ADVERTISEMENT

ಚಿಮ್ಮಡದ ‘ಕಿಚಡಿ’ ಜಾತ್ರೆ ಇಂದು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 9:07 IST
Last Updated 16 ಸೆಪ್ಟೆಂಬರ್ 2013, 9:07 IST

ಚಿಮ್ಮಡ(ಬನಹಟ್ಟಿ): ಉತ್ತರ ಕರ್ನಾಟಕ­ದಲ್ಲಿ ಕಿಚಡಿ ಜಾತ್ರೆ ಎಂದೇ ಪ್ರಸಿದ್ಧವಾದ ಜಮಖಂಡಿ ತಾಲ್ಲೂಕಿನ ಚಿಮ್ಮಡದ ಪ್ರಭುದೇವರ ಜಾತ್ರೆ ಸೋಮವಾರ ನಡೆಯಲಿದೆ. ಶತಮಾನ­ಗಳಿಂದ ಈ ಜಾತ್ರೆಯನ್ನು ಚಿಮ್ಮಡ ಮತ್ತು ಸುತ್ತಲಿನ ನಗರ ಮತ್ತು ಗ್ರಾಮೀಣ ಭಾಗದ ಜನರು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತ ಬಂದಿದ್ದಾರೆ. ಅದರಲ್ಲೂ ಜಾತ್ರೆಯ ಸಂದರ್ಭದಲ್ಲಿ ಮಾಡುವ ಕಿಚಡಿ ಪ್ರಸಾದ ಹಲವಾರು ವಿಶೇಷತೆಗಳಿಂದ ಕೂಡಿದೆ.

ಈ ಬಾರಿ 135 ಕ್ವಿಂಟಲ್‌ ಅಕ್ಕಿ ಹಾಗೂ 37 ಕ್ವಿಂಟಲ್‌ ಬೇಳೆಯನ್ನು ಬಳಸಿ ಕಿಚಡಿ ತಯಾರಿಸಲಾಗುವುದು. ಅದಕ್ಕೆ ಸಾಕಾಗು­ವಷ್ಟು ಸಾರು ಮಾಡಲಾ­ಗುತ್ತದೆ ಎಂದು ಚಿಮ್ಮಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಬಟಕುರ್ಕಿ ಪತ್ರಿಕೆಗೆ ತಿಳಿಸಿದರು. 12ನೇ ಶತಮಾನದಲ್ಲಿ ಚಿಮ್ಮಡ ಗ್ರಾಮಕ್ಕೆ ಅಲ್ಲಮಪ್ರಭು ದೇವರು ಬಂದ ಸಂದರ್ಭದಲ್ಲಿ ಮಾಯೆ ಅವರನ್ನು ಕಾಡಿದ್ದಳು. ಮಾಯೆಯಿಂದ ತಪ್ಪಿಸಿಕೊ­ಳ್ಳಲು ಪ್ರಭುದೇವರು ಗ್ರಾಮದ ಹೊರ­ವಲಯದಲ್ಲಿರುವ ಬೆಟ್ಟದಲ್ಲಿ ನೆಲೆಸಿದ್ದರು.

ನಂತರ ಗ್ರಾಮದ ಜನರು ಅಲ್ಲಿಗೆ ಹೋಗಿ ಪ್ರಭುದೇವರಿಗೆ ಕಿಚಡಿ ಪ್ರಸಾದವನ್ನು ನೀಡಿದಾಗ ಅವರು ಸೇವಿಸಿದ್ದರು. ನಂತರ ಪ್ರಭುದೇವರು ತಾವು ಸೇವಿಸಿದ್ದ ಪ್ರಸಾದವನ್ನು ಭಕ್ತ­ರಿಗೂ ವಿತರಿಸಿದ್ದರು ಎಂಬುದು ಗ್ರಾಮಸ್ಥರ ನಂಬಿಕೆ. ಆದ್ದರಿಂದ ಆ ಪ್ರತೀಕವಾಗಿ ಸೋಮವಾರ ಲಕ್ಷಾಂತರ ಜನರಿಗೆ ಕಿಚಡಿ ಪ್ರಸಾದವನ್ನು ಗ್ರಾಮದ ಜನರು ಉಣಿಸುತ್ತಾರೆ. ಈ ಪ್ರಸಾದ­ವನ್ನು ಸ್ವೀಕರಿಸಿದವರಿಗೆ ಯಾವುದೆ ರೋಗ ಬರಲಾರದು ಮತ್ತು ರೋಗ ಬಂದರೂ ಅದು ಬೇಗನೆ ಗುಣವಾಗುತ್ತದೆ ಎಂಬುವುದು ಮತ್ತೊಂದು ನಂಬಿಕೆ. 

ಸಂಜೆ 6.30ಕ್ಕೆ ನಂದಿಕೋಲು ಮತ್ತು ಪ್ರಭುದೇವರ ಪಾಲಕಿ ಉತ್ಸವ ನಡೆಯು­ತ್ತದೆ. ಇದರಲ್ಲಿ ಸಾವಿರಾರು ಜನ ಭಾಗವಹಿಸುತ್ತಾರೆ. ಉತ್ಸವದಲ್ಲಿ ಪ್ರಭುದೇವರ ಭಾವಚಿತ್ರದ ಮೆರವಣಿಗೆ ಸಕಲ ವಾದ್ಯ ಮೇಳಗಳೊಂದಿಗೆ ಸಂಭ್ರಮ ಸಡಗರದೊಂದಿಗೆ ನಡೆಯುತ್ತದೆ.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾದೇವಪ್ಪ ಹಟ್ಟಿ, ಶಿವಲಿಂಗಪ್ಪ ಪಾಟೀಲ, ಪ್ರಭು ಪಾಲಭಾವಿ, ವೀರಪ್ಪ ಹಳೇಮನಿ ನೇತೃತ್ವದಲ್ಲಿ ಜಾತ್ರೆ ನಡೆಯುತ್ತದೆ. ಜಾತ್ರೆಗೆ ಉತ್ತರ ಕರ್ನಾಟಕದ ಬೇರೆ ಪ್ರದೇಶಗಳಿಂದ ಲಕ್ಷಾಂತರ ಜನ ಬಂದರೆ ಈ ಭಾಗದ ಮಠಾಧೀಶರು ಮತ್ತು ಜನಪ್ರತಿನಿಧಿ­ಗಳು ಜಾತ್ರೆಯಲ್ಲಿ ಭಾಗವಹಿಸುತ್ತಾರೆ.
-ವಿಶ್ವಜ ಕಾಡದೇವರ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT