ADVERTISEMENT

ಪಕ್ಷಭೇದ ಮರೆತು ವಾಗ್ದಾಳಿ, ಚರ್ಚೆ

ಬೀಳಗಿ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 9:48 IST
Last Updated 20 ಜುಲೈ 2013, 9:48 IST

ಬೀಳಗಿ: `ತಾಲ್ಲೂಕಿನಲ್ಲಿ ರಾತ್ರಿಯುದ್ದಕ್ಕೂ ಮರಳನ್ನು ಕದ್ದು ಹೊರ ರಾಜ್ಯಗಳಿಗೆ ಸಾಗಣೆ ಮಾಡುವ ವಾಹನಗಳನ್ನು ನೋಡಿಯೂ ಸುಮ್ಮನಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಸಾಲ ಮಾಡಿ ಮನೆ ಕಟ್ಟಿಕೊಳ್ಳಲು ಬಾಡಿಗೆ ಟ್ರ್ಯಾಕ್ಟರ್‌ನಲ್ಲಿ ಮರಳು ತೆಗೆದುಕೊಂಡು ಹೋಗುವ ಬಡವರ ಟ್ರ್ಯಾಕ್ಟರ್ ನಿಲ್ಲಿಸಿ ದಂಡ ಹಾಕುತ್ತೀರಿ.

ಕಳ್ಳತನದಿಂದ ಮರಳು ಸಾಗಣೆ ಮಾಡುವ ಎಷ್ಟು ವಾಹನಗಳನ್ನು ಹಿಡಿದು ಕೇಸು ಹಾಕಿದ್ದೀರಿ, ಎಷ್ಟು ದಂಡ ವಸೂಲಿ ಮಾಡಿದ್ದೀರಿ' ಎಂದು ಇಡೀ ಲೋಕೋಪಯೋಗಿ ಇಲಾಖೆಯನ್ನೇ ಪಕ್ಷ ಬೇಧ ಮರೆತು ಎಲ್ಲ ಸದಸ್ಯರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಶುಕ್ರವಾರ ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ನಡೆದ ತಾಲ್ಲೂಕು ಪಂಚಾಯ್ತಿಯ 15ನೇ ಸಾಮಾನ್ಯ ಸಭೆಯಲ್ಲಿ ಕೊನೆಯ ಅವಧಿಯಲ್ಲಿ ಒಂದೆರಡು ಇಲಾಖೆಗಳಿಂದ ವಿವರಣೆ ಪಡೆಯುವುದನ್ನು ಬಿಟ್ಟರೆ ಇಡೀ ಸಭೆಯ ಚರ್ಚೆ ಮುಡಿಪಾಗಿದ್ದುದು ಲೋಕೋಪಯೋಗಿ ಇಲಾಖೆಯ ಲೋಪದೋಷಗಳ ಕುರಿತಾಗಿಯೇ ಆಗಿತ್ತು.

ಮರಳು ಸಾಗಾಣಿಕೆಯ ವಾಹನಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವುದಷ್ಟೇ ನಮ್ಮ ಕೆಲಸ. ಪಂಚನಾಮೆ ಮಾಡುವುದು, ಕೇಸು ಹಾಕುವುದು ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯ ಕೆಲಸ. ದಂಡ ಹಾಕುವುದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕೆಲಸ. ಅವರು ಸಹಕಾರ ಕೊಡದಿದ್ದಲ್ಲಿ ನಾವಷ್ಟೇ ಏನು ಮಾಡಲು ಸಾಧ್ಯ? ಭಾರಿ ವಾಹನಗಳನ್ನು ಹೊತ್ತುಕೊಂಡು ಬಂದು ನಮ್ಮ ಕಚೇರಿಯ ಮುಂದೆ ಇಟ್ಟುಕೊಳ್ಳಲು ಸಾಧ್ಯವೆ? ಎಂದು ಲೋಕೋಪಯೋಗಿ ಎಂಜಿನಿಯರ್ ಎಂ.ಪಿ. ನಾಡಗೌಡ ಮರು ಪ್ರಶ್ನಿಸಿದರು.

`ಓ ಪೊಲೀಸ್‌ರೇನ ಬಿಡ್ರೀ, ಯಾವ್ದರೇ ಕ್ರಾಸ್‌ನೊಳ್ಗ ನಿಂತು ಸೈಕಲ್ ಮೋಟಾರ್ ನಿಲ್ಸಿ ರೊಕ್ಕಾ ವಸೂಲಿ ಮಾಡ್ತಾರ, ಈ ಉಸಕಿನ ಗಾಡಿ ಹಿಡಿಯೂದ್ಕ ಅವ್ರಿಗೆಲ್ಲಿ ಟೈಮ್ ಸಿಗತೇತಿ' ಎಂದು ಸದಸ್ಯ ಹೊಳಬಸು ಬಾಳಶೆಟ್ಟಿ ಪೊಲೀಸರ ಮೇಲೆ ಹರಿ ಹಾಯ್ದರು.

