ADVERTISEMENT

ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ರೂ 47 ಲಕ್ಷ

ನವನಗರ ಅಂತರರಾಷ್ಟ್ರೀಯ ಈಜುಕೊಳ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 9:39 IST
Last Updated 19 ಡಿಸೆಂಬರ್ 2012, 9:39 IST
ಬಾಗಲಕೋಟೆ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಪುನರಾರಂಭಗೊಂಡ ಈಜುಗೊಳವನ್ನು ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಬಿಟಿಡಿಎ ಅಧ್ಯಕ್ಷ ಸಿ.ವಿ.ಕೋಟಿ, ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ವೀಕ್ಷಿಸಿದರು.
ಬಾಗಲಕೋಟೆ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಪುನರಾರಂಭಗೊಂಡ ಈಜುಗೊಳವನ್ನು ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಬಿಟಿಡಿಎ ಅಧ್ಯಕ್ಷ ಸಿ.ವಿ.ಕೋಟಿ, ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ವೀಕ್ಷಿಸಿದರು.   

ಬಾಗಲಕೋಟೆ: ಅಸ್ತವ್ಯಸ್ತವಾಗಿದ್ದ ನವನಗರದ ಜಿಲ್ಲಾ ಕ್ರೀಡಾಂಗಣವನ್ನು ರೂ. 47 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಪುನರಾರಂಭಗೊಂಡ ಈಜುಗೊಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿರ್ವಹಣೆ ಕೊರತೆಯಿಂದ ಕಳೆದ ಮೂರು ವರ್ಷದಿಂದ ಪಾಳು ಬಿದ್ದಿದ್ದ ಈಜುಗೊಳವನ್ನು ಬಿಟಿಡಿಎ ವತಿಯಿಂದ ರೂ. 5ಲಕ್ಷ ವೆಚ್ಚದಲ್ಲಿ ನವೀಕರಿಸಲಾಗಿದೆ. ವಿದ್ಯುತ್ ಸಂಪರ್ಕಕ್ಕೆ ರೂ. 5 ಲಕ್ಷ, ಸುಣ್ಣಬಣ್ಣಕ್ಕೆ ರೂ.5 ಲಕ್ಷ ವೆಚ್ಚ ಮಾಡಲಾಗಿದೆ ಎಂದರು.

ಕ್ರೀಡಾಂಗಣದಲ್ಲಿ ಹೊಸದಾಗಿ ಬಾಸ್ಕೆಟ್‌ಬಾಲ್ ಕೋರ್ಟ್ ಮತ್ತು ಪ್ಲಾಟ್‌ಫಾರಂ ಅಭಿವೃದ್ಧಿಗೆ ಮತ್ತೆ ರೂ.10 ಲಕ್ಷ ಬಿಟಿಡಿಎಯಿಂದ ಮಂಜೂರು ಮಾಡಲಾಗಿದೆ, ಅಲ್ಲದೇ ರೂ. 22 ಲಕ್ಷ ವೆಚ್ಚದಲ್ಲಿ ಕ್ರೀಡಾಂಗಣದ ರಸ್ತೆ ಡಾಂಬರೀಕರಣ ಮಾಡಲಾಗುವುದು ಎಂದು ತಿಳಿಸಿದರು.

ಮಕ್ಕಳ ಈಜುಕೊಳ: ಈಜುಗೊಳದ ಪಕ್ಕದಲ್ಲೇ ಮಕ್ಕಳಿಗಾಗಿ ಮತ್ತೊಂದು ಚಿಕ್ಕ ಈಜುಗೊಳ ನಿರ್ಮಾಣಕ್ಕೆ ಸರ್ಕಾರದಿಂದ ರೂ.14 ಲಕ್ಷ ಅನುದಾನ ಬಂದಿರುವುದಾಗಿ ಹೇಳಿದರು.ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ದೊಡ್ಡಬಸವರಾಜು ಮಾತನಾಡಿ, 2003-04ರಲ್ಲಿ ಉತ್ತರ ಕರ್ನಾಟಕದಲ್ಲೇ ಪ್ರಥಮವಾಗಿ ಅಂತರರಾಷ್ಟ್ರೀಯ ಮಟ್ಟದ ಈಜುಗೊಳವನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿತ್ತು. ಕಾರಣಾಂತರದಿಂದ ಕಳೆದ ಮೂರು ವರ್ಷದಿಂದ ಪಾಳುಬಿದ್ದಿದ್ದ ಈಜುಗೊಳವನ್ನು ಇದೀಗ ನವೀಕರಿಸಲಾಗಿದೆ ಎಂದರು.

ಈಜುಗೊಳದ ನಿರ್ವಹಣೆಯನ್ನು  ರಾಮು ರಾಠೋಡ ಎಂಬುವವರಿಗೆ ಗುತ್ತಿಗೆ ನೀಡಲಾಗಿದ್ದು, ವರ್ಷಕ್ಕೆ ರೂ.1 ಲಕ್ಷ ಹಣವನ್ನು ಇಲಾಖೆಗೆ ನೀಡಬೇಕಾಗುತ್ತದೆ. ಅಲ್ಲದೇ, ಇಲಾಖೆ ವತಿಯಿಂದ ನಡೆಯುವ ಈಜು ಸ್ಪರ್ಧೆ ಮತ್ತು ತರಬೇತಿಗೆ ಉಚಿತವಾಗಿ ನೀಡಬೇಕಾಗುತ್ತದೆ ಎಂದು ತಿಳಿಸಿದರು.

ಈಜುಗೊಳದಲ್ಲಿ ಶೀಘ್ರದಲ್ಲೇ ರಾಜ್ಯಮಟ್ಟದ ಸ್ಪರ್ಧೆಯನ್ನು ಆಯೋಜಿಸಲಾಗುವುದು ಮತ್ತು ಬೇಸಿಗೆಯಲ್ಲಿ ಮಕ್ಕಳಿಗೆ ಈಜು ಕಲಿಕೆ ಶಿಬಿರ ಆಯೋಜಿಸುವ ಚಿಂತನೆ ಇದೆ ಎಂದು ಹೇಳಿದರು.ಈಜುಗೊಳವನ್ನು ಟೆಂಡರ್ ಹಿಡಿದಿರುವ ರಾಮು ರಾಠೋಡ ಮಾತನಾಡಿ, ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ಸಾರ್ವಜನಿಕರಿಗೆ ಈಜುಗೊಳ ಮುಕ್ತವಾಗಿರುತ್ತದೆ. ಮಹಿಳೆಯರಿಗಾಗಿ ಸಂಜೆ 5ರಿಂದ 6ರ ವರೆಗೆ ಅವಕಾಶ ಇರುತ್ತದೆ ಎಂದು ಹೇಳಿದರು.

ಒಂದು ಗಂಟೆಗೆ ರೂ. 25 ಶುಲ್ಕ ಇರುತ್ತದೆ. ತಿಂಗಳ ಲೆಕ್ಕದಲ್ಲಿ ವಯಸ್ಕರಿಗೆ ರೂ.600 ಮತ್ತು ಮಕ್ಕಳಿಗೆ ರೂ.400 ಶುಲ್ಕ ಇರುತ್ತದೆ. ಈಜುಗೊಳದಲ್ಲಿ ಕಡ್ಡಾಯವಾಗಿ ಈಜುಡುಗೆ ತೊಡಬೇಕಾಗುತ್ತದೆ. ಇಬ್ಬರು ತರಬೇತುದಾರರು ಮತ್ತು 6 ಜನ ಜೀವ ರಕ್ಷಕರು ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದರು.
ಈಜುಗೊಳದಲ್ಲಿ ಒಮ್ಮೆಗೆ 50 ಜನರಿಗೆ ಪ್ರವೇಶ ನೀಡಲಾಗುತ್ತದೆ, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ನಾರಾಯಣಸಾ ಬಾಂಡಗೆ, ಬಿಟಿಡಿಎ ಅಧ್ಯಕ್ಷ ಸಿ.ವಿ.ಕೋಟಿ, ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜಿ.ಪಾಟೀಲ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶದಕ ಶ್ರೀಶೈಲ ಕಂಕಣವಾಡಿ, ಗುತ್ತಿಗೆದಾರ ಆರ್.ಪಿ.ರಾಠೋಡ, ಸೈಕ್ಲಿಸ್ಟ್ ತರಬೇತುದಾರರಾದ ಅನಿತಾ ನಿಂಬರಗಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.