ADVERTISEMENT

ನಡುಗುತ್ತಿದೆ ಚಳಿಗೆ ಮುಳುಗಡೆ ಜಿಲ್ಲೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 6:34 IST
Last Updated 13 ಡಿಸೆಂಬರ್ 2013, 6:34 IST
ಬಾಗಲಕೋಟೆ ನವನಗರವನ್ನು ಗುರುವಾರ ಬೆಳಿಗೆ್ಗ ಮಂಜು ಮುಸುಕಿರುವುದರಿಂದ ಕಂಡುಬಂದ ಮನಮೋಹಕ ದೃಶ್ಯ.                                        ಪ್ರಜಾವಾಣಿ ಚಿತ್ರ:ಇಂದ್ರಕುಮಾರ ದಸ್ತೇನವರ
ಬಾಗಲಕೋಟೆ ನವನಗರವನ್ನು ಗುರುವಾರ ಬೆಳಿಗೆ್ಗ ಮಂಜು ಮುಸುಕಿರುವುದರಿಂದ ಕಂಡುಬಂದ ಮನಮೋಹಕ ದೃಶ್ಯ. ಪ್ರಜಾವಾಣಿ ಚಿತ್ರ:ಇಂದ್ರಕುಮಾರ ದಸ್ತೇನವರ   

ಬಾಗಲಕೋಟೆ: ಮಾಗಿ ಚಳಿಯ ಪ್ರತಾಪದಿಂದ ಮುಳುಗಡೆ ಜಿಲ್ಲೆ ಬಾಗಲಕೋಟೆಯ ಜನರು ಅಕ್ಷರಶಃ ಗಡಗಡ ನಡುಗುತ್ತಿದ್ದಾರೆ. ಜಿಲ್ಲೆಯಲ್ಲಿ ಎರಡು ವಾರಗಳಿಂದ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನ ದಾಖಲಾಗಿದೆ. ಸಂಜೆಯಾಗುತ್ತಿಲೇ ಆರಂಭವಾಗುವ ಚಳಿ ಬೆಳಿಗ್ಗೆ 10ರ ವರೆಗೂ ಮುಂದುವರಿಯುವುದರಿಂದ ನಗರ, ಪಟ್ಟಣ ಮತ್ತು ಹಳ್ಳಿಗಳಲ್ಲಿ ಜನ ಸಂಚಾರ ವಿರಳವಾದಂತೆ ಕಂಡುಬರುತ್ತಿದೆ.

ಶೀತಗಾಳಿಯಿಂದ ಜನರ ಅದರಲ್ಲೂ ವೃದ್ಧರು, ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಚಳಿಯಿಂದಾಗಿ ಮುಂಜಾನೆಯ ಕೆಲಸ–ಕಾರ್ಯಗಳಿಗೆ ಕೊಂಚ ಅಡಚಣೆಯಾಗಿದೆ. ಪತ್ರಿಕೆ, ಹಾಲು ಹಂಚುವವರು ಚಳಿಯಿಂದ ತೀವ್ರ ತೊಂದರೆಗೆ ಒಳಗಾಗಿದ್ದಾರೆ.

ಜಿಲ್ಲೆಯಾದ್ಯಂತ ಕಬ್ಬು ಕಟಾವು ಭರದಿಂದ ನಡೆಯುತ್ತಿದ್ದು, ಕೂಲಿ ಕಾರ್ಮಿಕರು ಚಳಿಯಿಂದ ಬೆಳ್ಳಂಬೆಳಿಗ್ಗೆ ಕಬ್ಬಿನ ಹೊಲಕ್ಕೆ ಹೋಗುವುದು ತ್ರಾಸದಾಯಕವಾಗಿದೆ. ರಾತ್ರಿ ಗಸ್ತು ತಿರುಗುವ ಪೊಲೀಸ್‌ ಸಿಬ್ಬಂದಿ ಹಾಗೂ  ಬ್ಯಾಂಕ್‌, ಎಟಿಎಂ, ಮತ್ತಿತರರ ಕಚೇರಿಗಳ ಕಾವಲುಗಾರರ ಗೋಳು ಹೇಳತೀರದು. ಶಾಲಾ, ಕಾಲೇಜು ಮತ್ತು ಕಚೇರಿಗೆ ಬೆಳಿಗ್ಗೆ ಹೋಗಲು ಹಿಂದೇಟು ಹಾಕುವಂತಾಗಿದೆ.

