ADVERTISEMENT

ಕಬ್ಬು ಬೆಳೆಗಾರರು, ಮಾಲೀಕರ ಸಭೆ 13ಕ್ಕೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 10:05 IST
Last Updated 7 ಸೆಪ್ಟೆಂಬರ್ 2011, 10:05 IST

ಬಾಗಲಕೋಟೆ: ಕಬ್ಬು ಬೆಳೆಗಾರರಿಗೆ ನೀಡಬೇಕಿರುವ ಹಣವನ್ನು ನೀಡದೇ ಸತಾಯಿಸುತ್ತಿರುವ ಬಾದಾಮಿ ತಾಲ್ಲೂಕಿನ ಕೆರಕಲಮಟ್ಟಿಯ ಕೇದಾರ ನಾಥ ಸಕ್ಕರೆ ಕಾರ್ಖಾನೆ ಮಾಲೀಕ ಮತ್ತು ನೊಂದ ಬೆಳೆಗಾರರ ಸಭೆಯನ್ನು ಜಿಲ್ಲಾಧಿಕಾರಿ ಅವರು ಇದೇ 13ರಂದು ನಡೆಸಲು ಉದ್ದೇಶಿಸಿದ್ದಾರೆ.

ಮಂಗಳವಾರ ಭೇಟಿ ಮಾಡಿದ ಕಬ್ಬುಬೆಳೆಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ, ಕಾರ್ಖಾನೆ ಮಾಲೀಕನ ವಿರುದ್ಧ ದೂರು ದಾಖಲಿಸಿದರೆ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ರೈತರ ಕಬ್ಬಿನ ಹಣವನ್ನು ಪಾವತಿ ಸುವವರೆಗೂ ಯಾವುದೇ ಕಾರಣಕ್ಕೂ ಕಾರ್ಖಾನೆಯಲ್ಲಿರುವ ಸಕ್ಕರೆಯನ್ನು ಮಾರಾಟ ಮಾಡಲು ಅವಕಾಶ ನೀಡಬಾರದು ಎಂದು ಬೆಳೆಗಾರರು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿಕೊಂಡರು.

ಇದೇ 5ರಿಂದ ಬೆಳೆಗಾರರಿಗೆ ದಿನಕ್ಕೆ ರೂ. 2ಕೋಟಿಯಂತೆ 10 ದಿನಗಳಲ್ಲಿ ರೂ. 20 ಕೋಟಿ  ನಗದು ಹಣವನ್ನು ನೀಡುವುದಾಗಿ ಭರಸವೆ ನೀಡಿದ್ದ ಕಾರ್ಖಾನೆ ಮಾಲೀಕ ವಿಕ್ರಂ ಸಿಂಗ್ ಅಪರಾಧ ಮತ್ತೊಮ್ಮೆ ಮಾತಿಗೆ ತಪ್ಪಿರು ವುದರಿಂದ ಆಕ್ರೋಶಗೊಂಡಿದ್ದ ನೂರಾರು ರೈತರು ಹಣ ಒದಗಿಸಿ ಕೊಡುವಂತೆ ಜಿಲ್ಲಾಧಿಕಾರಿ ಅವರನ್ನು ಆಗ್ರಹಿಸಿದರು.

ರೈತರ ಪ್ರತಿಭಟನೆ
ಮುಧೋಳ:
ಬಳಿಕ ರೈತರು ಮುಧೋಳದಲ್ಲಿರುವ ಕಾರ್ಖಾನೆಯ ನಿರ್ದೇಶಕ ಸಿದ್ದು ಸೂರ್ವವಂಶಿ ಅವರ ಮನೆ ಎದುರು ಪ್ರತಿಭಟನೆ ನಡೆಸಿದರು.

ಕಾರ್ಖಾನೆ ನಿರ್ದೇಶಕ ಸಿದ್ದು ಸೂರ್ಯವಂಶಿ ಅವರ ನಿವಾಸದ ಎದುರು ರೈತರು ಪ್ರತಿಭಟನೆ ನಡೆಸಿದರು.
ಕಬ್ಬಿನ ಬಾಕಿಯನ್ನು   ತಕ್ಷಣ ಕೊಡಬೇಕು. ಇಲ್ಲವಾದರೆ ಸೂರ್ಯವಂಶಿಯವರ ಮನೆಯ ಮುಂದೆ ಅಡಿಗೆ ಮಾಡಿಕೊಂಡು ಪ್ರತಿಭಟನೆ ನಡೆಸುತ್ತೇವೆ ಎಂದು 50ಕ್ಕೂ ಹೆಚ್ಚು ರೈತರು ಎಚ್ಚರಿಕೆ ನೀಡಿದರು.

ರೈತ ಮುಖಂಡರಾದ ಬಾಬುರೆಡ್ಡಿ, ತುಪ್ಪದ, ನಾರಪ್ಪನವರ, ಭೀಮಪ್ಪ ಹಡಪದ, ಮಾರುತಿ ನಾಡಗೌಡ, ವಿಠ್ಠಲ ಪೂಜಾರ, ಶೆಟ್ಟೆಪ್ಪ ಜಾನಮಟ್ಟಿ, ನಿಂಗಪ್ಪ ಕಮರಿ, ಲಕ್ಷ್ಮಣ ಪೆಂಡಾರಿ, ಅರ್ಜುನ ಮಳಮ್ಮಗೋಳ ಸೇರಿದಂತೆ ಜುನ್ನೂರ, ಮನ್ನಿಕೇರಿ, ಕಂಕಣವಾಡಿ, ಶೆಲ್ಲಿಕೇರಿ, ಇಟ್ನಾಳ ಹಾಗೂ ಹಲವಾರು ಗ್ರಾಮಗಳಿಂದ ರೈತರು ಆಗಮಿಸಿದ್ದರು.

ಸಿಪಿಐ ಸುರೇಶ ರೆಡ್ಡಿ, ಪಿ.ಎಸ್.ಐ ಎಚ್.ಆರ್.ಪಾಟೀಲ, ಲೋಕಾಪುರ ಪಿ.ಎಸ್.ಐ ಆರ್.ಎಸ್.ಚೌಧರಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ಕಾರರನ್ನು ಮನೆಯೊಳಗೆ ನುಗ್ಗದಂತೆ ತಡೆದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.