ADVERTISEMENT

ಜಿಲ್ಲೆಯಲ್ಲಿ ಸಾಧಾರಣ ಮಳೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 6:47 IST
Last Updated 25 ಜೂನ್ 2013, 6:47 IST

ಬಾಗಲಕೋಟೆ: ಬಾಗಲಕೋಟೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಕೆಲ ಹೊತ್ತು ಸಾಧಾರಣ ಮಳೆಯಾಯಿತು.
ಬಾಗಲಕೋಟೆ ಮತ್ತು ಮುಧೋಳ, ಅಮೀನಗಡ, ಕಮತಗಿ ಮತ್ತು ಕೆರೂರ ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿಯಿತು. ಉಳಿದಂತೆ ಜಮಖಂಡಿ, ಮಹಾಲಿಂಗಪುರ, ಬಾದಾಮಿ, ಹುನಗುಂದ, ಇಳಕಲ್, ಬೀಳಗಿ ವ್ಯಾಪ್ತಿಯಲ್ಲಿ ಕೆಲ ಹೊತ್ತು ತುಂತುರು ಮಳೆ ಸುರಿಯಿತು.

ಕೊನೆಗೂ ಸುರಿದ ಮಳೆರಾಯ
ಕೆರೂರ: ಉತ್ತಮ ಮುಂಗಾರು ಮಳೆ ನಿರೀಕ್ಷೆಯಲ್ಲಿ ಭೂತಾಯಿ ಹದಗೊಳಿಸಿ ಬಿತ್ತನೆಗೆ ಸಜ್ಜಾಗಿ ಕುಳಿತಿದ್ದ ಸ್ಥಳೀ ಯ ಮತ್ತು ಸುತ್ತಲಿನ ಗ್ರಾಮೀಣ ಪ್ರದೇಶದ ಕೃಷಿಕರಲ್ಲಿ ರೋಹಿಣಿ, ಮೃಗಶಿರಾ ಮಳೆ ನಿರಾಸೆಯ ಮಡಿಲಿಗೆ ದೂಡಿದ್ದವು. ಸೋಮವಾರ ಸಾಧಾರಣವಾಗಿ ಸುರಿದ ಆರಿದ್ರಾ ಮಳೆ ತಡವಾದರೂ ಹೆಸರು, ತೊಗರಿ ಇತರೆ ಬೆಳೆ ಬಿತ್ತನೆಗೆ ರೈತರು ಸಜ್ಜಾಗತೊಡಗಿದ್ದಾರೆ.

ಸೋಮವಾರ ಮಧ್ಯಾಹ್ನ ಹಾಗೂ ಸಾಯಂಕಾಲ ಕೆಲ ಹೊತ್ತು ಸುರಿದ ಮಳೆರಾಯ ರೈತರ ಮೊಗದಲ್ಲಿ ಸಮಾ ಧಾನ ಮೂಡಿಸಿದ. ಮಂಗಳವಾರದಿಂದ ಬಿತ್ತನೆ ಚಟುವಟಿಕೆ ಚುರುಕುಗೊಳ್ಳುವ ಲಕ್ಷಣಗಳು ಹೆಚ್ಚಿದ್ದು, ಕೃಷಿ ಸಂಪರ್ಕ ಕೇಂದ್ರ ಮತ್ತು ಇತರೆಡೆ ಇನ್ನಷ್ಟೇ ಬೀಜ ಖರೀದಿ ಮಾಡಬೇಕಿದೆ ಎನ್ನುತ್ತಾರೆ ಕೃಷಿಕ ಯಲ್ಲಪ್ಪ ಹಳಕಟ್ಟಿ.

ನೆನೆದ ಮಕ್ಕಳು: ಇಂದು ಸಂಜೆ ಸರಿಯಾಗಿ ಶಾಲೆಗಳು ಬಿಡುವ ಸಮಯಕ್ಕೆ ದಟ್ಟವಾಗಿ ಹರಡಿದ್ದ ಮೋಡಗಳು ಸುರಿಸಿದ ಮಳೆಯಲ್ಲಿ ಶಾಲಾ ಮಕ್ಕಳು ಸೇರಿದಂತೆ ಶಿಕ್ಷಕಶಿಕ್ಷಕಿಯರು ನೆನೆಯುವಂತಾಯಿತು. ಕೆಲವೆಡೆ ಮಳೆಯಲ್ಲಿ ತೊಯ್ದರೂ ಹರುಷಗೊಂಡಿದ್ದ ಮಕ್ಕಳು ತುಂತುರು ಹನಿಯಲ್ಲಿಯೇ ನಲಿಯುತ್ತ ಮನೆ ಕಡೆಗೆ ಹೆಜ್ಜೆ ಹಾಕುತ್ತಿದ್ದ ದೃಶ್ಯ ಕಂಡುಬಂದಿತು.

ಕೆರೆ ಬಾರದ ನೀರು: ಪಟ್ಟಣದ ಜನತೆಯ ಕುಡಿಯುವ ಜಲಕ್ಕೆ ಮೂಲ ಆಧಾರವಾಗಿರುವ ಪುರಾತನ ಕೆರೆಗೆ ಸಾಕಷ್ಟು ಮಳೆ ಸುರಿಯದ ಕಾರಣ ನೀರು ಸಂಗ್ರಹಗೊಂಡಿಲ್ಲ.

ಕೆರೆಯಂಗಳ ಒಣಗಿ ನಿಂತಿದ್ದು ಕೆಲವು ಬಡಾವಣೆಗಳಲ್ಲಿ ನೀರಿನ ಸಂಕಷ್ಟ ಬೇಸಿಗೆಯಲ್ಲಿದ್ದಂತೆಯೇ ಯಥಾಸ್ಥಿತಿ ಮುಂದುವರಿದಿದೆ. ದೂರದಿಂದ ಬಂಡಿಗಳಲ್ಲಿ ನೀರು ತರುವುದು ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.