ನಗರ ಪ್ರದೇಶದಲ್ಲಿ ಬೆಳಿಗ್ಗೆ–ಸಂಜೆ ವಾಯು ವಿಹಾರಕ್ಕೆ ಹೋಗುವವರ ಸಂಖ್ಯೆ ಕ್ಷೀಣಗೊಂಡಿದೆ. ಬೆಳಿಗ್ಗೆ ಎದ್ದು ತಣ್ಣೀರು ಸ್ನಾನ ಮಾಡುವ ಮಂದಿ ಕೂಡ ಬಿಸಿನೀರು ಹುಡುಕುವಂತಾಗಿದೆ. ಚಳಿಯಿಂದ ರಕ್ಷಣೆಗಾಗಿ ಜನರು ಬೆಂಕಿ ಕಾಯಿಸುವ ದೃಶ್ಯ ಕಂಡುಬರುತ್ತಿದೆ. ಹೋಟೆಲ್‌ಗಳಲ್ಲಿ ಜನರು ಬಿಸಿ, ಬಿಸಿ ಕಾಫಿ–ಟೀ ಹೀರುವ ದೃಶ್ಯ ಸಾಮಾನ್ಯವಾಗಿದೆ. ಮಂಕಿಕ್ಯಾಪ್‌, ಸ್ವೆಟರ್‌ ಇಲ್ಲದೇ ಅಡ್ಡಾಡದಂತಾಗಿದೆ. ದ್ವಿಚಕ್ರ ವಾಹನಗಳಲ್ಲಂತೂ ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ತಿರುಗಾಡುವುದು ದುಸ್ತರವಾಗಿದೆ.

ಬೆಳಿಗ್ಗೆ–ಸಂಜೆ ಮೈ ಮರಗಟ್ಟುವಂತಹ ಚಳಿ, ಮಧ್ಯಾಹ್ನದ ವೇಳೆಗೆ ನೆತ್ತಿ ಸುಡುವ ಬಿಸಿಲಿನಿಂದ ಚಮ್ಮ ಸುಕ್ಕುಗಟ್ಟಿ, ತುಟಿ, ಮುಖ, ಕೈ–ಕಾಲು ಬಿರುಕು ಬಿಡುತ್ತಿದ್ದು, ಜನರಿಗೆ ಅದರಲ್ಲೂ ಸ್ತ್ರೀಯರಿಗೆ ಹೆಚ್ಚಿನ ಕಿರಿಕಿರಿ ಉಂಟಾಗಿದೆ. ಚಳಿಯಿಂದ ಬಚಾವಾಗಲು ಜನರು ಹರಸಾಹಸ ಪಡುತ್ತಿದ್ದಾರೆ.

ಆಲಮಟ್ಟಿ ಜಲಾಶಯದ ಹಿನ್ನೀರು ವ್ಯಾಪ್ತಿ­ಯಲ್ಲಿ ಇರುವ ಹಳ್ಳಿಗಳು ಹಾಗೂ ಬಾಗಲಕೋಟೆ ನಗರದಲ್ಲಿ ಜಿಲ್ಲೆಯ ಉಳಿದ ಪ್ರದೇಶಗಳಿಗಿಂತ ಹೆಚ್ಚಿನ ಶೀತಗಾಳಿ ಬೀಸುತ್ತಿದೆ. ಹಗಲಿಗಿಂತ ರಾತ್ರಿಯೂ ದೀರ್ಘವಾಗಿ­ರುವುದರಿಂದ ಚಳಿಯಿಂದ ಹೆಚ್ಚು ಹೊತ್ತು ನಿದ್ರೆಯಲ್ಲಿ ಕಳೆಯುವವರ ಸಂಖ್ಯೆ ಹೆಚ್ಚಾಗಿದೆ.

ಅಧಿಕ ಚಳಿಯಿಂದ ಹಿಂಗಾರು ಬೆಳೆಗೆ ಅನುಕೂಲ­ವಾಗಿದೆ ಎಂಬ ಅಭಿಪ್ರಾಯ ರೈತರಿಂದ ಕೇಳಿಬರುತ್ತಿದೆ. ಇತ್ತೀಚಿನ ವರ್ಷಗಳಲ್ಲೇ ಈ ಭಾರಿ ಅತಿ ಕಡಿಮೆ ತಾಪಮಾನ ದಾಖಲಾಗಿರುವ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT