ಬೀಳಗಿ: ತಾಲ್ಲೂಕಿನ ಅನಗವಾಡಿಯಲ್ಲಿ ಗುರುವಾರ ಪಿಂಚಣಿ ಅದಾಲತ್‌ನಲ್ಲಿ ಭಾಗವಹಿಸಿ ಪಟ್ಟಣಕ್ಕೆ ಬಂದ ಉಪ ವಿಭಾಗಾಧಿಕಾರಿ ಅಶೋಕ ದುಡಗುಂಟಿ ದಿಢೀರನೆ ಬಸ್ ನಿಲ್ದಾಣದ ಪಕ್ಕದ ಪಾನ್ ಬೀಡಾ ಅಂಗಡಿಗಳು ಹಾಗೂ ದಾಸ್ತಾನು ಮಳಿಗೆಗಳ ಮೇಲೆ ಆರೋಗ್ಯ, ಕಂದಾಯ, ಪಟ್ಟಣ ಪಂಚಾಯ್ತಿ, ಪೊಲೀಸ್ ಇಲಾಖೆಯ ನೆರವಿನೊಂದಿಗೆ ದಾಳಿ ನಡೆಸಿ ವಿವಿಧ ಬಗೆಯ ಗುಟ್ಕಾ ಚೀಟುಗಳನ್ನು ವಶ ಪಡಿಸಿಕೊಂಡರು.
ನ್ಯಾಯಾಲಯ ಹಾಗೂ ಸರಕಾರದ ಆದೇಶದನ್ವಯ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದಾದ ಗುಟ್ಕಾದಂತಹ ವಸ್ತುಗಳ ಮಾರಾಟ ನಿಲ್ಲಿಸಬೇಕೆಂದು ಸೂಚಿಸಿದ ಉಪ ವಿಭಾಗಾಧಿಕಾರಿಗಳು ವ್ಯಾಪಾರ ನಿಲ್ಲಿಸದೆ ಹೋದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಇದುವರೆಗೆ ಆರೋಗ್ಯ, ತಾಲ್ಲೂಕು ಆಡಳಿತ, ಪೊಲೀಸ್, ಪಟ್ಟಣ ಪಂಚಾಯ್ತಿಯವರು ಗುಟ್ಕಾ ಮಾರಾಟದ ಅಂಗಡಿಗಳ ಮೇಲೆ ದಾಳಿ ನಡೆಸಿ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ದಾಳಿಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ದಯಾನಂದ ಕರೆಣ್ಣವರ, ತಹಶೀಲ್ದಾರ್ ಎಂ.ಎ.ಎಸ್. ಬಾಗವಾನ, ಗ್ರೇಡ್ 2 ತಹಶೀಲ್ದಾರ್ ಸಿ.ಟಿ. ಢವಳಗಿ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಬಿ.ಎಂ. ಬಡಿಗೇರ, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ವಿದ್ಯಾಧರ ಶೀಲವಂತ, ಆರೋಗ್ಯ ನಿರೀಕ್ಷಕ ಬಿಜಾಪೂರ, ಇಸ್ಮಾಯಿಲ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.