ADVERTISEMENT

ಜೀವಕ್ಕೆ ಎರವಾದ ಮಿಸ್ಡ್‌ಕಾಲ್‌ ಪ್ರೇಮ!

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 5:06 IST
Last Updated 6 ಅಕ್ಟೋಬರ್ 2017, 5:06 IST

ಬಾಗಲಕೋಟೆ: ಮೊಬೈಲ್‌ಫೋನ್‌ನ ಮಿಸ್ಡ್‌ ಕಾಲ್‌ನಿಂದ ಬೆಂಗಳೂರಿನ ಬಾಣಸಿಗ ಹಾಗೂ ತಾಲ್ಲೂಕಿನ ಅಚನೂರಿನ ಗೃಹಿಣಿಯ ನಡುವೆ ಉಂಟಾದ ಪರಿಚಯ ಪ್ರೇಮಕ್ಕೆ ತಿರುಗಿ ಈಗ ಆಕೆಯ ಕೊಲೆಯಲ್ಲಿ ಪರ್ಯಾವಸಾನವಾಗಿದೆ.

ಸೆಪ್ಟೆಂಬರ್ 27ರಂದು ಸಮೀಪದ ಮಲ್ಲಾಪುರ ಗುಡ್ಡದಲ್ಲಿ ಅಚನೂರಿನ 38 ವರ್ಷದ ವಿವಾಹಿತ ಮಹಿಳೆಯ ಶವ ದೊರೆಕಿತ್ತು. ಪ್ರಕರಣದ ಜಾಡು ಹಿಡಿದು ತೆರಳಿದ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರಿಗೆ ಕುತೂಹಲಕಾರಿ ಸಂಗತಿ ಬಯಲಾಗಿದೆ. ಮಹಿಳೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ವ್ಯಾಪನಪಲ್ಲಿ ತಾಲ್ಲೂಕು ವಿರಪಸಂದಿರಮ್ ಗ್ರಾಮದ ನಾರಾಯಣ ಯಲ್ಲೋಜಿ (39) ಎಂಬಾತನನ್ನು ಬಂಧಿಸಿದ್ದಾರೆ.

ಮಿಸ್ಡ್‌ಕಾಲ್‌ ಪ್ರೇಮ: ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ನೆಲೆಸಿ ಅಡುಗೆ ಕೆಲಸದ ಜೊತೆಗೆ ಗುತ್ತಿಗೆದಾರನಾಗಿ (ಕೆಟರಿಂಗ್) ಕೆಲಸ ಮಾಡುತ್ತಿದ್ದ ನಾರಾಯಣ ಯಲ್ಲೋಜಿಗೆ ಕಳೆದ ಮಾರ್ಚ್‌ ತಿಂಗಳಲ್ಲಿ ಮೊಬೈಲ್‌ನಲ್ಲಿ ಆಕಸ್ಮಿಕವಾಗಿ ಬಂದ ಮಿಸ್ಡ್‌ ಕಾಲ್‌ ಅಚನೂರಿನ ಮಹಿಳೆಯ ಪರಿಚಯಕ್ಕೆ ಕಾರಣವಾಗಿದೆ.

ADVERTISEMENT

ಕ್ರಮೇಣ ಈ ಪರಿಚಯ ಮೊಬೈಲ್‌ಫೋನ್‌ನಲ್ಲಿ ಹರಟೆಗೆ ಕಾರಣವಾಗಿ ಇಬ್ಬರ ನಡುವೆ ಪ್ರೇಮಕ್ಕೆ ತಿರುಗಿದೆ. ಅಚನೂರಿನ ಮಹಿಳೆಗೆ ಪತಿ ಹಾಗೂ ಮೂವರು ಮಕ್ಕಳು ಇದ್ದಾರೆ. ಯಲ್ಲೋಜಿಗೂ ಇಬ್ಬರು ಮಕ್ಕಳು ಹಾಗೂ ಪತ್ನಿ ಇದ್ದಾರೆ. ಮಹಿಳೆ ಪ್ರತೀ ಅಮಾವಾಸ್ಯೆಗೆ ಮಲ್ಲಾಪುರ ಗುಡ್ಡದಲ್ಲಿರುವ ಮೈಲಾರಲಿಂಗನ ದೇವಸ್ಥಾನಕ್ಕೆ ಬರುತ್ತಿದ್ದರು. ಈ ವೇಳೆ ಆಕೆಯನ್ನು ಸಂಧಿಸಲು ಮುಂದಾಗುತ್ತಿದ್ದ ಯಲ್ಲೋಜಿ ಬೆಂಗಳೂರಿನಿಂದ ಮಲ್ಲಯ್ಯನ ಗುಡ್ಡಕ್ಕೆ ಬರುತ್ತಿದ್ದನು. ಅಲ್ಲಿಯೇ ಇಬ್ಬರೂ ಗೌಪ್ಯವಾಗಿ ಭೇಟಿಯಾಗುತ್ತಿದ್ದರು. ಹೀಗೆ ಈ ಮೊದಲು ನಾಲ್ಕು ಬಾರಿ ಆತ ಮಲ್ಲಯ್ಯನಗುಡ್ಡಕ್ಕೆ ಬಂದಿದ್ದಾನೆ ಎನ್ನಲಾಗಿದೆ.

