ADVERTISEMENT

ನಿಸರ್ಗ ನಿರ್ಮಿತ ಕಲಾಕೃತಿ ‘ಬಾವನ್ ಬಂಡೆ’

ಎಸ್.ಎಂ.ಹಿರೇಮಠ
Published 19 ನವೆಂಬರ್ 2017, 4:08 IST
Last Updated 19 ನವೆಂಬರ್ 2017, 4:08 IST
ಆಕಾಶದೆತ್ತರಕ್ಕೆ ಮುಖಮಾಡಿ ನಿಂತಿರುವ ನಸುಗೆಂಪು ವರ್ಣದ ಬೃಹತ್‌ ಏಕಶಿಲಾ ಬಂಡೆ
ಆಕಾಶದೆತ್ತರಕ್ಕೆ ಮುಖಮಾಡಿ ನಿಂತಿರುವ ನಸುಗೆಂಪು ವರ್ಣದ ಬೃಹತ್‌ ಏಕಶಿಲಾ ಬಂಡೆ   

ಚಾಲುಕ್ಯರ ರಾಜಧಾನಿ ಬಾದಾಮಿ ಪರಿಸರದಲ್ಲಿನ ಬಂಡೆಗಳ ಸಾಲುಗಳ ಕಲಾ ಪ್ರಿಯರನ್ನು ಸ್ವಾಗತಿಸುವಂತೆ ಆಕಾಶದೆತ್ತರಕ್ಕೆ ಬೆಳೆದು ನಿಂತಿವೆ. ಮೇಣಬಸದಿಯ ಎದುರು ಬಡಗಣದಲ್ಲಿ ದೂರದಿಂದ ಕಣ್ಣು ಹಾಯಿಸಿದರೆ ಒಂದೇ ಶಿಲೆಯಂತೆ ಗೋಚರಿಸುತ್ತದೆ. ಇಲ್ಲಿರುವ ಬೆಟ್ಟ ಮರಳು ಮಿಶ್ರಿತ ನಸುಗೆಂಪು ಬಣ್ಣದ ಬಂಡೆಗಳು ಗಾಳಿ, ಮಳೆ ಬಿಸಿಲಿಗೆ ಮೈಯೊಡ್ಡಿ ನಿಂತಿದೆ. ನಿಸರ್ಗವೆನ್ನುವ ಕಲಾಕಾರನ ಕೈಯಲ್ಲಿ ಅತ್ಯಂತ ಸೂಕ್ಷ್ಮವಾಗಿ ಕಲಾತ್ಮಕತೆ ಈ ಬಂಡೆಗಳಲ್ಲಿ ಅರಳಿದೆ.

ದೂರದಿಂದ ಒಂದೇ ಬಂಡೆ ಕಂಡರೆ ಸಮೀಪಕ್ಕೆ ಹೋದಂತೆ ಒಂದೊಂದು ಬಂಡೆ ಬೇರೆ ಬೇರೆಯಾಗಿವೆ. ಒಟ್ಟು 52 ಬಂಡೆಗಳು ಇದ್ದ ಕಾರಣ ಇತಿಹಾಸಕಾರರು ಬಾವನ್‌ ಬಂಡೆ ಕೋಟೆ ಎಂದು ಉಲ್ಲೇಖಿಸಿದ್ದಾರೆ.

ಚಾಲುಕ್ಯ ದೊರೆ ಒಂದನೇ ಪುಲಿಕೇಶಿ ಕ್ರಿ.ಶ. 543ರಲ್ಲಿ ಕೋಟೆ ಗೋಡೆಯನ್ನು ನಿರ್ಮಿಸಿದ್ದ ಎಂಬುದಕ್ಕೆ ಶಾಸನದ ಸಾಕ್ಷಿ ದೊರೆಯುತ್ತದೆ. ಬಾದಾಮಿ ಚಾಲುಕ್ಯರ ಕಾಲದ ಮೊಟ್ಟಮೊದಲ ಸಂಸ್ಕೃತ ಶಾಸನ ಇದಾಗಿದೆ.