ರಸ್ತೆ ಅತಿಕ್ರಮಣ ತೆರವುಗೊಳಿಸಲು, ಮರಳು ತುಂಬಿದ ಭಾರಿ ವಾಹನಗಳ ಓಡಾಟದಿಂದ ಗ್ರಾಮೀಣ ರಸ್ತೆಗಳು ಹಾಳಾಗಿ ಹಳ್ಳಿಗಳನ್ನು ಕಡೆಗಣಿಸುವುದು, ತಮ್ಮೂರಿನಲ್ಲಿಯೇ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನಡೆದರೂ ಸ್ಥಳೀಯ ಜನ ಪ್ರತಿನಿಧಿಗಳನ್ನು ಆಹ್ವಾನಿಸದೇ ಇರುವುದು, ಕೇಳಿದ ಮಾಹಿತಿ ಇಲ್ಲದೇ ಸಭೆಗೆ ಏಕೆ ಬರುತ್ತೀರಿ ಎಂದು  ಹತ್ತಾರು ಆಕ್ಷೇಪಗಳನ್ನೆತ್ತಿ ಲೋಕೋಪಯೋಗಿ ಇಲಾಖೆಯ ಕೋಟೆ ಗೋಡೆಯ ಮೇಲೆಯೇ ಜನ ಪ್ರತಿನಿಧಿಗಳು ದಾಳಿ ನಡೆಸಿ ಕೋಟೆ ಗೋಡೆ ಅಲ್ಲಾಡುವಂತೆ ಮಾಡಿದರು. ಸಭೆಯಲ್ಲಿ ಸದಸ್ಯರು ನಡೆಸಿದ ಚರ್ಚೆಗೆ ತಾಲ್ಲೂಕಿನ ಎರಡೂ ನದಿ ದಡದ ಮರಳು ಕೆಂಡದಂತೆ ಕಾಯ್ದು ಹೋಯಿತು.

ಇದ್ದುದರಲ್ಲಿಯೇ ಸಮಾಧಾನ ನೀಡಿದ್ದು ಮೀನು ಕೃಷಿಗೆ ಪ್ರತಿ ಹೆಕ್ಟೇರ್‌ಗೆ ಮೀನುಗಾರಿಕೆ ಇಲಾಖೆ ತಾಂತ್ರಿಕ ನೆರವಿನೊಂದಿಗೆ ರೂ 1ಲಕ್ಷ 60ಸಾವಿರ ಸಹಾಯ ಧನ ನೀಡುವುದು, 15ಜನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಮೀನು ಹಿಡಿಯಲು ಜಾಳಿಗೆ ಖರೀದಿಸಲು ಅನುದಾನ ಕೊಡುವುದಾಗಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಸ್. ಬಿರಾದಾರ ಸಭೆಗೆ ತಿಳಿಸಿದಾಗ ಹಾಗೂ ಕೊಳವೆ ಬಾವಿಯಿಂದ ಕೂಡಾ ಕಲುಷಿತ ನೀರು ಪೂರೈಕೆಯಾಗುವ ಸಾಧ್ಯತೆ ಇದ್ದು ಪ್ರತಿ ಶಾಲೆಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಎಲ್ಲ ಸದಸ್ಯರು ಒಕ್ಕೊರಲಿನಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದಾಗ ಮಾತ್ರ. ಮುಂದಿನ ಸಭೆಗೆ ಮುಂಚಿತವಾಗಿಯೇ ತಮ್ಮ ತಮ್ಮ ಇಲಾಖೆಯ ಪ್ರಗತಿ ವರದಿಗಳನ್ನು ಕೊಟ್ಟಲ್ಲಿ ಸದಸ್ಯರಿಗೆ ಅಧ್ಯಯನ ಮಾಡಲು ಅನುಕೂಲವಾಗುತ್ತದೆ ಎಂದು ಸಭೆಯಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಯಿತು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಯಲ್ಲಪ್ಪ ಯಮನಪ್ಪ ಹಳ್ಳೂರ ಅಧ್ಯಕ್ಷತೆ ವಹಿಸಿದ್ದರು. ಇಂದ್ರಾಬಾಯಿ ಬಿರಾದಾರ, ಸದಸ್ಯರಾದ ಹೊಳಬಸು ಬಾಳಶೆಟ್ಟಿ, ಜಿತೇಂದ್ರ ಪಾಟೀಲ, ಶ್ರೆಕಾಂತ ಸಂದಿಮನಿ, ರಾಜೇಂದ್ರ ದೇಶಪಾಂಡೆ, ಹನುಮಂತ ಮಾದರ, ಭಾರತಿ ಮುತ್ತಲಗೇರಿ, ಭಾರತಿ ಹದ್ಲಿ, ಜಯಶ್ರೀ ತಿರಕಣ್ಣವರ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಚ್.ಆರ್. ನಿರಾಣಿ, ತುಂಗಾಬಾಯಿ ಮೋಕಾಶಿ, ತಾಲ್ಲೂಕಿನ ಅನುಷ್ಠಾನ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಆರ್.ಸಿ. ಕಮತ ಸ್ವಾಗತಿಸಿದರು. ಚವಾಣ ಹಿಂದಿನ ಸಭೆಯ ಠರಾವುಗಳನ್ನು ಓದಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಜಿ. ದಾಸರ ವಂದಿಸಿದರು. ಪ್ರಾರಂಭದಲ್ಲಿ ಉತ್ತರಾಖಂಡ ದುರಂತದಲ್ಲಿ ಮಡಿದ ಯಾತ್ರಿಕರು ಹಾಗೂ ಯೋಧರಿಗೆ, ಹೃದಯಾಘಾತದಿಂದ ನಿಧನರಾದ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಇಟಕನ್ನವರ ಅವರಿಗಾಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.