ADVERTISEMENT

ಕತ್ತಿ ಬದಲು ಲೇಖನಿ ನೀಡಿ: ಸಚಿವ ರಾಜುಗೌಡ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2011, 8:10 IST
Last Updated 21 ನವೆಂಬರ್ 2011, 8:10 IST
ಕತ್ತಿ ಬದಲು ಲೇಖನಿ ನೀಡಿ: ಸಚಿವ ರಾಜುಗೌಡ
ಕತ್ತಿ ಬದಲು ಲೇಖನಿ ನೀಡಿ: ಸಚಿವ ರಾಜುಗೌಡ   

ಬಾಗಲಕೋಟೆ: ವಾಲ್ಮೀಕಿ ಸಮಾಜದ ಹಿರಿಯರು ತಮ್ಮ ಮಕ್ಕಳ ಕೈಗೆ ಕತ್ತಿ ನೀಡುವ ಬದಲು ಲೇಖನಿ ನೀಡಬೇಕು ಎಂದು ರಾಜ್ಯ ಸಣ್ಣ ಕೈಗಾರಿಕಾ ಸಚಿವ ರಾಜು ಗೌಡ ಸಲಹೆ ಮಾಡಿದರು.

ನವನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಭಾನುವಾರ ಅಖಿಲ ಕರ್ನಾಟಕ ಜಿಲ್ಲಾ ವಾಲ್ಮೀಕಿ ನಾಯಕ ಮಹಾಸಭಾ ಹಮ್ಮಿಕೊಂಡಿದ್ದ ಜನಜಾಗೃತಿ ಸಮಾವೇಶ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜ ಏಳಿಗೆಯಾಗಬೇಕಾದರೆ ಉನ್ನತ ಶಿಕ್ಷಣ, ಉದ್ಯೋಗ ಕಲ್ಪಿಸಬೇಕು, ಅಧಿಕಾರದಲ್ಲಿ ಇರುವವರು ಸಮಾ ಜದ ಪರವಾಗಿ ಕಾರ್ಯಮಾಡಬೇಕು ಎಂದರು. ನಮ್ಮ ಸಮಾಜವನ್ನು ಪ್ರೀತಿಸುವ ಜೊತೆಗೆ ಬೇರೆ ಸಮಾಜ ವನ್ನು ಗೌರವಿಸುವುದನ್ನು ಕಲಿಯಬೇಕು ಎಂದು ತಿಳಿ ಹೇಳಿದರು.

ವಾಲ್ಮೀಕಿ ಸಮಾಜ ಜಗತ್ತಿಗೆ ಮಾರ್ಗದರ್ಶನ ಮಾಡಿದ ಸಮಾಜವಾಗಿದೆ, ಬೇಡರ ಕಣ್ಣಪ್ಪ, ಮಹರ್ಷಿ ವಾಲ್ಮೀಕಿ, ವೀರ ಸಿಂಧೂರ ಲಕ್ಷ್ಮಣ, ಏಕಲವ್ಯ ಅಂತಹ ಮಹಾನ್ ವ್ಯಕ್ತಿಗಗಳು ಇದೇ ಸಮಾಜದಿಂದ ಉದಯಿಸಿ ಸಮಾಜಕ್ಕೆ ಅಪೂರ್ವ ಕಾಣಿಕೆ ನೀಡಿದ್ದಾರೆ ಎಂದು ಸ್ಮರಿಸಿದರು.

ವಾಲ್ಮೀಕಿ ನಾಯಕ ಸಮಾಜವು ತಮ್ಮ ಮೂಲ ಕುಲ ಕಸುಬನ್ನು ಬದಲಾಯಿಸಿಕೊಳ್ಳಬೇಕು, ಸಮಾಜ ಹಿಂದುಳಿ ಯಲು ಸಮಾಜದವರೇ ಕಾರಣರಾಗಿದ್ದಾರೆ ಎಂದರು. ವೀರ ಸಿಂಧೂರ ಲಕ್ಷ್ಮಣನ ಬಗ್ಗೆ ಇರುವ ತಪ್ಪು ಕಲ್ಪನೆ ಹೋಗಬೇಕಿದೆ, ಲಕ್ಷ್ಮಣನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯ ಬೇಕಿದೆ ಎಂದರು.

