ADVERTISEMENT

ನೀರು ಸಿಂಪಡಿಸದ ಕಾರಣ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 5:15 IST
Last Updated 20 ಅಕ್ಟೋಬರ್ 2017, 5:15 IST
ಬಾದಾಮಿ ಕೆಶಿಪ್ ರಸ್ತೆ ಕಾಮಗಾರಿಯಲ್ಲಿ ರಸ್ತೆಗೆ ನೀರು ಸಿಂಪಡಿಸದ ಕಾರಣ ಹೋರಾಟ ಸಮಿತಿ ಸದಸ್ಯರು ಮತ್ತು ಸಾರ್ವಜನಿಕರು ರಸ್ತೆ ತಡೆ ಮಾಡಿದರು.
ಬಾದಾಮಿ ಕೆಶಿಪ್ ರಸ್ತೆ ಕಾಮಗಾರಿಯಲ್ಲಿ ರಸ್ತೆಗೆ ನೀರು ಸಿಂಪಡಿಸದ ಕಾರಣ ಹೋರಾಟ ಸಮಿತಿ ಸದಸ್ಯರು ಮತ್ತು ಸಾರ್ವಜನಿಕರು ರಸ್ತೆ ತಡೆ ಮಾಡಿದರು.   

ಬಾದಾಮಿ: ಮೂರು ದಿನಗಳಿಂದ ರಸ್ತೆಗೆ ನೀರು ಸಿಂಪಡಿಸದ ಕಾರಣ ಸ್ಥಳೀಯ ಹೋರಾಟ ಸಮಿತಿ ಸದಸ್ಯರು ಮತ್ತು ಸಾರ್ವಜನಿಕರು ಆಕ್ರೋಶಗೊಂಡು ಗುರುವಾರ ರೈಲ್ವೆ ಸ್ಟೇಶನ್‌ ರಸ್ತೆಯ ವಿದ್ಯುತ್‌ ಇಲಾಖೆಯ ಬಳಿ ರಸ್ತೆಯಲ್ಲಿ ಕಲ್ಲುಗಳನ್ನಿಟ್ಟು ಒಂದು ಗಂಟೆ ರಸ್ತೆ ತಡೆ ನಡೆಸಿದರು.

ಕೆಶಿಪ್‌ ರಸ್ತೆ ಕಾಮಗಾರಿಯಲ್ಲಿ ರಸ್ತೆಯನ್ನು ಸಂಪೂರ್ಣವಾಗಿ ಅಗೆದಿದ್ದಾರೆ. ಇಡೀ ರಸ್ತೆಯೆಲ್ಲ ಕೆಂಪುಮಯವಾಗಿದೆ. ರಸ್ತೆಯಲ್ಲಿ ವಾಹನಗಳು ಹಾಯ್ದು ಹೋದರೆ ಮೈಯೆಲ್ಲ ದೂಳುಮಯವಾಗುತ್ತದೆ ಎಂದು ಸಾರ್ವಜನಿಕರು ಆರೋಪಿಸಿದರು.

ನಗರ ಹೋರಾಟ ಸಮಿತಿಯ ಅಧ್ಯಕ್ಷ ಮಲ್ಲಣ್ಣ ಹಿರೇಹಾಳ ಬುಧವಾರ ಗುತ್ತಿಗೆದಾರರಿಗೆ ರಸ್ತೆಯೆಲ್ಲ ದೂಳುಮಯವಾಗಿದೆ. ರಸ್ತೆಗೆ ನೀರು ಹೊಡೆಯುವಂತೆ ದೂರವಾಣಿಯ ಮೂಲಕ ಹೇಳಿದರೂ ಸಹ ಅವರು ಸ್ಪಂದಿಸಿಲ್ಲ. ಹಾಗಾಗಿ ರಸ್ತೆ ತಡೆ ಮಾಡಿದ್ದೇವೆ ಎಂದರು.

ADVERTISEMENT

ರಸ್ತೆ ತಡೆಯಿಂದ ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗಲು ಜನರು ಪರದಾಡಿದರು. ಬಾಗಲಕೋಟೆ ಮತ್ತು ಗದುಗಿಗೆ ಹೋಗುವ ಬಸ್‌ಗಳು, ಟಂ ಟಂ ಮತ್ತು ದ್ವಿಚ್ರಕ ವಾಹನಗಳನ್ನು ತಡೆದರು.

ಇದು ನಿಮ್ಮ ಊರ ಸಮಸ್ಯೆ ನಾವು ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟಿದ್ದೇವೆ. ಕೆಲವರು ದೀಪಾವಳಿ ಹಬ್ಬ ಮಾಡಲು ಪೂಜೆಯ ಸಾಮಾನು ತೆಗೆದುಕೊಂಡು ಹಳ್ಳಿಗಳಿಗೆ ಹೊರಟಿದ್ದೇವೆ.

ಬೇರೆ ಊರಿನ ಪ್ರಯಾಣಿಕರಿಗೆ ಮತ್ತು ಜನರಿಗೆ ಯಾಕೆ ತೊಂದರೆ ಕೊಡುತ್ತೀರಿ ಎಂದು ಬಸ್‌ನಲ್ಲಿದ್ದ ಪ್ರಯಾಣಿಕರು ಹೋರಾಟ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಒಂದು ಗಂಟೆಯ ನಂತರ ಗುತ್ತಿಗೆದಾರರು ರಸ್ತೆಗೆ ನೀರು ಹೊಡೆಯಲು ಕಳಿಸಿದಾಗ ಹೋರಾಟ ಸಮಿತಿ ಮತ್ತು ಸಾರ್ವಜನಿಕರು ರಸ್ತೆ ತಡೆಯನ್ನು ಹಿಂದಕ್ಕೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.