ADVERTISEMENT

ದುರ್ಬಲ ಮತದಾರರಲ್ಲಿ ಸ್ಥೈರ್ಯ ತುಂಬಿ: ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 14:38 IST
Last Updated 26 ಮಾರ್ಚ್ 2019, 14:38 IST
ಬಾಗಲಕೋಟೆಯ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅಧ್ಯಕ್ಷತೆಯಲ್ಲಿ ಸೆಕ್ಟರ್ ಅಧಿಕಾರಿಗಳಿಗೆ ಹಾಗೂ ವಿವಿಧ ತಂಡಗಳಿಗೆ ತರಬೇತಿ ಕಾರ್ಯಾಗಾರ ನಡೆಯಿತು
ಬಾಗಲಕೋಟೆಯ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅಧ್ಯಕ್ಷತೆಯಲ್ಲಿ ಸೆಕ್ಟರ್ ಅಧಿಕಾರಿಗಳಿಗೆ ಹಾಗೂ ವಿವಿಧ ತಂಡಗಳಿಗೆ ತರಬೇತಿ ಕಾರ್ಯಾಗಾರ ನಡೆಯಿತು   

ಬಾಗಲಕೋಟೆ: ‘ದುರ್ಬಲ ಮತದಾರರು ಆಸೆ, ಆಮಿಷಗಳಿಗೆ ಒಳಗಾಗದೇ ನಿರ್ಭಯದಿಂದ ಮತ ಚಲಾಯಿಸುವಂತೆ ಮಾಡುವುದು ಸೆಕ್ಟರ್ ಅಧಿಕಾರಿಗಳ ಜವಾಬ್ದಾರಿ’ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಸೆಕ್ಟರ್ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾ ಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಪ್ರತಿ ಸೆಕ್ಟರ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ದುರ್ಬಲ ಮತದಾರರನ್ನು ಹಾಗೂ ಗುಂಪುಗಳನ್ನು ಭೇಟಿ ಮಾಡಿ ಅವರ ಜೊತೆ ಚರ್ಚಿಸಬೇಕು. ಅವರ ಅಳಲುಗಳಿಗೆ ಸ್ಪಂದಿಸಿ ಮತದಾನ ಪ್ರಕ್ರಿಯೆಯಲ್ಲಿ ಮುಕ್ತವಾಗಿ ಪಾಲ್ಗೊಳ್ಳುವಂತೆ ಮಾಡಬೇಕು’ ಎಂದರು.

‘ಸೆಕ್ಟರ್ ಅಧಿಕಾರಿಗಳು ಚುನಾವಣೆ ಪ್ರಾರಂಭದಿಂದ ಹಿಡಿದು ಮುಕ್ತಾಯದ ವರೆಗೆ ಕೆಲಸ ನಿರ್ವಹಿಸಬೇಕಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ತಡೆಯುವ ನಿಟ್ಟಿನಲ್ಲಿ ರಚಿಸಲಾದ ಫ್ಲೈಯಿಂಗ್ ಸ್ಕ್ವಾಡ್, ಸ್ಟ್ಯಾಟಿಕ್ ಸರ್ವಲೆನ್ಸ್ ತಂಡ, ವಿಡಿಯೊ ವೀವಿಂಗ್ ತಂಡಗಳ ಜೊತೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಮಾದರಿ ನೀತಿ ಸಂಹಿತೆಗೆ ಸಂಬಂಧಿಸಿದಂತೆ ಯಾವುದೇ ದೂರು ಬಂದಲ್ಲಿ ಸಂಬಂಧಿಸಿದ ತಂಡಗಳಿಗೆ ಮಾಹಿತಿ ರವಾನಿಸುವ ಕೆಲಸವಾಗಬೇಕು’ ಎಂದರು.

ADVERTISEMENT

‘ಹತ್ತಿರದ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಯನ್ನು ಸಹ ಪಡೆದಿರಬೇಕು. ನಿಮ್ಮ ವ್ಯಾಪ್ತಿಯ ಪ್ರತಿಯೊಬ್ಬ ಬಿಎಲ್‌ಒಗಳ ಮೊಬೈಲ್ ನಂಬರ್ ಸಹ ಇಟ್ಟುಕೊಂಡಿರಬೇಕು’ ಎಂದರು.

