ADVERTISEMENT

ಕುಸ್ತಿ: ಗೋಲ್ಡನ್ ಸಿಂಗ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 6:40 IST
Last Updated 10 ಫೆಬ್ರುವರಿ 2012, 6:40 IST

ಅಮೀನಗಡ : ಸೂಳೇಭಾವಿಯ ಬನಶಂಕರಿದೇವಿ ಜಾತ್ರಾಮಹೋತ್ಸವ ಅಂಗವಾಗಿ ಗ್ರಾಮದ ಮಾರುತೇಶ್ವರ ಯುವಕ ಸಂಘವು ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಜರುಗಿತು.

ಬೆಳಗಾವಿಯ ದರ್ಗಾ ತಾಲೀಮನ ಶಾಂತಪ್ಪ ಸನಾಳ ಮತ್ತು  ಕೊಲ್ಹಾಪುರ  ಗಂಗಾವೇಶ ತಾಲೀಮನ ಆನಂದ ಫಲಕೆ ಆಲಗೂರ, ಬೆಳಗಾವಿ ಕ್ರೀಡಾ ಶಾಲೆಯ ರವಿ ಕೆಂಪಣ್ಣವರ ಮತ್ತು ಜಮಖಂಡಿ ರತನ ಮಠಪತಿ ಕುಸ್ತಿ ಅಖಾಡದ ಗೋಪಾಲ ಆಡಾಳಟ್ಟಿ ಅವರ ನಡುವೈ ಟೈ ಆಯಿತು.

ಬೆಳಗಾವಿಯ ದರ್ಗಾ ತಾಲೀಮ್‌ನ ಅಪ್ಪು ಅಡಾಳಟ್ಟಿ ಮತ್ತು ಸಾಂಗ್ಲಿಯ ಸಂಭಾಜಿ ಪವಾರ ತಾಲೀಮ್‌ನ ನಾಥಾ ಪಾಲವೆ ನಡುವೆ ಒಂದು ಗಂಟೆಗೆ ವರೆಗೆ ಕುಸ್ತಿ ನಡೆಯಿತು. ಇಬ್ಬರ ನಡುವೆ ಸಮಾನ ಪೈಪೋಟಿ ನಡೆದ ಪರಿಣಾಮ ಈ ಕುಸ್ತಿಯನ್ನು ಸಮ ಎಂದು ಘೋಷಿಸಲಾಯಿತು.

ರಾಷ್ಟ್ರ ಮಟ್ಟದ ಕುಸ್ತಿಯಲ್ಲಿ ಖ್ಯಾತಿ ಪಡೆದ ಗೋಲ್ಡನ್ ಸಿಂಗ್ ಪಂಜಾಬ ಮತ್ತು  ಕೊಲ್ಹಾಪುರ ಮಹಾರಾಷ್ಟ್ರ ಚಾಂಪಿಯನ್ ಕಪೀಲ ಸನಗರ ನಡುವೆ ಒಂದು ಗಂಟೆ ವರೆಗೆ ಕುಸ್ತಿ ನಡೆಯಿತು. ಕೊನೆಯ ಹಂತದಲ್ಲಿ  ಪಂಜಾಬನ ಗೋಲ್ಡನ್ ಸಿಂಗ್ ಅವರು ಕಪೀಲ ಸನಗರ ವಿರುದ್ಧ  ಗೆಲವು ಸಾಧಿಸಿದರು.

ಜಮಖಂಡಿಯ ಭೀಮು ಜೀರಗಾಳರನ್ನು ಬೆಳಗಾವಿ ವಿಠ್ಠಲ ಬೇವಿನಮಟ್ಟಿ ಸೋಲಿಸಿದರು. ಜಮಖಂಡಿಯ ರಾಜೇಂದ್ರ ಮಠಪತಿಯನ್ನು  ಗುರಪ್ಪ ಹಾರೂಗೇರಿ ಪರಾಭವಗೊಳಿಸಿದರು.

ಜಮಖಂಡಿ ಆನಂದ ಹುನ್ನೂರರನ್ನು ಜಗದೀಶ ಸತ್ತಿ  ಮಣಿಸಿದರು.  ಸಿದ್ದಪ್ಪ ಸಿರಗುಂಪಿ ಅವರು ಶಿವಪ್ಪ ದಂಡಿನ ಅವರಿಗೆ ಆಕಾಶ ತೋರಿಸಿದರು.  ಸುಮಾರು 60ಕ್ಕೂ ಹೆಚ್ಚು ಕುಸ್ತಿ ಪಟುಗಳು  ಪಂದ್ಯದಲ್ಲಿ ಭಾಗವಹಿಸಿದ್ದರು. 

ಅಂತರ ರಾಷ್ಟ್ರೀಯ ಕುಸ್ತಿ ಪಟು ರತನ ಮಠಪತಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಇದಕ್ಕೂ ಮುನ್ನ ಅಮೀನಗಡ ಪ್ರಭುಶಂಕರೇಶ್ವರಮಠದ ಶಂಕರರಾಜೇಂದ್ರ ಸ್ವಾಮೀಜಿ ಕುಸ್ತಿ ಅಖಾಡಕ್ಕೆ ಪೂಜೆ ಸಲ್ಲಿಸುವ ಮೂಲಕ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು.
 
ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ಜಾತ್ರಾ ಕಮಿಟಿ ಅಧ್ಯಕ್ಷ ಆರ್.ಪಿ.ಕಲಬುರ್ಗಿ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಹೇಮಂತ ಬಾರಕೇರ್, ತಾ.ಪಂ. ಸದಸ್ಯ ಚಿದಾನಂದ ದೂಪದ, ಗ್ರಾ.ಪಂ. ಅಧ್ಯಕ್ಷ ವೀರಯ್ಯ ಲೂತಿಮಠ, ಉಪಾಧ್ಯಕ್ಷ  ಕಾಸೀಮಸಾಬ ಬೂದಿಹಾಳ, ಮಾಜಿ ಅಧ್ಯಕ್ಷ ಪಿಡ್ಡಪ್ಪ  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.