ADVERTISEMENT

ಗಣೇಶ ಚತುರ್ಥಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 9:25 IST
Last Updated 11 ಸೆಪ್ಟೆಂಬರ್ 2013, 9:25 IST

ಬಾಗಲಕೋಟೆ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಸಡಗರ ಸಂಭ್ರಮ, ಭಕ್ತಿ ಭಾವದಿಂದ ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ. 

ಗಣೇಶ ಹಬ್ಬದ ಅಂಗವಾಗಿ ಸಾರ್ವಜನಿಕರು ಸೋಮವಾರ ವಿವಿಧ ಯುವಕ ಮಂಡಳಿ, ಸಂಘ ಸಂಸ್ಥೆಗಳ ಸದಸ್ಯರು ವಾದ್ಯ, ವೈಭವ, ನೃತ್ಯದೊಂದಿಗೆ ಮೆರವಣಿಗೆ ಮೂಲಕ ಗಣೇಶನ ಮೂರ್ತಿಗಳನ್ನು ಟ್ರ್ಯಾಕ್ಟರ್, ಆಟೊ, ಟಂಟಂ, ಎತ್ತಿನ ಗಾಡಿಯಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ದೃಶ್ಯ ಗಮನ ಸೆಳೆಯಿತು.

ಮೆರವಣಿಗೆ ಸಂದರ್ಭದಲ್ಲಿ ರಸ್ತೆ­ಯು­ದ್ದಕ್ಕೂ ಯುವಕರು ಮತ್ತು ಚಿಣ್ಣರು ಪಟಾಕಿಗಳನ್ನು ಸಿಡಿಸಿ, ಗುಲಾಲು ಎರಚಿ ಕುಣಿದು ಸಂಭ್ರಮಿಸಿದರು.

ಗಣೇಶ ಹಬ್ಬದ ಪ್ರಯುಕ್ತ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಸಾರ್ವಜನಿಕರು ಗಣೇಶನಿಗೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರು.

ಮನೆಗಳಲ್ಲಿ ಹಾಗೂ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಕೆಲವು ಮೂರ್ತಿಗ­ಳನ್ನು ಸೋಮವಾರ ಸಂಜೆಯೇ ವಿಸರ್ಜಿಸಲಾಯಿತು. ಸಾರ್ವ­ಜನಿಕವಾಗಿ ಪ್ರತಿಷ್ಠಾಪಿಸಲಾಗಿ­ರುವ ಗಣಪತಿ ಮೂರ್ತಿಗಳನ್ನು ಐದು, ಏಳು ಮತ್ತು  ಒಂಬತ್ತನೇ ದಿನ ವಿಸರ್ಜನೆ ಮಾಡುವುದು ಸಂಪ್ರದಾಯವಾಗಿದೆ.

ಸಾರ್ವಜನಿಕ ಗಣಪನ ವಿಸರ್ಜನೆಗೆ ನಗರದ ಮಹಾರುದ್ರಪ್ಪನ ಹಳ್ಳ ಮತ್ತು ಸಿಮೆಂಟ್‌ ಕ್ವಾರಿ ಬಳಿ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ವ್ಯವಸ್ಥೆ ಮಾಡಲಾಗಿದೆ.

ಹಬ್ಬದ ಅಂಗವಾಗಿ ಸಂಭ್ರಮಕ್ಕೆ ಯಾವುದೇ ರೀತಿಯ ತೊಂದರೆಯಾಗ­ದಂತೆ ಪೊಲೀಸರು ಬಂದೋಬಸ್ತ್‌ ಏರ್ಪಡಿಸಿದ್ದರು.

ಗಣೇಶ ಪ್ರತಿಷ್ಠಾಪನೆ
ಗುಳೇದಗುಡ್ಡ: ನಗರದಲ್ಲಿ ಗಣೇಶ ಹಬ್ಬದ ಅಂಗವಾಗಿ ಸೋಮವಾರ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಮತ್ತು ಮನೆ ಮನೆಗಳಲ್ಲಿ ಹಿರಿಯರು ಯುವಕರು ಸಡಗರ ಸಂಭ್ರಮದೊಂದಿಗೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಯುವಕರು ಹಿರಿಯರು ಗಣೇಶ ಮೂರ್ತಿಗಳನ್ನು ಸಕಲ ವಾದ್ಯ ವೈಭವಗಳೊಂದಿಗೆ ಟ್ರ್ಯಾಕ್ಟರ್, ಚಕ್ಕಡಿ, ಸಣ್ಣ ಪುಟ್ಟ ವಾಹನಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಸಾರ್ವಜನಿಕ ಸ್ಥಳಗಳಾದ ಬನ್ನಿಕಟ್ಟಿ, ಹೆಸ್ಕಾಂ ಕಚೇರಿ, ಕಂಠಿಪೇಟೆ, ಗಚ್ಚಿನಕಟ್ಟಿ, ಶಿವಪ್ಪಯ್ಯನ ಗುಡಿ, ಬಸವೇಶ್ವರ ಗುಡಿ, ಚೌಬಜಾರ, ಮಾರವಾಡಿ ಓಣೆ, ಸರಾಫ್ ಬಜಾರ, ಅರಳಿಕಟ್ಟಿ ಬಸವೇಶ್ವರ ದೇವಸ್ಥಾನ, ಪುರಸಭೆಯಲ್ಲಿ, ಸರ್ಕಾರಿ ಆಸ್ಪತ್ರೆ, ಟೆಂಪೋ ಚಾಲಕ ಹಾಗೂ ಮಾಲಕರ ಸಂಘದ ಕಚೇರಿ, ಕಾಬ್ರಾ ಮನೆ ಹತ್ತಿರ, ಭಾರತ ಮಾರ್ಕೆಟ್, ಕಮತಗಿ ಕ್ರಾಸ್, ಸಾಲೇಶ್ವರ ಗುಡಿ ಹತ್ತಿರ, ಹರದೊಳ್ಳಿ, ಲಂಬಾಣಿ ತಾಂಡಾಗಳಲ್ಲಿ ಇನ್ನು ಅನೇಕ ಕಡೆಗಳಲ್ಲಿ ಮತ್ತು ಮನೆ ಮನೆಗಳಿಗೆ ಹಾಗೂ ಶಾಲಾ ಕಾಲೇಜು. ಸಂಘ ಸಂಸ್ಥೆಗಳಲ್ಲಿ ಗಣೇಶ ಮೂರ್ತಿಗಳನ್ನು ಕರೆತಂದು ಮಂಟಪ ಅಲಂಕಾರಗೊಳಿಸಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.