ADVERTISEMENT

ಕಾಲುವೆ ಒಡೆದು ಹೊಲಕ್ಕೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 9:15 IST
Last Updated 2 ಜನವರಿ 2012, 9:15 IST

ಬೀಳಗಿ:  ತಾಲ್ಲೂಕಿನ ಕಾತರಕಿ ಉಪ ವಿಭಾಗೀಯ ವ್ಯಾಪ್ತಿಯಲ್ಲಿ ಜಿ.ಎಲ್. ಬಿ.ಸಿ. ಕಾಲುವೆ ಒಡೆದು ಹೋಗಿ ನೀರಿಲ್ಲದೇ ಫಸಲು ಒಣಗಿ ಹೋಗುವ ಸ್ಥಿತಿ ನಿರ್ಮಾಣಗೊಂಡಿದೆ. ದಕ್ಷಿಣ ಶಾಖಾ ಕಾಲುವೆಯ ಮೇಲ್ಭಾಗದಲ್ಲಿ 7ನೇ ಕಿ.ಮೀ. ಹತ್ತಿರ ನಾಲ್ಕು ದಿನಗಳ ಹಿಂದೆಯೇ 60 ಮೀ. ನಷ್ಟು ಮುಖ್ಯ ಕಾಲುವೆಯೇ ಒಡೆದು ಹೋಗಿದ್ದು ದುರಸ್ತಿಯಾಗುವವರೆಗೆ ಕಾಲುವೆಯಲ್ಲಿ ನೀರು ಹರಿಸುವಂತಿಲ್ಲ.

ಹೀಗಾಗಿ ದಕ್ಷಿಣ ಶಾಖಾ ಕಾಲುವೆಯಿಂದ ನೀರಾವರಿಗೊಳಪಡುವ ಕಾತರಕಿ ಉಪ ವಿಭಾಗದ 35 ಕಿ.ಮೀ., ಬೀಳಗಿ ಉಪ ವಿಭಾಗೀಯ ವ್ಯಾಪ್ತಿಯ 15 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಸುಮಾರು 15ರಿಂದ 20 ಸಾವಿರ ಎಕರೆ ಜಮೀನುಗಳ ಬೆಳೆಗಳು ನೀರಿಲ್ಲದೇ ಒಣಗಿ ಹೋಗುವ ಭೀತಿಯುಂಟಾಗಿದೆ. ರೈತರಲ್ಲಿ ಆತಂಕ ಸೃಷ್ಟಿಸಿದೆ.

ಬೀಳಗಿ ಶಾಖಾ ಕಾಲುವೆ ಹಾಗೂ ದಕ್ಷಿಣ ಶಾಖಾ ಕಾಲುವೆಗಳು ಕವಲೊಡೆಯುವ ಕೇಂದ್ರ ಸ್ಥಾನದಲ್ಲಿ ದಕ್ಷಿಣ ಶಾಖಾ ಕಾಲುವೆಗೆ 208 ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದ್ದು ಅದರಲ್ಲಿ ಕಾತರಕಿ ಉಪ ವಿಭಾಗವು 136 ಕ್ಯೂಸೆಕ್ ನೀರನ್ನೂ, ಬೀಳಗಿ ಉಪ ವಿಭಾಗವು 72 ಕ್ಯೂಸೆಕ್ ನೀರನ್ನೂ ಹಂಚಿಕೊಳ್ಳುತ್ತವೆ. ಈಗ ಎರಡೂ ಉಪವಿಭಾಗೀಯ ವ್ಯಾಪ್ತಿಯ 50 ಕಿ.ಮೀ. ಉದ್ದದ ಕಾಲುವೆ ಒಣಗಿ ನಿಂತಿದೆ.

ಬೆಳೆಗಳು ಕಾಳು ಕಟ್ಟುವ ಸಮಯದಲ್ಲಿಯೇ ನೀರು ತಪ್ಪುವದರಿಂದ ಬೆಳೆಗಳು ಕಾಳು ಕಟ್ಟದೇ ಕೈಗೆ ಬಂದಿದ್ದು ಬಾಯಿಗೆ ಬರದಂತಾಗಿದೆ ಎಂದು ಆತಂಕಕ್ಕೊಳಗಾದ ರೈತರು ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ಮುಗಿಸಿ ಕಾಲುವೆಗೆ ನೀರು ಹರಿಸಿ ಫಸಲುಗಳನ್ನು ಉಳಿಸಿಕೊಡಬೇಕೆಂದು ಒತ್ತಾಯಿ ಸುತ್ತಾರೆ.

ಸ್ಥಳಕ್ಕೆ ಜಮಖಂಡಿ ವೃತ್ತದ ಸುಪರಿಂಟೆಂಡೆಂಟ್ ಎಂಜಿನಿಯರ್ ಭೆಟ್ಟಿ ನೀಡಿ ದುರಸ್ತಿ ಕಾರ್ಯವನ್ನು ಶೀಘ್ರವೇ ಮುಗಿಸಲು ಸೂಚಿಸಿದ್ದರೂ ದುರಸ್ತಿ ಕಾರ್ಯ ಕನಿಷ್ಠ ಹತ್ತು ದಿನಗಳಷ್ಟಾದರೂ ಹಿಡಿಯುತ್ತದೆಂದು ಅಧಿಕಾರಿಗಳು ಹೇಳುತ್ತಾರೆ. ಜೊತೆಗೆ ದುರಸ್ತಿ ಕಾರ್ಯಕ್ಕೆ ಬೇಕಾಗಿರುವ ಗರಸು ಸಮೀಪದಲ್ಲಿ ಸಿಕ್ಕದೇ ಇರುವದರಿಂದ ಹಾಗೂ ದೂರದಿಂದ ತರಬೇಕಾಗಿ ರುವದರಿಂದ ದುರಸ್ತಿ ಕಾರ್ಯ ಸ್ವಲ್ಪ ತಡವಾಗ ಬಹುದೆನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.