ಮಾಜಿ ಸಚಿವ ಶಿವನಗೌಡ ನಾಯಕ, ಸಮಾಜ ಸಾಕಷ್ಟು ಸುಧಾರಣೆಯಾಗಿದೆ, ದುಶ್ಚಟಗಳಿಂದ ಹೊರಬಂದು ಶಿಕ್ಷಣ, ಉದ್ಯೋಗಕ್ಕೆ ಆದ್ಯತೆ ನೀಡಬೇಕು ಎಂದ ಸಲಹೆ ಮಾಡಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿಸಿ ಅಂದು ರಜೆ ಘೋಷಿಸಿ ಸಮಾಜಕ್ಕೆ ಮನ್ನಣೆ ನೀಡಿದ್ದಾರೆ ಎಂದರು.

ವಾಲ್ಮೀಕಿ ಸಮಾಜ ಶೋಷಿತ ಮತ್ತು ನೋಂದ ಸಮಾಜದವರಿಗೆ ಆಸೆರೆ ನೀಡಬೇಕು, ಬೇರೆ ಸಮಾಜಕ್ಕೆ ತೊಂದರೆ ನೀಡಬಾರದು, ವಾಲ್ಮೀಕಿ ಸಮಾಜ ಶಾಂತಿ, ನ್ಯಾಯಯುತ ಸಮಾಜವಾಗಿ ಬೆಳೆಯಬೇಕು ಎಂದು ಹೇಳಿದರು.

ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಶಿಕ್ಷಣದಿಂದ ಮಾತ್ರ ಯಾವುದೇ ಸಮಾಜ ಮುಂದೆ ಬರಲು ಸಾಧ್ಯ ಎಂದರು. ಬಾಗಲಕೋಟೆಯಲ್ಲಿ ವಾಲ್ಮೀಕಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ರೂ. 26 ಲಕ್ಷ ಖರ್ಚು ಮಾಡಿರುವುದಾಗಿ ತಿಳಿಸಿದರು. ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ವಿಧಾನ ಪರಿಷತ್ ವಿರೋಧ ಪಕ್ಷದ ಮಾಜಿ ನಾಯಕ ವಿ.ಎಸ್. ಉಗ್ರಪ್ಪ, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ, ಎಂ.ಕೆ. ಪಟ್ಟಣಶೆಟ್ಟಿ, ದೊಡ್ಡ ನಗೌಡ ಪಾಟೀಲ, ವಿಧಾನಪರಿಷತ್ ವಿರೋಧ ಪಕ್ಷದ ಉಪ ನಾಯಕ ಎಸ್.ಆರ್. ಪಾಟೀಲ, ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಶಾಸಕರಾದ ಜೆ.ಟಿ. ಪಾಟೀಲ, ಪಿ.ಎಚ್. ಪೂಜಾರ, ಮಾಜಿ ಸಚಿವರಾದ ಎಚ್.ವೈ. ಮೇಟಿ, ಆರ್.ಬಿ. ತಿಮ್ಮೋಪುರ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಸವಪ್ರಭು ಸರನಾಡಗೌಡ, ಜಿ.ಪಂ. ಅಧ್ಯಕ್ಷೆ ಕವಿತಾ ದಡ್ಡೇನವರ, ಉಪಾಧ್ಯಕ್ಷ ಹೂವಪ್ಪ ರಾಠೋಡ, ಸದಸ್ಯರಾದ ಬಸವಂತಪ್ಪ ಮೇಟಿ, ಪಾಂಡು ಪೊಲೀಸ್, ಶಾಂತಾ ಭೂಷಣ್ಣವರ, ಹನುಮಂತ ನಿರಾಣಿ, ಪ್ರಮುಖರಾದ ಎಸ್. ಎಸ್. ಪಾಟೀಲ, ಶಿವಕುಮಾರ ಮಲಘಾಣ, ಕೆಂಚಪ್ಪ ಅಮರಗೋಳ, ಜ್ಯೋತಿ ಭಜಂತ್ರಿ, ಯಲ್ಲವ್ವ ಗ್ಯಾಟೀನ, ಎಸ್. ಎನ್. ಗೌಡರ, ವೆಂಕಟೇಶ ಪೂಜಾರ, ಸಮಾಜದ ಮುಖಂಡ ಉಮೇಶ ಪೂಜಾರ, ವಾಲ್ಮೀಕಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಶಂಭುಗೌಡ ಪಾಟೀಲ ಮುಂತಾದವರು ವೇದಿಕೆಯಲ್ಲಿ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.