ADVERTISEMENT

ಡಿ.ಕೆ.ಶಿವಕುಮಾರ್ ವಿಚಾರಣೆ: ದ್ವೇಷದ ರಾಜಕಾರಣ ಅಲ್ಲ– ಕಾರಜೋಳ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2019, 12:31 IST
Last Updated 31 ಆಗಸ್ಟ್ 2019, 12:31 IST
   

ಬಾಗಲಕೋಟೆ: ‘ಶಾಸಕ ಡಿ.ಕೆ.ಶಿವಕುಮಾರ್ ಇ.ಡಿ ಮುಂದೆ ವಿಚಾರಣೆಗೆ ಹಾಜರಾಗಿರುವುದು ಕೇವಲ ಕಾನೂನು ಪ್ರಕ್ರಿಯೆಯೇ ಹೊರತು ಕಾಂಗ್ರೆಸ್ ನಾಯಕರು ಆರೋಪಿಸುವಂತೆ ಕೇಂದ್ರ ಸರ್ಕಾರದ ದ್ವೇಷದ ರಾಜಕಾರಣ ಅಲ್ಲ’ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಐಟಿ, ಇ.ಡಿ, ಸಿಬಿಐ ಸ್ವಾಯತ್ತ ತನಿಖಾ ಸಂಸ್ಥೆಗಳಾಗಿವೆ. ದೇಶದ 136 ಕೋಟಿ ಜನರಿಗೂ ಕಾನೂನು ಒಂದೇ ಆಗಿದ್ದು, ಯಾರು ತಪ್ಪು ಮಾಡಿದರೂ ಶಿಕ್ಷೆ ಅನುಭವಿಸಲೇಬೇಕಾಗುತ್ತದೆ. ಡಿ.ಕೆ.ಶಿವಕುಮಾರ್ ತಪ್ಪು ಮಾಡದೇ ಇದ್ದರೆ ಅವರಿಗೆ ಏನೂ ಆಗುವುದಿಲ್ಲ‘ ಎಂದರು.

‘ಇದು ದ್ವೇಷದ ರಾಜಕಾರಣ ಎಂದು ಕಾಂಗ್ರೆಸ್‌ನ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಅದು ಸತ್ಯಕ್ಕೆ ದೂರದ ಸಂಗತಿ. ಹಾಗಾದರೆ ಕಳೆದ 70 ವರ್ಷಗಳಿಂದ ದೇಶದಲ್ಲಿ ಯಾರ್ಯಾರ ಮೇಲೆ ಕೇಂದ್ರದ ತನಿಖಾ ಸಂಸ್ಥೆಗಳಿಂದ ತನಿಖೆ ನಡೆದಿದೆ. ಪ್ರಕರಣ ದಾಖಲಿಸಲಾಗಿದೆ. ಅವೆಲ್ಲವನ್ನೂ ಕಾಂಗ್ರೆಸ್‌ನವರು ಮಾಡಿದ್ದಾರೆ ಅನ್ನಬಹುದಾ?’ ಎಂದು ಪ್ರಶ್ನಿಸಿದರು.

ADVERTISEMENT

‘ಕಾಂಗ್ರೆಸ್‌ನವರು ಹತಾಶೆಯಿಂದ ಹೀಗೆ ಆರೋಪ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿಯೇ ಅಧಿಕಾರ ಕಳೆದುಕೊಂಡರೂ ಇನ್ನೂ ಬುದ್ಧಿ ಬಂದಿಲ್ಲ‘ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.