‘ಸೆಪ್ಟೆಂಬರ್‌ 19ರಂದು ಮಹಾಲಯ ಅಮಾವಾಸ್ಯೆಯ ದಿನ ಯಲ್ಲೋಜಿ ಎಂದಿನಂತೆ ಮಲ್ಲಯ್ಯನ ಗುಡ್ಡಕ್ಕೆ ಬಂದಿದ್ದಾನೆ. ಈ ವೇಳೆ ಆತನನ್ನು ಭೇಟಿಯಾದ ಮಹಿಳೆ ತನ್ನನ್ನು ಬೆಂಗಳೂರಿಗೆ ಕರೆದೊಯ್ಯುವಂತೆ ಒತ್ತಾಯಿಸಿದ್ದಾರೆ. ಅದಕ್ಕೆ ಆತ ಒಪ್ಪದಿದ್ದಾಗ ಇಬ್ಬರ ನಡುವೆ ಜಗಳ ಸಂಭವಿಸಿದೆ. ಕುಪಿತಗೊಂಡ ಆರೋಪಿ ಮಹಿಳೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಶವವನ್ನು ಅಲ್ಲಿಯೇ ಗುಡ್ಡದಲ್ಲಿನ ಮುಳ್ಳಿನ ಪೊದೆಯಲ್ಲಿ ಬಿಸಾಕಿ ಪರಾರಿಯಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ಕಾಣೆಯಾದ ಬಗ್ಗೆ ಆಕೆಯ ಮನೆಯವರು ಸೆಪ್ಟೆಂಬರ್ 20ರಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 27ರಂದು ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಸುಳಿವು ನೀಡಿದ ಕರೆ ವಿವರ: ಮಹಿಳೆಯ ಶವ ದೊರೆದಾಗ ಆಕೆ ಮನೆಯಿಂದ ತಂದಿದ್ದ ಮೊಬೈಲ್‌ಫೋನ್ ಕಾಣೆಯಾಗಿರುವುದು ಪೊಲೀಸರಿಗೆ ಗೊತ್ತಾಗಿದೆ. ಅದರ ಕರೆ ವಿವರ (ಸಿಡಿಆರ್‌) ಪರಿಶೀಲಿಸಿದಾಗ ಪ್ರತಿ ಅಮಾವಾಸ್ಯೆಯ ಹಿಂದಿನ ದಿನ ಬೆಂಗಳೂರಿನಿಂದ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿರುವುದು ಗೊತ್ತಾಗಿದೆ.

ಮಹಿಳೆಯ ಕೊಲೆ ನಡೆದಾಗಲೂ ಅಪರಿಚಿತ ವ್ಯಕ್ತಿಯ ಮೊಬೈಲ್‌ನ ಟವರ್ ಲೊಕೇಶನ್‌ ಬಾಗಲಕೋಟೆಯಲ್ಲಿಯೇ ಇರುವುದು ಗೊತ್ತಾಗಿದೆ. ಆ ಬಗ್ಗೆ ಮಹಿಳೆಯ ಕುಟುಂಬದವರನ್ನು ವಿಚಾರಿಸಿದಾಗ ತಮಗೆ ಬೆಂಗಳೂರಿನಲ್ಲಿ ಯಾರೂ ಸಂಬಂಧಿಗಳು ಇಲ್ಲವೇ ಪರಿಚಿತರು ನೆಲೆಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಕೊನೆಗೆ ಆ ಅಪರಿಚಿತ ಕರೆ ಸಂಖ್ಯೆಯನ್ನು ಆಧರಿಸಿ ತನಿಖೆಗೆ ಮುಂದಾದ ಜಿಲ್ಲಾ ಅಪರಾಧ ಪತ್ತೆ ದಳದ ವೃತ್ತ ನಿರೀಕ್ಷಕ ಯು.ಬಿ.ಚಿಕ್ಕಮಠ ಹಾಗೂ ಗ್ರಾಮೀಣ ಠಾಣೆ ಪಿಎಸ್‌ಐ ಪ್ರದೀಪ ತಳಕೇರಿ ನೇತೃತ್ವದ ಪೊಲೀಸರ ತಂಡ ಬೆಂಗಳೂರಿನ ಚಿತ್ತಗಾನಹಳ್ಳಿಯಲ್ಲಿ ನೆಲೆಸಿದ್ದ ಯಲ್ಲೋಜಿಯನ್ನು ವಶಕ್ಕೆ ಪಡೆದು ಕರೆತಂದು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಬೆರಳು ತುಂಡಾಗಿತ್ತು: ಮಹಿಳೆಯ ಕತ್ತು ಹಿಸುಕುವಾಗ ಆಕೆ ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಆಕೆ ಯಲ್ಲೋಜಿಯ ಕೈ ಕಚ್ಚಿದ್ದು, ಆತನ ಬೆರಳು ತುಂಡಾಗಿದೆ. ಕೊಲೆ ಮಾಡಿ ಇಳಕಲ್‌ಗೆ ತೆರಳಿದ ಆರೋಪಿ ಅಲ್ಲಿ ವೈದ್ಯರೊಬ್ಬರ ಬಳಿ ಕೈ ಗಾಯಕ್ಕೆ ಚಿಕಿತ್ಸೆ ಪಡೆದು ಬೆಂಗಳೂರಿಗೆ ತೆರಳಿದ್ದಾನೆ.

ಕೊಲೆಯ ನಂತರ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯ ಸರ ಹಾಗೂ ಮೊಬೈಲ್‌ಫೋನ್‌ ಕೊಂಡೊಯ್ದಿದ್ದ ಆರೋಪಿ ಅಮೀನಗಡ–ಇಳಕಲ್ ನಡುವೆ ರಸ್ತೆಯ ಪಕ್ಕ ಫೋನ್‌ ಎಸೆದಿದ್ದಾನೆ. ಪೊಲೀಸರು ಅದರ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಮಾಂಗಲ್ಯ ಸರವನ್ನು ಬೆಂಗಳೂರಿನಲ್ಲಿ ಗಿರವಿ ಇಟ್ಟಿರುವುದಾಗಿ ಬಾಯಿಬಿಟ್ಟಿದ್ದಾನೆ. ಆರೋಪಿಯನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.