ಇಳಕಲ್: ಇಲ್ಲಿಂದ ಕೇವಲ 6 ಕಿ.ಮೀ ದೂರದಲ್ಲಿ ಇರುವ ಗುಗ್ಗಲಮರಿ ಗ್ರಾಮದಲ್ಲಿ 3 ವರ್ಷಕ್ಕೊಮ್ಮೆ ನಡೆಯುವ ದುರ್ಗಾದೇವಿ ಜಾತ್ರೆಯಲ್ಲಿ ಪ್ರಾಣಿಗಳನ್ನು ಬಲಿ ನೀಡಲಾಯಿತು. ಪ್ರಾಣಿ ಬಲಿ ತಡೆಯಲು ತಾಲ್ಲೂಕು ಆಡಳಿತ ಹಾಗೂ ಪೋಲಿಸರು ಮಾಡಿಕೊಂಡ ಸಿದ್ಧತೆಗಳು ಸಾಕಾಗಲಿಲ್ಲ.
ದೇವಿಗೆ ಮಹಾಪೂಜೆ ಸಲ್ಲಿಸಿದ ನಂತರ ಬಲಿ ನೀಡಲಾಯಿತು. ಬಾನ (ಜೋಳದ ಅನ್ನ) ಸೇರಿದಂತೆ ವಿವಿಧ ಭಕ್ಷ್ಯಗಳನ್ನು ದೇವಿಗೆ ಎಡೆ ಹಿಡಿಯಲಾಯಿತು. ಪ್ರಾಣಿ ಬಲಿ ತಡೆಯುವ ಕಾಯ್ದೆಗಳ ಬಗ್ಗೆ ಭಕ್ತರಿಗೆ ಅರಿವಿದ್ದರೂ ಕದ್ದುಮುಚ್ಚಿಯಾದರೂ ಹರಕೆ ತೀರಿಸುವ ಪ್ರಯತ್ನ ಮಾಡಿದರು.
ಸುತ್ತಮುತ್ತಲಿನ ಗ್ರಾಮದವರು ಇಳಕಲ್ಲದಿಂದ ಸಾವಿರಾರು ಭಕ್ತರು ಇಲ್ಲಿಗೆ ಬಂದು ದೇವಿಯ ದರ್ಶನ ಪಡೆಯುವರು. ಸುತ್ತಮುತ್ತಲಿನ ಹಳ್ಳಿಯ ಜನರು ಕಾಲ್ನಡಿಗೆಯಲ್ಲಿ ತಲೆಯ ಮೇಲೆ ಜೋಳದ ಬಾನದ ಗಡಗಿಯಲ್ಲಿ ಹೊತ್ತುಕೊಂಡು ಕಳಸದಾರತಿಯೊಂದಿಗೆ ಬಂದು ಎಡೆ ಮಾಡುವರು. ಮೂರು ದಿನಗಳ ಕಾಲ ನಡೆಯುವ ಈ ಜಾತ್ರೆ ಅತ್ಯಂತ ವೈಭವಯುತವಾಗಿ ನಡೆಯುವುದು.
ದುರ್ಗಾದೇವಿ ಸುತ್ತಮುತ್ತ ನೂರಾರು ಏಕರೆ ಪ್ರದೇಶದಲ್ಲಿದ್ದ ಬೃಹತ್ ಶಿಲಾಬಂಡೆಗಳು ಒಂದು ಕಾಲಕ್ಕೆ ಕಲಾಕೃತಿಗಳಂತೆ ಕಂಡು ಬರುತ್ತಿದ್ದವು. ಗ್ರಾನೈಟ್ ಗಣಿಗಾರಿಕೆಯ ಬಾಹುಗಳು ಎಲ್ಲವನ್ನೂ ನೆಲಸಮಗೊಳಿಸಿ, ಈಗ ಭೂಮಿಯ ಗರ್ಭವನ್ನು ಬಗೆಯುತ್ತಿವೆ. ದೇವಿಯ ಜಾತ್ರೆಗೆ ಬಂದಿದ್ದ ಬೇರೆ ಊರಿನ ಅನೇಕರು ಇಲ್ಲಿದ್ದ ಶಿಲಾಸಂಪತ್ತು ಮಾಯವಾದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.