ADVERTISEMENT

ಕೆಟ್ಟ ಚಟಗಳಿಗೇ ‘ಚಟ್ಟ’ಕಟ್ಟಿದ ಜನತೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2014, 10:06 IST
Last Updated 27 ಫೆಬ್ರುವರಿ 2014, 10:06 IST
ದುಶ್ಚಟಗಳಿಗೆ ವಿದಾಯ ಹೇಳಿ ಹೊಸ ಬದುಕು ಕಂಡುಕೊಂಡಿರುವ ಕಾಗನೂರಿನ ಕೆ.ನಾಗಭೂಷಣ.
ದುಶ್ಚಟಗಳಿಗೆ ವಿದಾಯ ಹೇಳಿ ಹೊಸ ಬದುಕು ಕಂಡುಕೊಂಡಿರುವ ಕಾಗನೂರಿನ ಕೆ.ನಾಗಭೂಷಣ.   

ಹೂವಿನಹಡಗಲಿ: ಸ್ಥಗಿತಗೊಂಡಿದ್ದ ಜಾತ್ರೆಯ ಪುನಾ­ರಂಭಕ್ಕಾಗಿ ದುಶ್ಚಟಗಳಿಗೆ ವಿದಾಯ ಹೇಳುವ ಗ್ರಾಮಸ್ಥರ ಸಂಕಲ್ಪದಿಂದ ತಾಲ್ಲೂಕಿನ ಕಾಗನೂರು ಈಗ ‘ಅಮಲು ಮುಕ್ತ’ ಗ್ರಾಮವಾಗಿದೆ.

23 ವರ್ಷಗಳ ಹಿಂದೆ ಮದ್ಯದ ಅಮಲಿನಲ್ಲಿ ಗುಂಪುಗಳ ನಡುವೆ ನಡೆದಿದ್ದ ಗಲಾಟೆ ಹಿನ್ನೆಲೆ­ಯಲ್ಲಿ ಸ್ಥಗಿತಗೊಂಡಿದ್ದ ಜಾತ್ರೆ, ಮದ್ಯಪಾನವನ್ನು ನಿಷೇಧಿಸುವ ದೃಢ ಸಂಕಲ್ಪದೊಂದಿಗೆ ಮತ್ತೆ ಆರಂಭವಾಗಿದೆ.

ಎರಡು ದಶಕಗಳಿಂದ ನಡೆಯದಿದ್ದ ಊರ ಜಾತ್ರೆಯನ್ನು ಪುನರ್ ಆರಂಭಿಸುವ ಕುರಿತು ಗ್ರಾಮಸ್ಥರು  ಹೊನ್ನಾಳಿ ಹಿರೇಕಲ್ಮಠದ ಒಡೆ­ಯರ್ ಚಂದ್ರಶೇಖರ ಸ್ವಾಮೀಜಿ ಮತ್ತು ಹಿರಿಯ ಮುಖಂಡ  ಜಿ.ಎಂ. ಗುರುಪಾದಸ್ವಾಮಿ ಸಲಹೆ ಮೇರೆಗೆ ಮದ್ಯ, ಮಟ್ಕಾ, ಇಸ್ಪೀಟ್ ತ್ಯಜಿಸಲು ಸಹಮತ ವ್ಯಕ್ತಪಡಿಸಿ ಜಾತ್ರೆ ಆರಂಭಿಸಿದ್ದಾರೆ.

ದುಶ್ಚಟಗಳನ್ನು ವರ್ಜಿಸಿರುವ ಗ್ರಾಮದ ಜನ, 2012ರಿಂದ  ಜಾತ್ರೆಯನ್ನು ಅರ್ಥಪೂರ್ಣವಾಗಿ ಮತ್ತೆ ಆಚರಿಸುತ್ತಿದ್ದಾರೆ.
ಫೆ. 27ರಂದು ಮಹಾಶಿವರಾತ್ರಿ ಅಂಗವಾಗಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಸ್ವಾಮಿಯ ರಥ ಎಳೆಯಲು ಗ್ರಾಮಸ್ಥರು ಸೌಹಾರ್ದತೆಯಿಂದ  ಸಜ್ಜಾಗಿದ್ದು, ದುಷ್ಚಟಗಳಿಗೆ ಕಡಿವಾಣ ಬಿದ್ದಿರುವುದರಿಂದ ಗ್ರಾಮದಲ್ಲಿ  ಆರ್ಥಿಕ, ಸಾಮಾಜಿಕ  ಬದಲಾವನೆಗೆ ಕಾರಣವೂ ಆಗಿದೆ.

