ADVERTISEMENT

ಪಡಿತರ ಚೀಟಿಗಾಗಿ ಪರದಾಟ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 6:42 IST
Last Updated 4 ಜೂನ್ 2013, 6:42 IST

ಹುನಗುಂದ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣವೇ ಬಿಪಿಎಲ್ ಕಾರ್ಡ್‌ದಾರರಿಗೆ ಕೆಜಿಗೆ ಒಂದು ರೂಪಾಯಿಯಂತೆ 30 ಕೆಜಿ ಪಡಿತರ ಅಕ್ಕಿ ಕೊಡುವುದನ್ನು ಹೇಳಿದ್ದೇ ತಡ ಫಲಾನುಭವಿಗಳಾಗಲು ಜನರು ಇಲ್ಲಿನ ಮಿನಿವಿಧಾನಸೌಧದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಚೇರಿಯ ಮುಂದೆ ಕಿಟಿಕಿಯಿರುವ ಎಲ್ಲ ಕಡೆ ದಿನವಿಡಿ ಕಾಯುವುದು ಸಾಮಾನ್ಯವಾಗಿದೆ.

ಸಾಲಿನಲ್ಲಿ ನಿಂತವರು ತಮ್ಮ ಪಾಳಿ ಯಾವಾಗ ಬರುತ್ತದೆ. ಕಾರ್ಡ್ ಸಿಗುವುದೋ ಇಲ್ಲವೋ ಎಂಬ ಆತಂಕದಲ್ಲಿ ಹತಾಶೆಗೊಂಡು ಆಗಾಗ ಕೂಗುವುದು, ಮತ್ತೆ ಸಾಲಿನಲ್ಲಿ ಇಣುಕಿ ನೋಡುವುದು ನಡೆದರೆ ಮತ್ತೆ ಕೆಲವರು ಸಿಕ್ಕ ಸಿಕ್ಕ ಕಡೆ ಕಿಟಿಕಿಯಲ್ಲಿ ಅಂಗಲಾಚುತ್ತಿದ್ದರು. ಈ ಮಧ್ಯ ಬಯೋಮೆಟ್ರಿಕ್‌ಗಾಗಿ ಹೆಬ್ಬೆರಳು ಒತ್ತುವ ಪ್ರಕ್ರಿಯೆ ನಡೆದು ವಿಳಂಬವಾಗುತ್ತಿದೆ. ದೂರುವುದು ನಡೆದಿದೆ. ಒಂದೆರಡು ವಾರದಿಂದ ಇಲ್ಲಿ ಈ ದೃಶ್ಯಗಳು ಸಾಮಾನ್ಯ.

  ಈ ವ್ಯವಸ್ಥೆಯ ಬಗ್ಗೆ ವಿಚಾರಿಸಲು `ಪ್ರಜಾವಾಣಿ' ಭೇಟಿ ನೀಡಿದಾಗ ಅಲ್ಲಿನ ಆಹಾರ ಮತ್ತು ನಾಗರಿಕ ಸರಬರಾಜು ಶಿರಸ್ತೇದಾರ ಎ. ಎಚ್. ಢವಳಗಿ ಮಾಹಿತಿ ನೀಡಿ, `ಜನರು ತಾಳ್ಮೆಯಿಂದ ಸಹಕರಿಸಿದರೆ ಕಾರ್ಯ ಬೇಗ ಆಗುತ್ತದೆ. ಅರ್ಹರು ಇದರ ಲಾಭ ಪಡೆಯಬೇಕೆಂಬ ಸರ್ಕಾರದ ಉದ್ದೇಶಕ್ಕೆ ಜನರು ಪೂರಕವಾಗಿ ವರ್ತಿಸಬೇಕು. ಇನ್ನು ಮೇಲೆ ಯಾವುದೇ ಅಕ್ರಮ ನಡೆಯದಂತೆ ತಡೆಯಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಹಂತ ಹಂತವಾಗಿ ತರಲಾಗುತ್ತಿದೆ' ಎಂದರು.

ಈವರೆಗಿನ ಪಡಿತರ ಚೀಟಿಗಳ ಸಂಖ್ಯೆಯ ಮಾಹಿತಿ ಕೊಟ್ಟು, ಸದ್ಯ 44,608 ಬಿಪಿಎಲ್, 16,113 ಎಪಿಎಲ್ ಮತ್ತು 7,645 ಫಲಾನುಭವಿಗಳು ಇದ್ದಾರೆ. ಬಿಪಿಎಲ್ ಕಾರ್ಡ್‌ದಾರರಿಗೆ ಒಬ್ಬ ಸದಸ್ಯನಿಗೆ 4 ಕೆಜಿಯಂತೆ ಮನೆಯ ಸದಸ್ಯ ಸಂಖ್ಯೆಯನುಗುಣ ಗರಿಷ್ಠ 30 ಕೆಜಿ ಅಕ್ಕಿ ಮತ್ತು 1 ಕೆಜಿ ಸಕ್ಕರೆ ಕೊಡಲಾಗುತ್ತದೆ. ಎಪಿಎಲ್ ಕಾರ್ಡ್‌ದಾರರಿಗೆ 10 ಕೆಜಿ ಅಕ್ಕಿ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ 29 ಕೆಜಿ ಅಕ್ಕಿ, 6 ಕೆಜಿ ಗೋಧಿ, 1 ಕೆಜಿ ಸಕ್ಕರೆ ಮತ್ತು 3 ಲೀ. ಸೀಮೆಎಣ್ಣೆ ಕೊಡಲಾಗುವುದು.

ಕಾರ್ಡ್‌ದಾರರು ಪಡಿತರದಲ್ಲಿ ಪಡೆದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಿಕೊಳ್ಳುತ್ತಿದ್ದಾರೆ ಎಂಬ ವದಂತಿಗಳಿವೆ. ಈ ವಿಷಯ ಇಲಾಖೆಯ ಗಮನಕ್ಕೆ ಬಂದರೆ ಅಂಥವರ ಕಾರ್ಡನ್ನು ಮುಟ್ಟುಗೋಲು ಹಾಕುವುದಲ್ಲದೇ ಶಿಕ್ಷೆಗೊಳಪಡಿಸಲಾಗುವುದು. ಪಡಿತರ ಚೀಟಿ ನೋಂದಣಿ ಕಾಲಕ್ಕೆ ಕೊಡುವ ಮಾಹಿತಿಗಳು ಸಂಪೂರ್ಣ ಸತ್ಯವಾಗಿರಲಿ. ಅರ್ಹರಲ್ಲದವರು ಚೀಟಿ ಪಡೆದದ್ದು ಗಮನಕ್ಕೆ ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಅರ್ಹ ಫಲಾನುಭವಿಗಳು ಇಲಾಖೆ ನಿಗದಿ ಮಾಡಿದ ಕಡೆ ನೋಂದಾಯಿಸಿಕೊಳ್ಳಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.