ADVERTISEMENT

ನಿಯಂತ್ರಣಕ್ಕೆ ಬಾರದ ಡೆಂಗೆ: 7 ಬಲಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 7:30 IST
Last Updated 8 ಅಕ್ಟೋಬರ್ 2011, 7:30 IST

ಬಾಗಲಕೋಟೆ: ಜಿಲ್ಲೆಯಲ್ಲಿ ಡೆಂಗೆ ಜ್ವರ ನಿಯಂತ್ರಣಕ್ಕೆ ಬಾರದೆ ದಿನದಿಂದ ದಿನಕ್ಕೆ ವ್ಯಾಪ್ತಿಸುತ್ತಲೇ ಇದೆ. ಜಿಲ್ಲೆಯ ಗ್ರಾಮೀಣ ಭಾಗದ ಜನತೆ ಡೆಂಗೆಯಿಂದ ಕಂಗಾಲಾಗಿದ್ದಾರೆ. ಇದುವರೆಗೆ ಡೆಂಗೆಗೆ 7 ಜನ ಬಲಿಯಾಗಿದ್ದಾರೆ.

ಜಿಲ್ಲೆಯ ಮುಧೋಳ ಮತ್ತು ಜಮಖಂಡಿ ತಾಲ್ಲೂಕಿನ ಜನತೆಯನ್ನು  ಡೆಂಗೆ ಹೆಚ್ಚು ಬಾಧಿಸುತ್ತಿದ್ದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದೇ ನಿರ್ಲಕ್ಷ್ಯಸುತ್ತಿರುವುದೇ ರೋಗ ಹರಡಲು ಪ್ರಮುಖ ಕಾರಣ ಎನ್ನಲಾಗಿದೆ.

~ಪ್ರಜಾವಾಣಿ~ಯೊಂದಿಗೆ ಈ ಕುರಿತು ಶುಕ್ರವಾರ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎ.ಬಿ. ಚೌಧರಿ, ಡೆಂಗೆ ವ್ಯಾಪಿಸದಂತೆ ಜಿಲ್ಲೆಯ ಆರೋಗ್ಯ ಇಲಾಖೆ ಸಾಕಷ್ಟು ಮುಂಜಾಗೃತಾ ಕ್ರಮಕೈಗೊಂಡಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಇದುವರೆಗೆ 33 ಡೆಂಗೆ ಪ್ರಕರಣ ದೃಢಪಟ್ಟಿದೆ. ಇದರಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲೇ 7 ಜನರು ಮೃತಪಟ್ಟಿದ್ದಾರೆ ಎಂದು ಹೇಳಿದರು. ಡೆಂಗೆ ಕಾಣಿಸಿಕೊಂಡಿರುವ ಸ್ಥಳಗಲ್ಲಿ ಪಾಗಿಂಗ್ ಮಾಡಲಾಗಿದೆ, ಸ್ಚಚ್ಛತೆ ಕಾಪಾಡಿಕೊಳ್ಳಲು ಜನತೆಗೆ ಸೂಚನೆ ನೀಡಲಾಗಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿದೆ. ಜ್ವರ ಕಾಣಿಸಿಕೊಂಡ ತಕ್ಷಣ ನಿರ್ಲಕ್ಷ್ಯ ವಹಿಸದೇ ಸೂಕ್ತ ಚಿಕಿತ್ಸೆ ಪಡೆಯಲು ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ ಎಂದರು.

ಶಂಕಿತ ಡೆಂಗೆ ಪೀಡಿತ ರೋಗಿಗಳ ರಕ್ತವನ್ನು ಸಂಗ್ರಹಿಸಿ ಬೆಳಗಾವಿಯಲ್ಲಿರುವ ಸರ್ಕಾರಿ ಪ್ರಯೋಗಾಲಯಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಡೆಂಗೆ ದೃಢಪಟ್ಟರೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
`ಪತ್ರಿಕೆ~ಯೊಂದಿಗೆ ಮಾತನಾಡಿದ ಚಿಕ್ಕಮಕ್ಕಳ ತಜ್ಞ ಡಾ. ಶಂಕರ್ ಎಸ್. ಪಾಟೀಲ, ಕಳೆದ ಮೂರ‌್ನಾಲ್ಕು ತಿಂಗಳಲ್ಲಿ 40ಕ್ಕೂ ಹೆಚ್ಚಿನ ಡೆಂಗೆ ಜ್ವರ ಪೀಡಿತ ಮಕ್ಕಳು ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಡೆಂಗೆ ಪ್ರಕರಣ ದೃಢಪಟ್ಟ ತಕ್ಷಣ ಜಿಲ್ಲಾ ಆರೋಗ್ಯಾಧಿಕಾರಿ ಅವರ ಗಮನಕ್ಕೆ ತರಲಾಗಿದೆ ಎಂದರು.

ಹುನಗುಂದ ಮತ್ತು ಬಾದಾಮಿ ತಾಲ್ಲೂಕಿನಲ್ಲಿ ಹೆಚ್ಚು ಡೆಂಗೆ ಜ್ವರ ಬಾಧಿತ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.