ADVERTISEMENT

ತಂದೆಯ ಜಯಕ್ಕಾಗಿ ಪುತ್ರನ ಬರಿಗಾಲು ವ್ರತ

ಅರುಣ ಕಾರಜೋಳ ನಿತ್ಯ ಬಿರು ಬಿಸಿಲಿನಲ್ಲಿ ಅಲೆದಾಟ

​ಪ್ರಜಾವಾಣಿ ವಾರ್ತೆ
Published 6 ಮೇ 2018, 7:00 IST
Last Updated 6 ಮೇ 2018, 7:00 IST

ಮುಧೋಳ: ತಮ್ಮ ಬಂಧು ಬಳಗದವರು ಚುನಾವಣೆ ಸ್ಪರ್ಧಿಸಿದಾಗ ಗೆಲ್ಲುವುದಕ್ಕಾಗಿ ಸುಳ್ಳು ಹೇಳುವುದು, ಆಣೆ ಪ್ರಮಾಣ ಮಾಡುವುದು, ಆಯಾ ಜಾತಿ ಒಲೈಕೆಗೆ, ವಿವಿಧ ಆಶೆ, ಆಮಿಷೆ, ಆಶ್ವಾಸನೆ ನೀಡುವುದು ಸಾಮಾನ್ಯ.

ಮುಧೋಳದ ಶಾಸಕ ಗೋವಿಂದ ಕಾರಜೋಳ ಐದನೇ ಬಾರಿ ಚುನಾಯಿತರಾಗಿ ವಿಧಾನಸೌಧಕ್ಕೆ ಹೋಗಬೇಕು ಎಂದು ಅವರ ಮಗ ಅರುಣ ಕಾರಜೋಳ ಬರಿಗಾಲಲ್ಲಿ ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಅತ್ಯಂತ ಸುಡುವ ಬಿಸಿಲಲ್ಲಿ ಅಡ್ಡಾಡುವುದನ್ನು ನೋಡಿದವರ ಮನಸ್ಸು ಚುರಕು ಅನಿಸುತ್ತದೆ.

ನಾಮ ಪತ್ರ ಸಲ್ಲಿಕೆಯಾದ ದಿನದಿಂದ ಚುನಾವಣಾ ಫಲಿತಾಂಶ ಬರುವುವವರೆಗೆ ಇವರು ಚಪ್ಪಲಿ, ಬೂಟು ಯಾವುದೇ ಪಾದರಕ್ಷೆ ಧರಿಸುವುದಿಲ್ಲ. ಪ್ರಖರವಾದ ಉರಿಬಿಸಿನಲ್ಲಿ ಪಾದರಕ್ಷೆ ಇಲ್ಲದೆ ಬೆಳಗಿನ 6 ಗಂಟೆಯಿಂದ ಆರಂಭವಾಗುವ ಇವರ ಚುನಾವಣೆ ಪ್ರಚಾರ ಅಂತ್ಯವಾಗುವುದು ರಾತ್ರಿ ಹತ್ತರ ನಂತರ. ಇವರು ಹಿಂದಿನ ನಾಲ್ಕು ಚುನಾವಣೆಯಿಂದಲೂ ಈ ವ್ರತ ಪಾಲಿಸಿಕೊಂಡು ಬಂದಿದ್ದಾರೆ.

ADVERTISEMENT

ಈ ಕುರಿತು ಅರುಣ ಅವರನ್ನು ಮಾತನಾಡಿಸಿದರೆ, ‘ನಾನು ದೈವ ಭಕ್ತ. ನನ್ನ ತಂದೆ ಆಯ್ಕೆಗಾಗಿ ಈ ವ್ರತ ಆರಂಭಿಸಿದ್ದೇನೆ. ಮುಧೋಳ ಕ್ಷೇತ್ರದ ಜನತೆ ನನ್ನ ತಂದೆಯವರನ್ನು ತಮ್ಮ ಮನೆಯ ಮಗನಂತೆ ಸದಾ ಆಶೀರ್ವಾದ ಮಾಡುತ್ತಾ ಬಂದಿದ್ದಾರೆ. ಜನರ ಆಶೀರ್ವಾದದೊಂದಿಗೆ ದೇವರ ಆಶೀರ್ವಾದವೂ ಆಗಲಿ ಎಂದು ದೇವರ ಹೆಸರಿನಲ್ಲಿ ಈ ವ್ರತ ಮಾಡುತ್ತಿದ್ದೇನೆ’ ಎಂದರು.

‘ಈ ವ್ರತ ಮಾಡುವುದರಿಂದ ನನಗೆ ತೊಂದರೆಯಾಗಿಲ್ಲ. ಅಭ್ಯಾಸ ಇರದ ಕಾರಣ ಮೊದಲೆರಡು ದಿನ ಮಾತ್ರ ಅಲ್ಪ ಪ್ರಮಾಣದ ನೋವಾಯಿತು. ಈಗ ಅಭ್ಯಾಸವಾಗಿ ಬಿಟ್ಟಿದೆ. ನನ್ನ ತಂದೆ ಆಯ್ಕೆ ಬಯಸಿ ತಾಲ್ಲೂಕಿನ ಬಹಳಷ್ಟು ಜನರು ತಾವು ನಂಬಿದ ದೇವರಿಗೆ ವಿವಿಧ ಹರಿಕೆ,ಪೂಜೆ, ವ್ರತ ಮಾಡುತ್ತಾರೆ’ ಎಂದರು.
**
ಕಾರ್ಯಕರ್ತರು ಇಂಥ ಉರಿ ಬಿಸಿಲಲ್ಲಿ ದೀಡ್ ನಮಸ್ಕಾರ ಹಾಕುತ್ತಾರೆ. ಮಗನಾಗಿ ನಾನು ಬರಿಗಾಲಲ್ಲಿ ಪ್ರಚಾರ ಕೈಗೊಳ್ಳುವುದು ದೊಡ್ಡ ವಿಷಯವಲ್ಲ
- ಅರುಣ ಕಾರಜೋಳ, ಶಾಸಕ ಗೋವಿಂದ ಕಾರಜೋಳ ಪುತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.