ADVERTISEMENT

ಕನ್ನಡ ನುಡಿ ತೇರು ಸಂಚಾರ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 10:20 IST
Last Updated 4 ಮಾರ್ಚ್ 2011, 10:20 IST

ಬಾಗಲಕೋಟೆ: ಬೆಳಗಾವಿಯಲ್ಲಿ ಮಾ.11ರಿಂದ ಮೂರು ದಿನಗಳವರೆಗೆ ವಿಶ್ವ ಕನ್ನಡ ಸಮ್ಮೇಳನ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕಲೆ, ಸಾಹಿತ್ಯ, ಸಂಗೀತ ಹಾಗೂ ವಾಸ್ತುಶಿಲ್ಪ ಮತ್ತು ಕಲಾ ಪರಂಪರೆಯನ್ನು ಬಿಂಬಿಸುವ ‘ಕನ್ನಡ ನುಡಿ ತೇರು’ ಶುಕ್ರವಾರ(ಮಾ.4)ದಿಂದ ಮಾ.10ರವರೆಗೆ ಜಿಲ್ಲೆಯಾದ್ಯಂತ ಸಂಚರಿಸಲಿದೆ.ಹುನಗುಂದ ತಾಲ್ಲೂಕಿನ ಸುಕ್ಷೇತ್ರ ಕೂಡಲಸಂಗಮದಲ್ಲಿ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ‘ಕನ್ನಡ ನುಡಿ ತೇರು’ ಯಾನಕ್ಕೆ ಚಾಲನೆ ದೊರೆಯಲಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ, ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳು ಹಾಗೂ ಪ್ರಮುಖ ಪಟ್ಟಣಗಳಲ್ಲಿ ನುಡಿ ತೇರು ಸಂಚರಿಸಲಿದೆ ಎಂದರು.
ಕೂಡಲಸಂಗಮದಿಂದ ಆರಂಭಗೊಳ್ಳಲಿರುವ ನುಡಿ ತೇರು ಯಾನ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಸಂಚರಿಸಿದ ಬಳಿಕ ಮಾ.10ರಂದು ತೇರನ್ನು ಲೋಕಾಪುರದಿಂದ ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಬೀಳ್ಕೊಡಲಾಗುವುದು ಎಂದು ವಿವರಿಸಿದರು.

‘ಕನ್ನಡ ನುಡಿ ತೇರು’ ಯಾನದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಸಾಹಿತಿಗಳು, ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು, ವಿವಿಧ ಕಲಾತಂಡಗಳು, ಶಾಲಾ ಮಕ್ಕಳು, ಎನ್‌ಸಿಸಿ ಕೆಡೆಟ್‌ಗಳು, ಎನ್‌ಎಸ್‌ಎಸ್ ಸ್ವಯಂಸೇವಕರು, ಯುವಕ/ಯುವತಿ ಮಂಡಳಿಗಳ ಸದಸ್ಯರು, ಕನ್ನಡಪರ ಸಂಘಟನೆಗಳು ಭಾಗವಹಿಸಲಿದ್ದಾರೆ ಎಂದು ಕುಂಜಪ್ಪ ತಿಳಿಸಿದರು.

“ನುಡಿ ತೇರು ಯಾನಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಒಂದು ಲಕ್ಷ ರೂಪಾಯಿ ಅನುದಾನವನ್ನು ನೀಡಿದೆ. ಉತ್ಸವವನ್ನು ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಹಿನ್ನೆಲೆಯಲ್ಲಿ ಆಯಾ ತಾಲ್ಲೂಕುಗಳಲ್ಲಿ ತಹಸೀಲ್ದಾರ ಅಧ್ಯಕ್ಷತೆಯಲ್ಲಿ ಸಭೆಗಳನ್ನು ನಡೆಸಲಾಗಿದೆ” ಎಂದು ತಿಳಿಸಿದರು.

