ಕೆರೂರ: ಮಲಪ್ರಭಾ ನದಿ ತಟದ ನೆರೆ ಪೀಡಿತ ತಳಕವಾಡ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆಯೊಂದು ಕುಸಿದು ಬಿದ್ದಿದೆ. ಕುಸಿದ ಮನೆಯೊಳಗಿದ್ದ ಎಮ್ಮೆ ಕರು ಸತ್ತಿದ್ದು, ಅಪಾರ ಪ್ರಮಾಣದ ಬೆಳೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ.
ಮಳೆಯಿಂದಾಗಿ ಚನ್ನಯ್ಯ ಮೂಗನೂರ ಅವರ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಮೂರು ಆಕಳು, ಎರಡು ಎತ್ತು, ಒಂದು ಎಮ್ಮೆಗೆ ಗಾಯಗಳಾಗಿವೆ. ಎಮ್ಮೆ ಕರುವೊಂದು ಅವಶೇಷಗಳಡಿ ಸಿಕ್ಕು ಸತ್ತಿದೆ. ಮನೆ ಮಾಲೀಕ ಚನ್ನಯ್ಯ ಅವರಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಎಎಸ್‌ಐ ಎಸ್.ವೈ. ನಡವಿನಮನಿ, ಕುಳಗೇರಿ ಠಾಣೆಯ ಪೊಲೀಸ್ ಸಿಬ್ಬಂದಿ, ಪಶು ವೈದ್ಯಾಧಿಕಾರಿ ಡಾ. ಬೇನಾಳ ಭೇಟಿ ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಂಚಿಕೆ ಆಗದ `ಆಸರೆ~: ತಳಕವಾಡ ಸೇರಿದಂತೆ ಹಲವು ಪ್ರವಾಹ ಪೀಡಿತ ಗ್ರಾಮದ ಸಂತ್ರಸ್ತರಿಗಾಗಿ ನಿರ್ಮಿಸಲಾದ ಆಸರೆ ಮನೆಗಳು ಪೂರ್ಣಗೊಂಡಿವೆ. ಆದರೆ ಇದುವರೆಗೆ ಸರ್ಕಾರ ಮನೆಗಳನ್ನು ಹಂಚಿಕೆ ಮಾಡಿಲ್ಲ. ಇದೇ ಸಮಸ್ಯೆಗೆ ಕಾರಣ ಎಂಬುದು ಸಂತ್ರಸ್ತರ ಆರೋಪ.
ಸತತ ನೆರೆಯಿಂದಾಗಿ ಮನೆಗಳು ಶಿಥಿಲಗೊಂಡಿವೆ. ಪರ್ಯಾಯ ವ್ಯವಸ್ಥೆ ಇಲ್ಲದೆ ಹಳೆಯ ದುರಾವಸ್ಥೆಯಲ್ಲಿರುವ ಮನೆಯಲ್ಲಿಯೇ ಬದುಕು ಸವೆಸಬೇಕಾಗಿದೆ. ಈಗಾಗಲೇ ಮನೆ ವಿತರಿಸುವಂತೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ದೂರಿದರು.
ನೆರೆಪೀಡಿತ ಪ್ರದೇಶಗಳನ್ನು 2005ಕ್ಕೂ ಮುಂಚೆ ಮುಳುಗಡೆ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿತ್ತು. ಆ ಹಿನ್ನೆಲೆಯಲ್ಲಿಯೇ ಹೊಸ ಮನೆಗಳನ್ನು ನಿರ್ಮಿಸಿದೆ. ಇದುವರೆಗೂ ಮನೆ ಹಂಚಿಕೆ ಮಾಡಿ, ಹಕ್ಕುಪತ್ರ ವಿತರಿಸಲು ನಿರಾಸಕ್ತಿ ತೋರುತ್ತಿದೆ ಎಂದು ಹೇಳಿದರು.
ಇಲ್ಲಿನ ಹಳೆಯ ಮನೆಗಳು ಕುಸಿಯುವ ಭೀತಿಯಲ್ಲಿದ್ದು ಗ್ರಾಮಸ್ಥರು ಜೀವಾಪಾಯದ ಭೀತಿಯಲ್ಲಿದ್ದಾರೆ. ಸಿದ್ಧವಾಗಿರುವ ಹೊಸ ಮನೆಗಳ ಹಂಚಿಕೆಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ಸೊಸೈಟಿ ಅಧ್ಯಕ್ಷ ಮಹಾದೇವಗೌಡ ರಾಮನಗೌಡ್ರ, ಮುರಗಯ್ಯ ಮೇಟಿ, ಈರಯ್ಯ ಮೂಗನೂರ, ಶೇಖರಯ್ಯ ಕಲ್ಲನ್ನವರ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.