ಕುಡಿತದಿಂದಾಗಿ ಪ್ರತಿದಿನ ಊರಿನಲ್ಲಿ ಕಲಹ, ಅಶಾಂತಿ ಹೆಚ್ಚಿ, ಪರಸ್ಪರ ದ್ವೇಷ, ಅಸೂಯೆ ಮನೆ ಮಾಡಿತ್ತು. ಶ್ರಮಜೀವಿಗಳೇ ಇರುವ ಊರನ್ನು ಸುಧಾರಿಸಬೇಕು ಎಂಬ ಯೋಚನೆ ಇತ್ತು.  ಜಾತ್ರೆ ಮರು ಆರಂಭಿಸುವ ನೆಪದಲ್ಲಿ ದುಶ್ಚಟ ತ್ಯಜಿಸಿರುವುದರಿಂದ  ಗ್ರಾಮ ಬದಲಾವಣೆ ಕಂಡಿದೆ ಎಂದು ಜಿ.ಎಂ. ಗುರುಪಾದಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮದ 200 ಕುಟುಂಬಗಳಲ್ಲಿ ಶೇ 80ಕ್ಕೂ ಹೆಚ್ಚು ಜನ ಲಿಂಗ ತಾರತಮ್ಯವಿಲ್ಲದೆ ಕುಡಿತಕ್ಕೆ ದಾಸರಾಗಿದ್ದರು. ನಿತ್ಯ ಹೊಲ, ಗದ್ದೆಗಳಲ್ಲಿ ದುಡಿಯುವ ಮಹಿಳೆಯರು, ಪುರುಷರು ರಾತ್ರಿಯಾದೊಡನೆ ಸಮಾನವಾಗಿ ಮದ್ಯಾರಾಧನೆಯಲ್ಲಿ ತೊಡಗುತ್ತಿದ್ದರು. ಅಂತೆಯೇ ಗ್ರಾಮದ 8 ಅಂಗಡಿಗಳಲ್ಲಿ  ಪ್ರತಿದಿನ ₨ 25000 ಮೌಲ್ಯದ ಮದ್ಯ ಮಾರಾಟವಾಗುತ್ತಿತ್ತು. ₨ 10000ದಷ್ಟು ಮಟ್ಕಾ ಅಡ್ಡೆಗೆ ಸೇರುತ್ತಿತ್ತು. ಆದರೆ, ಕಳೆದ 2 ವರ್ಷಗಳಿಂದ ಗ್ರಾಮಸ್ಥರು ಧಾರ್ಮಿಕ ನಂಬಿಕೆಯೊಂದಿಗೆ ದುಶ್ಚಟ ತ್ಯಜಿಸಿದ್ದು, ಪರಿವರ್ತನೆಯ ಯುಗ ಆರಂಭವಾಗಿದೆ ಎಂದು ಯುವಕ ನರೇಶ ಹೇಳುತ್ತಾರೆ.

‘ಕುಡಿತದ ಚಟಕ್ಕೆ ಹಣ ಸಾಲದೇ ನನ್ನ ಹೊಲವನ್ನು ಬೇರೆಯವರಿಗೆ ಗುತ್ತಿಗೆ ನೀಡುತ್ತಿದ್ದೆ. ಮದ್ಯ ಸೇವನೆ ಬಿಟ್ಟ ನಂತರ ಬೇರೆಯವರ ಹೊಲವನ್ನು ಗುತ್ತಿಗೆ ಪಡೆದಿದ್ದೇನೆ. ಮನೆ ಕಟ್ಟಿಸಿದ್ದೇನೆ. ನನ್ನಂತೆ ಗ್ರಾಮದ ಅನೇಕರು ಬದಲಾಗಿದ್ದು, ಚಿನ್ನ, ಆಸ್ತಿ– ಪಾಸ್ತಿ ಖರೀದಿಸಿದ್ದಾರೆ’ ಎಂದು ಕೊಟ್ನಿಕಲ್ ನಾಗಭೂಷಣ ತಮ್ಮ ಅನುಭವ ಹಂಚಿಕೊಂಡರು.

ಸ್ವಾವಲಂಬನೆಗೂ ನೆರವು: ‘2 ವರ್ಷಗಳಿಂದ ಆಚರಿಸಲಾದ ಜಾತ್ರಯಲ್ಲಿ ದೇವಸ್ಥಾನದಲ್ಲಿ ಸಂಗ್ರಹವಾದ ದೇಣಿಗೆ ಹಣವನ್ನು ಹೈನುಗಾರಿಕೆ, ಕುರಿ ಸಾಕಾಣಿಕೆ ಮತ್ತು ಕೃಷಿ ಸಾಲವಾಗಿ ಗ್ರಾಮಸ್ಥರಿಗೆ ನೀಡಲಾಗುತ್ತಿದ್ದು, ಅಸಲು, ಬಡ್ಡಿ ಸೇರಿ ₨ 5 ಲಕ್ಷ  ಕೂಡಿದೆ. ಗ್ರಾಮದ ಬಡವರ ಸ್ವಾವಲಂಬನೆಗಾಗಿ ಬಳಕೆಯಾದ ಈ ಹಣದಲ್ಲಿ ಶ್ರೀ ಶಿವಲಿಂಗೇಶ್ವರ ಸ್ವಾಮಿಯ ನೂತನ ರಥ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದೇವೆ’ ಎಂದು ಗ್ರಾಮದ ಮುಖಂಡ ಹೊಟ್ಟಿ ಹನುಮಂತಪ್ಪ ಹೇಳಿದರು.

ಜಾತ್ರೆ ನೆಪದಲ್ಲಿ ಕಾಗನೂರು ಗ್ರಾಮದ ಜನರು ದುಶ್ಚಟಗಳಿಂದ ದೂರವಾಗಿ ಹೊಸ ಬದುಕಿನತ್ತ ಮುಖ ಮಾಡಿರುವುದು ಪಕ್ಕದ ಕೋಯ್ಲಾರಗಟ್ಟಿ ಗ್ರಾಮದವರ ಆಸಕ್ತಿ ಕೆರಳಿಸಿದ್ದು, ಅವರೂ ದುಶ್ಚಟ ತ್ಯಜಿಸುವತ್ತ ಆಲೋಚಿಸುತ್ತಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.