ಸಮ್ಮೇಳನಕ್ಕೆ 50 ಜನರು
ಕಲೆ, ಸಾಹಿತ್ಯ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಜಿಲ್ಲೆಯ 50 ಜನರನ್ನು ಬೆಳಗಾವಿಯಲ್ಲಿ ಜರುಗಲಿರುವ ವಿಶ್ವ ಕನ್ನಡ ಸಮ್ಮೇಳನದ ಪ್ರತಿನಿಧಿಗಳಾಗಿ ಕಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.“ಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಈ ಐವತ್ತು ಜನರ ನೋಂದಣಿ ಶುಲ್ಕವನ್ನು ಜಿಲ್ಲಾಡಳಿತದಿಂದಲೇ ಭರಿಸಲಾಗುವುದು. ಇದಲ್ಲದೇ ಪ್ರತಿನಿಧಿಗಳನ್ನು ಬೆಳಗಾವಿಗೆ ಕರೆದೊಯ್ಯಲು ಸಾರಿಗೆ ವ್ಯವಸ್ಥೆಯನ್ನೂ ಮಾಡಲಾಗುತ್ತದೆ” ಎಂದರು. ಮಾರ್ಚ್ 11ರಿಂದ ಮೂರು ದಿನಗಳ ಕಾಲ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಇವರು ಭಾಗವಹಿಸಲಿದ್ದಾರೆ.

ದುರ್ಗಾ ದೇವಾಲಯ ರೂಪಕ
ವಿಶ್ವ ಕನ್ನಡ ಸಮ್ಮೇಳನಕ್ಕಾಗಿ ಜಿಲ್ಲೆಯಿಂದ ಐಹೊಳೆಯ ದುರ್ಗಾ ದೇವಾಲಯ ಮಾದರಿಯ ರೂಪಕ ವಾಹನ(ಟ್ಯಾಬ್ಲೋ)ವನ್ನು ತಯಾರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ರೂಪಕವನ್ನು ಜಿಲ್ಲೆಯ ಕಲಾವಿದರು ಬೆಳಗಾವಿಯಲ್ಲಿಯೇ ತಯಾರಿಸುತ್ತಿದ್ದು, ಸಮ್ಮೇಳನದ ಆರಂಭದ ದಿನ ನಡೆಯಲಿರುವ ಮೆರವಣಿಗೆಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಲಿದೆ ಎಂದರು.

ಇದೇ ರೀತಿ ಜಿಲ್ಲೆಯಲ್ಲಿ ಪ್ರಚಲಿತವಿರುವ ಹಲಿಗೆಮೇಳ, ಡೊಳ್ಳುಕುಣಿತ ಹಾಗೂ ಕರಡಿಮಜಲು ತಂಡಗಳು ವಿಶ್ವ ಕನ್ನಡ ಸಮ್ಮೇಳನದ ಮೆರವಣಿಗೆಯಲ್ಲಿ ಭಾಗವಹಿಸಲಿವೆ ಎಂದು ಹೇಳಿದರು.ಲಕ್ಷ್ಮಪ್ಪ ಭಜಂತ್ರಿ ನೇತೃತ್ವದ ಹಲಿಗೆಮೇಳ, ಜಮಖಂಡಿಯ ಬೀರಲಿಂಗೇಶ್ವರ ಡೊಳ್ಳುಕುಣಿತ ತಂಡ ಹಾಗೂ ಮುಧೋಳದ ಕರಡಿಮಜಲು ತಂಡಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ.

‘ಕನ್ನಡ ನುಡಿ ತೇರು’ ಸಂಚರಿಸಲಿರುವ ಮಾರ್ಗಗಳನ್ನು ಸಾರ್ವಜನಿಕರು, ಕನ್ನಡಪರ ಸಂಘಟನೆಗಳು ಹಾಗೂ ಸ್ಥಳೀಯ ವ್ಯಾಪಾರಸ್ಥರು ಕನ್ನಡ ಬಾವುಟಗಳು ಮತ್ತು ತಳೀರುತೋರಣಗಳಿಂದ ಅಲಂಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ತೇರು ಸಂಚರಿಸುವ ರಸ್ತೆಬದಿಯಲ್ಲಿ ಸ್ಥಳೀಯರು ರಂಗೋಲಿಗಳನ್ನು ಹಾಕುವ ಮೂಲಕ ಬೀದಿಗಳನ್ನು ಶೃಂಗರಿಸಬೇಕು ಹಾಗೂ ಮಹಿಳೆಯರು ಪೂರ್ಣ ಕುಂಭಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಜಿ.ಸಿ.ಪ್ರಕಾಶ್ ವಿನಂತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.