ಬಾಗಲಕೋಟೆ: ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವತಿಯಿಂದ ಏರ್ಪಡಿಸಲಾಗಿರುವ ಎರಡು ದಿನಗಳ ರಾಷ್ಟ್ರಮಟ್ಟದ ತಾಂತ್ರಿಕ ಉತ್ಸವ ‘ಮೆಕ್ಯಾನೋ-11’ ಶುಕ್ರವಾರ ಆರಂಭಗೊಂಡಿತು.ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಅಲ್ಟೈರ್ ಎಂಜಿನಿಯರಿಂಗ್ ಕಂಪೆನಿಯ ತಾಂತ್ರಿಕ ತಜ್ಞ ಪ್ರಶಾಂತ ಹಿರೇಮಠ, ‘ತಂತ್ರಜ್ಞಾನದ ಸಮಾನ ಹಂಚಿಕೆಯಾಗಬೇಕಾದರೆ ನಗರ ಕೇಂದ್ರೀಕೃತ ತಂತ್ರಜ್ಞಾನವನ್ನು ಹಳ್ಳಿಗಳಿಗೆ ವಿಸ್ತರಿಸಬೇಕು’ ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಜನರಿಗೂ ತಂತ್ರಜ್ಞಾನದ ಲಾಭ ದೊರೆತಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯವಾಗಬಲ್ಲದು ಎಂದು ಅಭಿಪ್ರಾಯಪಟ್ಟರು.
ಪ್ರಚಲಿತ ತಂತ್ರಜ್ಞಾನಗಳ ಬಗ್ಗೆ ವಿವರಿಸಿದ ಹಿರೇಮಠ, ಪ್ರತಿಯೊಬ್ಬರಿಗೂ ತಂತ್ರಜ್ಞಾನ ತಲುಪಿಸುವ ನಿಟ್ಟಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರ್‌ಗಳ ಸಂಶೋಧನೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಆರ್.ಎನ್.ಹೆರಕಲ್, ಜನಸಾಮಾನ್ಯರು ಸರಳವಾಗಿ ಬಳಕೆ ಮಾಡಬಹುದಾದ ಅತ್ಯುಪಯುಕ್ತ ಯಾಂತ್ರಿಕ ಸಾಧನೆಗಳನ್ನು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಬೇಕು ಎಂದರು.
ಪ್ರೊ.ಬಿ.ಆರ್.ಯಂಡಿಗೇರಿ ‘ಮೆಕ್ಯಾನೋ-11’ ಉತ್ಸವದ ಬಗ್ಗೆ ಮಾಹಿತಿ ನೀಡಿದರು. ವಿಭಾಗದ ಮುಖ್ಯಸ್ಥ ಡಾ.ಎಸ್.ಎನ್.ಕುರಬೇಟ ಸ್ವಾಗತಿಸಿದರು. ಸುಜಯ ಬಾಗೇವಾಡಿ ಪ್ರಾರ್ಥನಾಗೀತೆ ಹಾಡಿದರು. ವಿದ್ಯಾರ್ಥಿ ಪ್ರತಿನಿಧಿ ಸುಮಿತ್ ಯಾದ ಅತಿಥಿಗಳನ್ನು ಪರಿಚಯಿಸಿದರು. ಶ್ರೀಹರಿ ಹಾಗೂ ರಾಹುಲ್ ನಿರೂಪಿಸಿದರು. ಪವನ ಶಾಲ್ದಾರ ವಂದಿಸಿದರು.ದೇಶದ ವಿವಿಧ ಕಡೆಯ ಸುಮಾರು 250 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.