ADVERTISEMENT

ಪಕ್ಕದಲ್ಲಿ ಎರಡೂ ಕಡೆಗಿರುವ ಎತ್ತರದ ಬಂಡೆಗಳ ಮಧ್ಯೆ ದೊಡ್ಡದಾಗಿ ಬಿರುಕು ಬಿಟ್ಟ ಕಂದಕದ ಸ್ಥಳವನ್ನು ಆಯ್ದುಕೊಂಡು ಬಂಡೆಗಳನ್ನು ಜೋಡಿಸಿದಂತೆ ದುರ್ಗವನ್ನು ರಚಿಸಲಾಗಿದೆ. ಕೆಲವೆಡೆ ಬಂಡೆಗಳನ್ನು ಕೊರೆಯಲಾಗಿದೆ. ಸೂಕ್ಷ್ಮಸಂವೇದನೆಯ ಕವಿಗಣ್ಣಿನಿಂದ ಸುತ್ತಲಿನ ಪರಿಸರದ ವೈವಿಧ್ಯಮಯ ಬೃಹತ್‌ ಬೆಟ್ಟಗಳನ್ನು ವೀಕ್ಷಿಸಿಸುವಾಗ ಮೈಮನ ಪುಳಕಗೊಳಿಸುವ ಚೆಲುವಿನ ದೃಶ್ಯಗಳ ದರ್ಶನವಾಗುತ್ತದೆ. ಕಾವ್ಯದ ರಸಾನುಭವವಾಗುತ್ತದೆ.

ಬಾವನ್‌ ಬಂಡೆ ಕೋಟೆಯ ಒಡಲೊಳಗೆ ಕಂದಕ ಪ್ರದೇಶದಲ್ಲಿ ಮಾರ್ಗ ರೂಪಿಸಲಾಗಿದೆ. 52 ನೈಸರ್ಗಿಕ ಬಂಡೆಗಳ ಮಧ್ಯೆ ರಸ್ತೆ ಸಂಪರ್ಕವನ್ನು ಕಲ್ಪಿಸಲಾಗಿದೆ.
ಏಕ ಶಿಲೆಯ ಮೇಲೆ ಶಿಲಾ ಮಂಟಪ, ಮಾಲೆಗಿತ್ತಿ ಶಿವಾಲಯ, ವಾತಾಪಿ ಗಣೇಶನ ಗುಡಿ ಮತ್ತು ಬೆಟ್ಟದ ತುದಿಯಲ್ಲಿ ವಿಷ್ಣು ದೇವಾಲಯವನ್ನು ವೀಕ್ಷಿಸಲು ಇದೇ ಕೋಟೆಯ ರಸ್ತೆಯಿಂದ ಒಳಗೆ ಹೋಗಬೇಕು.

ಇಲ್ಲಿ ಪ್ರವಾಸಿಗರು ವೀಕ್ಷಣೆಗೆ ಹೋಗುವುದು ವಿರಳ. ಇಡೀ ಕೋಟೆಯನ್ನು ಸುತ್ತು ಹಾಕಿ ಬರಬೇಕೆಂದರೆ ಅಂದಾಜು ಎರಡು ಗಂಟೆ ಬೇಕು. ಬೃಹತ್‌ ಬಂಡೆಗಳ ಮೇಲೆ ನೇಸರನ ಕಿರಣಗಳ ಚೆಲ್ಲಾಟದಿಂದ ಒಂದು ಬಾರಿ ರಜತದಂತೆ ಸಂಜೆ ಸೂರ್ಯನ ಹೊಂಬಣ್ಣದಿಂದ ಅಪರಂಜಿಯ ವರ್ಣದಂತೆ ಬೆಟ್ಟಗಳು ಕಂಗೊಳಿಸುತ್ತವೆ. ಬೆಟ್ಟಗಳ ಸೌಂದರ್ಯ ಸವಿಯಲು ನೀವೂ ಬಾದಾಮಿಗೆ ಬನ್ನಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.