‘ಸೆಕ್ಟರ್ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಜಾಗೃತ ದಳಕ್ಕೆ ಮಾಹಿತಿ ರವಾನಿಸುವ ಕೆಲಸವಾಗಬೇಕು. ಜಿಲ್ಲೆಯ ಪ್ರತಿ ಯೊಂದು ಮತಕ್ಷೇತ್ರಕ್ಕೆ ಜಾಗೃತ ದಳ ನೇಮಿಸಲಾಗಿದೆ. ಮತದಾನಕ್ಕೆ ಇವಿಎಂ ಯಂತ್ರಗಳನ್ನು ಸಜ್ಜುಗೊಳಿಸುವಲ್ಲಿ ಸೆಕ್ಟರ್ ಅಧಿಕಾರಿಗಳು ತೊಡಗಿಸಿಕೊಂ ಡಿದ್ದು,ಮತದಾನದ ದಿನದಂದು ಮತಗಟ್ಟೆ ಕೇಂದ್ರಕ್ಕೆ ಅವಶ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಕಾರ್ಯಗತಗೊಳಿಸುವ ಕೆಲಸವಾಗಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಶಿಧರ ಕುರೇರ ಮಾತನಾಡಿ, ‘ನಿಮ್ಮ ಪ್ರತಿ ಚಟುವಟಿಕೆ ನೇರವಾಗಿ ವೀಕ್ಷಣೆಗೊಳಗಾಗುತ್ತದೆ. ಹಾಗಾಗಿ ಶ್ರದ್ಧೆಯಿಂದ ಕೆಲಸ ನಿರ್ವಹಿಸಬೇಕು. ಮತದಾನ ಕೇಂದ್ರ, ಮತದಾನದ ಹಿಂದಿನ ದಿನ ನಿರ್ವಹಿಸಬೇಕಾದ ಕೆಲಸ, ಮತದಾನದ ಸಾಮಗ್ರಿಗಳು, ಮತಗಟ್ಟೆ ತಲುಪಿದ ನಂತರ, ಮತದಾನ ಕೇಂದ್ರ ಸಿದ್ಧಪಡಿಸಿಕೊಳ್ಳುವ ಕಾರ್ಯ, ಮತದಾನದ ದಿನದಂದು ಅನುಸರಿಸಬೇಕಾದ ಕಾರ್ಯ ಹಾಗೂ ಮತಗಟ್ಟೆ ಅಧಿಕಾರಿಗಳ ಕರ್ತವ್ಯವಗಳ ಬಗ್ಗೆ ಮಾಹಿತಿ ನೀಡಿದರು. ಜೊತೆಗೆಮತದಾನದ ವರದಿಗಳನ್ನು ಸರಿಯಾದ ಸಮಯಕ್ಕೆ ನೀಡುವ ಕಾರ್ಯವಾಗಬೇಕು’ ಎಂದು ಅವರು ಹೇಳಿದರು.

ಮಾಸ್ಟರ್ ಟ್ರೈನರ್‌ಗಳಾದ ಗಂಗಾಧರ ದಿವಟರ, ಬಿ.ಕೆ.ತೋಟದ ತರಬೇತಿ ನೀಡಿದರು. ಕಾರ್ಯಾಗಾ ರದಲ್ಲಿ ಸೆಕ್ಟರ್ ಅಧಿಕಾರಿಗಳು, ವಿವಿಧ ತಂಡದವರು ಸೇರಿದಂತೆ ಚುನಾವಣಾ ವಿಭಾಗದ ವಿ.ವಿ.ಕುಲಕರ್ಣಿ, ವಿಜಯ ಕರಿಗೌಡರ ಪಾಲ್ಗೊಂಡಿದ್ದರು.

* ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳಿಗೆ ತೆರಳಿ ಮತಗಟ್ಟೆಗಳ ವಾಸ್ತವ ಸ್ಥಿತಿಗಳನ್ನು ಪರಿಶೀಲಿಸಿಬೇಕು. ಸೌಲಭ್ಯ ಖಚಿತ ಪಡಿಸಿಕೊಳ್ಳಬೇಕು

ಆರ್.ರಾಮಚಂದ್ರನ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.