ADVERTISEMENT

ಕಾಂಗ್ರೆಸ್‌ ಟಿಕೆಟ್ ನನಗೆ ಪಕ್ಕಾ

ಬಾದಾಮಿಯಿಂದ ಸಿದ್ದರಾಮಯ್ಯ ಸ್ಪರ್ಧೆ ಊಹಾಪೋಹ: ಚಿಮ್ಮನಕಟ್ಟಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 5:43 IST
Last Updated 5 ಏಪ್ರಿಲ್ 2018, 5:43 IST

ಗುಳೇದಗುಡ್ಡ: ‘ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ. ನನಗೇ ಟಿಕೆಟ್ ಸಿಗಲಿದೆ. ಏಪ್ರಿಲ್‌ 20ರಂದು ಬಿ ಫಾರ್ಮ್‌ ಸಿಗಲಿದೆ. ಪಕ್ಷ ನನ್ನ ಬಿಟ್ಟು ಬೇರೆ ಯಾರಿಗೂ ಟಿಕೆಟ್ ಕೊಡುವುದಿಲ್ಲ. ಹಾಗಾಗಿ ಕಾರ್ಯಕರ್ತರು ಗೊಂದಲಕ್ಕೀಡಾಗಬಾರದು. ಸುಳ್ಳು ಸುದ್ದಿಗಳಿಗೆ ತಲೆಕೆಡಿಸಿಕೊಳ್ಳಬಾರದು’ ಎಂದು ಶಾಸಕ ಬಿ.ಬಿ. ಚಿಮ್ಮನಕಟ್ಟಿ ಮನವಿ ಮಾಡಿದರು.ಪಕ್ಷದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ಟಿಕೆಟ್‌ ನೀಡುವುದಾಗಿ ಹೇಳಿದ್ದಾರೆ. ಪಕ್ಷದ ಹೈಕಮಾಂಡ್‌ಗೆ ಈಗಾಗಲೇ ನನ್ನ ಹೆಸರು ಶಿಫಾರಸು ಮಾಡಲಾಗಿದೆ. ನನ್ನ ಆರೋಗ್ಯ ಸರಿಯಾಗಿಯೇ ಇದೆ. ನನಗೇನೂ ಆಗಿಲ್ಲ. ಟಿಕೆಟ್ ಸಿಗುವುದು ಪಕ್ಕಾ’ ಎಂದರು.

‘ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ತಳ ಮಟ್ಟದಿಂದ ಸಂಘಟನೆ ಮಾಡಿದ್ದೇನೆ. ಪಕ್ಷದ ಕಚೇರಿಯಲ್ಲಿ ಕಸಗುಡಿಸಿದ್ದೇನೆ. ಐದು ಬಾರಿ ಶಾಸಕ, ಸಚಿವನಾಗಿ ಬಾದಾಮಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದೇನೆ’ ಎಂದರು.‘ಬಾದಾಮಿ ಮತಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಾರೆ ಎಂದು ಆಗದವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಮುಖ್ಯಮಂತ್ರಿ ಬಾದಾಮಿಗೆ ಬಂದು ನಿಲ್ಲುವುದಿಲ್ಲ. ಅವರು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಇಂತಹ ಸುಳ್ಳು ಸುದ್ದಿಗೆ ಯಾರು ಕಿವಿಗೊಡಬಾರದು’ ಎಂದರು.

ಸುದ್ದಿಗೋಷ್ಠಿಯಲ್ಲಿ ಬಾದಾಮಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಡಿ. ಯಲಿಗಾರ, ಗುಳೇದಗುಡ್ಡ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ರಾಜು ಜವಳಿ, ಪುರಸಭೆ ಮಾಜಿ ಅಧ್ಯಕ್ಷ ಅಡಿವೆಪ್ಪ ತಾಂಡೂರ, ಜಮೀರ್ ಮೌಲ್ವಿ, ಈಶಪ್ಪ ರಾಜನಾಳ, ವೈ.ಆರ್. ಹೆಬ್ಬಳ್ಳಿ, ಚಿದಾನಂದ ಸಾ ಕಾಟವಾ, ಡಾ.ಬಿ.ವೈ.ಗೌಡರ, ಸಂಗಪ್ಪ ಚಟ್ಟೆರ, ಡಾ, ಬಸವರಾಜ ಕೋಲಾರ, ಶಶಿಧರ ಬಿಜ್ಜಳ, ಸಂಗನಬಸಪ್ಪ ಚಿಂದಿ, ಪ್ರಕಾಶ ಮುರಗೋಡ, ರಮೇಶ ಬೂದಿಹಾಳ, ಭೀಮಸಿ ಮುಸಿಗೇರಿ ಇದ್ದರು.

ADVERTISEMENT

ಕಾರ್ಯಕರ್ತರ ಸಭೆ ಇಂದು..

ಬಾದಾಮಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಇದೇ 5 ರಂದು ಕಾಳಿದಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕರೆಯಲಾಗಿದೆ. ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಪುರಸಭೆ, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಎಂದು ಬಾದಾಮಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಡಿ.ಯಲಿಗಾರ ಹೇಳಿದರು.

**

ಬಾದಾಮಿಯಿಂದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಬಂದು ನಿಂತರೂ ತೊಂದರೆ ಇಲ್ಲ. ನಾನೇ ಗೆಲ್ಲುತ್ತೇನೆ – ಬಿ.ಬಿ.ಚಿಮ್ಮನಕಟ್ಟಿ, ಶಾಸಕ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.