ADVERTISEMENT

‘ಕಾಮಗಾರಿ ಆಯ್ಕೆಯಲ್ಲಿ ತಾರತಮ್ಯ’

ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ: ₹1.20 ಕೋಟಿ ಟೆಂಡರ್ ರದ್ದುಪಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 9:22 IST
Last Updated 9 ಜೂನ್ 2018, 9:22 IST

ಬೀಳಗಿ: ಕಾಮಗಾರಿಗಳ ಆಯ್ಕೆಯಲ್ಲಿ ತಾರತಮ್ಯ ಮಾಡುತ್ತಿರುವುದರಿಂದ ಪಟ್ಟಣದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಒಳಚರಂಡಿಯ ಕಾಮಗಾರಿಯ ₹1.20 ಕೋಟಿ ಮೊತ್ತದ ಟೆಂಡರ್ ಅನ್ನು ರದ್ದುಪಡಿಸಿ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಗುರಪ‍್ಪ ಮೋದಿ ಒತ್ತಾಯಿಸಿದರು.

ಪಟ್ಟಣ ಪಂಚಾಯ್ತಿಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ 2ನೇಯ ವಾರ್ಡಿನಲ್ಲಿ ರಸ್ತೆಗಳು ಹಾಳಾಗಿವೆ. ಚರಂಡಿ ವ್ಯವಸ್ಥೆಯೂ ಹದಗೆಟ್ಟಿದೆ. ಆದರೂ ಅದನ್ನು ಸರಿಪಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಏಕೆ ಈ ರಸ್ತೆ ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಬರುವುದಿಲ್ಲವೇ ಎಂದು ಅವರು ಪ್ರಶ್ನಿಸಿದರು.

‘ಸ್ಥಗಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸರಿಪಡಿಸಬೇಕು. ಎಲ್ಲ ವಾರ್ಡ್‌ಗಳ ಅಭಿವೃದ್ಧಿ ಕಡೆಗೆ ಗಮನ ನೀಡಬೇಕು. ಸಮಸ್ಯೆಗಳು ಇದ್ದಾಗ ಕೂಡಲೇ ಸ್ಪಂದಿಸಬೇಕು’ ಎಂದು ಅವರು ಆಗ್ರಹಿಸಿದರು.

ADVERTISEMENT

ಸದಸ್ಯ ಅನೀಲ ಗಚ್ಚಿನಮನಿ ಮಾತನಾಡಿ, ‘ಪಟ್ಟಣದ ಕೆಲವೊಂದು ವಾರ್ಡ್‌ಗಳ ರಸ್ತೆಗಳಲ್ಲಿ ಮರ್ಕ್ಯೂರಿ ಬೀದಿದೀಪಗಳನ್ನು ಅಳವಡಿಸಿಲ್ಲ. ಪರಿಣಾಮ ರಾತ್ರಿ ವೇಳೆ ಜನರು ಓಡಾಡಲು ತೊಂದರೆ ಆಗಿದೆ. ಮರ್ಕ್ಯೂರಿ ದೀಪಗಳನ್ನು ಹಾಕಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು. ಕೆಲ ವಾರ್ಡ್‌ಗಳಲ್ಲಿ ಸರಿಯಾಗಿ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ಈ ಬಗ್ಗೆಯೂ ಗಮನಹರಿಸಬೇಕು’ ಎಂದರು.

ಅವಧಿ ಮುಗಿಯುತ್ತಾ ಬಂದರೂ ವಾರ್ಡಿನ ಅಭಿವೃದ್ಧಿಗೆ ಅಧಿಕಾರಿಗಳು ಸರಿಯಾಗಿ ಸಹಕಾರ ಕೊಡಲಿಲ್ಲ. ಈಗಲಾದರೂ ಅಧಿಕಾರಿಗಳು ಸ್ಪಂದಿಸದೆ ಇದ್ದರೆ ಜನರಿಗೆ ನಾವೇನು ಉತ್ತರ ನೀಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ ಸದಸ್ಯ ರೆಹಮಾನ್ ಬಾಗವಾನ್, ಹೀಗೆ ಆದರೆ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಹೇಳಿ ಸಭೆಯಿಂದ ಹೊರ ನಡೆದರು.

ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಕಸ್ತೂರಿ ಮಾದರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಇಂದ್ರವ್ವ ಕವಲಗಿ, ಮುಖ್ಯಾಧಿಕಾರಿ ಎಚ್.ಎಸ್ ಚಿತ್ತರಗಿ, ಸಂಗಪ್ಪ ಕಟಗೇರಿ, ದಯಾನಂದ ಶಂಬೋಜಿ, ಸಿದ್ದು ಮಾದರ, ಪಡಿಯಪ್ಪ ಕರಿಗಾರ, ರೆಹಮಾನ ಬಾಗವಾನ್, ಕವಿತಾ ಬಾಗೇವಾಡಿ, ಚಿನ್ನಪ್ಪ ಬಂಡಿವಡ್ಡರ, ಸಂತೋಷ ಕೊಲಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.