಾಗಿತ್ತು. ಕಳೆದ ಬಾರಿ ಅಂಥ ದುರ್ಘಟನೆಯಲ್ಲಿಯೂ ದೇವರು ಅವರನ್ನು ಸುರಕ್ಷಿತವಾಗಿ ಕರೆತಂದಿದ್ದ....~ ಎಂದು ಕಳೆದ ವರ್ಷದ ಘಟನೆಯನ್ನು ಗ್ರಾಮಸ್ಥರು ನೆನಪಿಸಿಕೊಂಡರು.

ಅಂತ್ಯಕ್ರಿಯೆ
ಶನಿವಾರ ರಾತ್ರಿ ಈ ಐದು ಜನರ ಅಂತ್ಯಕ್ರಿಯೆ ಒಂದೇ ಕಡೆ ನಡೆಯಿತು. ಅಯ್ಯಪ್ಪ ಮಾಲಾಧಾರಿಗಳೇ ಎಲ್ಲ ಕೈಂಕರ್ಯಗಳನ್ನು ಮುಗಿಸಿದರು. ಸಚಿವ ಗೋವಿಂದ ಕಾರಜೋಳ ಭೇಟಿ ನೀಡಿ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.