ADVERTISEMENT

ಜನಪ್ರತಿನಿಧಿಗಳಿಗೆ ಸಾಮಾಜಿಕ ಬದ್ಧತೆ ಇಲ್ಲ

ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಆರೋಪ

​ಪ್ರಜಾವಾಣಿ ವಾರ್ತೆ
Published 4 ಮೇ 2018, 6:06 IST
Last Updated 4 ಮೇ 2018, 6:06 IST

ಹುನಗುಂದ: ‘ಜಲಾಶಯಗಳ ನೀರು ಕೃಷಿ ಮತ್ತು ಕುಡಿಯಲು ಮಾತ್ರ ಬಳಕೆ ಮಾಡಬೇಕು ಎಂದು ನೀರಾವರಿ ತಜ್ಞರ ಸಲಹೆ ಇದ್ದರೂ, ಕೈಗಾರಿಕೆಗಳಿಗೆ ಬಾಗಲಕೋಟೆ, ವಿಜಯಪುರ ಜಿಲ್ಲೆಯಲ್ಲಿ ನೀರು ನೀಡಲಾಗುತ್ತಿದೆ’ ಎಂದು ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಆರೋಪಿಸಿದರು.

‘ಬೇರೆ ಜಿಲ್ಲೆಗಳಲ್ಲಿ ಕೈಗಾರಿಕೆಗೆ ಜಲಾಶಯದ ನೀರು ಒದಗಿಸಿಲ್ಲ. ವಿಶೇಷವಾಗಿ ಅವಳಿ ಜಿಲ್ಲೆಯಲ್ಲಿ ಇದು ನಡೆದಿದೆ. ಇದರಿಂದ ಜನಪ್ರತಿನಿಧಿಗಳಿಗೆ ಸಾಮಾಜಿಕ ಬದ್ಧತೆ ಇಲ್ಲದಿರುವುದು ತೋರಿಸುತ್ತದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ದೂರಿದರು.

‘ಫಸಲ್ ಬಿಮಾ ಯೋಜನೆ ರೈತರಿಗೆ ಅನ್ಯಾಯವಾಗಿದೆ. ಜಿಲ್ಲೆಗೆ ₹90 ಕೋಟಿ ಹಣ ಬಿಡುಗಡೆಯಾಗಿದ್ದು, ನಮ್ಮ ತಾಲ್ಲೂಕಿನ ಪಾಲು ಇಂದಿಗೂ ಹಂಚಿಕೆಯಾಗಿಲ್ಲ. ರಾಜಕೀಯ ಮುಖಂಡರು ಜನಸಾಮಾನ್ಯರ ಅಭಿವೃದ್ಧಿ ಹೊಂದುವ ದೃಷ್ಟಿಯಿಂದ ಮಂಜೂರಾದ ಬೃಹತ್ ಯೋಜನೆ ಮತ್ತು ಬಂದ ಅನುದಾನ ದುರ್ಬಳಕೆಯಾಗಿದೆ. ಮರೋಳ ಏತ ನೀರಾವರಿ ಮತ್ತು ಲಿಂಗಸಗೂರು ತಾಲ್ಲೂಕು ರಾಂಪುರ ನೀರಾವರಿ ಯೋಜನೆಗಳಿಂದ ನಮ್ಮ ತಾಲ್ಲೂಕಿನ ಕೋಡಿಹಾಳ, ಕರಡಿ ಭಾಗಗಳು ಇಂದು ಹಸಿರಿನಿಂದ ಸಮೃದ್ಧಿಯಾಗಬೇಕಿತ್ತು. ಆದರೆ ಕೋಡಿಹಾಳದ 346.15 ಹೆಕ್ಟೇರ್ ಹೊಲಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ್ದರೂ ನೀರು ಹರಿದಿರುವದು ರೈತರ ದೌರ್ಭಾಗ್ಯ’ ಎಂ‌ದರು.

ADVERTISEMENT

‘ಮರೋಳ 1ನೇ ಹಂತದ ಯೋಜನೆಯಡಿ ಪೂರ್ವ ಭಾಗದ 52 ಕಿ.ಮೀ. ಮತ್ತು ಪಶ್ಚಿಮ ಭಾಗದ 62 ಕಿ.ಮೀ., ಉದ್ದದ ಮುಖ್ಯ ಕಾಲುವೆ ಜಾಲ ನಿರ್ಮಿಸಲಾಗಿದೆ. ಪೂರ್ವ ಭಾಗದ ಮುಖ್ಯ ಕಾಲುವೆ ಕರಡಿ ಹತ್ತಿರ 44 ಕಿ.ಮೀ ನಿರ್ಮಾಣಗೊಂಡಿದೆ. ಆದರೆ ಉಳಿದ 8 ಕಿ.ಮೀ ಮುಖ್ಯ ಕಾಲುವೆ ಇನ್ನೂ ನಿರ್ಮಾಣವಾಗಿಲ್ಲ. ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ವಿತರಣಾ ಕಾಲುವೆಗಳು ಮತ್ತು ಹೊಲಗಾಲುವೆಗಳೇ ಇಲ್ಲ. ರೈತರ ಜಮೀನುಗಳಿಗೆ ನೀರು ಹರಿಸದೆ ಕೋಟ್ಯಂತರ ರೂಪಾಯಿ ಲೂಟಿಯಾಗಿ ಯೋಜನೆ ಹಳ್ಳ ಹಿಡಿದಿದೆ. ನೀರಾವರಿ ಹೆಸರಿನಲ್ಲಿ ಹಗಲು ದರೋಡೆ ನಡೆದಿದೆ’ ಎಂದರು.

‘ಹುನಗುಂದ ಪುರಸಭೆ ಮತ್ತು ಇಳಕಲ್ ನಗರಸಭೆಗೆ ಅವಳಿ ಸರ್ಕಾರಗಳ ಹಣಕಾಸು ಆಯೋಗದಿಂದ ಬಂದ ಕೋಟ್ಯಂತರ ಅನುದಾನದ ಅಸಮರ್ಪಕ ಬಳಕೆ ಬಗ್ಗೆ ಜನಪ್ರತಿನಿಧಿಗಳು ಮೌನವಾಗಿದ್ದಾರೆ. ಇಳಕಲ್ ನಗರದ ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ಸಾಕಷ್ಟು ತಪ್ಪುಗಳಿರುವುದನ್ನು ವಿರೋಧಿಸಿ ಜನಾಂದೋಲನ ನಡೆಸಿದರೂ ಸರಿಪಡಿಸಿಲ್ಲ. ಜೊತೆಗೆ ಹುನಗುಂದ ಬಸ್ ಡಿಪೋ ಹೆಸರಿಗಷ್ಟೇ ಆಗಿದೆ. ಈ ಎಲ್ಲ ವಿಷಯಗಳ ಕುರಿತು ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳ ನಿಲುವೇನು ಎಂದು ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮಲ್ಲನಗೌಡ ತುಂಬದ, ಕೃಷ್ಣಾ ಜಾಲಿಹಾಳ, ಮಹಾಂತಪ್ಪ ವಾಲೀಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.