ADVERTISEMENT

ಪದವೀಧರ ಮತದಾರರಿಗೆ ಪುಸ್ತಕಗಳ ಕೊಡುಗೆ!

ಪಕ್ಷೇತರ ಅಭ್ಯರ್ಥಿ ಎಲ್‌.ಪಿ.ಸುಭಾಷ್‌ಚಂದ್ರರ ವಿನೂತನ ಪ್ರಯತ್ನ

ಕೆ.ನರಸಿಂಹ ಮೂರ್ತಿ
Published 2 ಜೂನ್ 2018, 8:23 IST
Last Updated 2 ಜೂನ್ 2018, 8:23 IST
ಎಲ್‌.ಪಿ.ಸುಭಾಷ್‌ಚಂದ್ರ,
ಎಲ್‌.ಪಿ.ಸುಭಾಷ್‌ಚಂದ್ರ,   

ಬಳ್ಳಾರಿ: ಈಶಾನ್ಯ ಪದವೀಧರ ಕ್ಷೇತ್ರದ ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಪದವೀಧರ ಮತದಾರರನ್ನು ಭೇಟಿ ಮಾಡುತ್ತಿರುವ ಪಕ್ಷೇತರ ಅಭ್ಯರ್ಥಿ, ಕೂಡ್ಲಿಗಿಯ ಕಾನಾಮಡುಗು ಉಪನ್ಯಾಸಕ ಎಲ್‌.ಪಿ.ಸುಭಾಷ್‌ಚಂದ್ರ ಆಯ್ದ ಮತದಾರರಿಗೆ ಪುಸ್ತಕಗಳನ್ನು ವಿತರಿಸುತ್ತಿದ್ದಾರೆ.

ಅವರ ಈ ಪುಸ್ತಕ ಸೇವೆಗೆ ಲಡಾಯಿ ಪ್ರಕಾಶನ ಕೈ ಜೋಡಿಸಿದ್ದು. ಸುಮಾರು ಹತ್ತಕ್ಕೂ ಹೆಚ್ಚು ಶೀರ್ಷಿಕೆಯ ಕೃತಿಗಳನ್ನು ಶೇ 50 ರಿಯಾಯಿತಿ ದರಕ್ಕೆ ನೀಡಿದೆ.

‘ಸಾವಿತ್ರಿ ಬಾಪುಲೆ, ಜ್ಯೋತಿ ಬಾಪುಲೆ, ನಾನು ಸಾಯಲು ಸಿದ್ಧ, ಭಗತ್‌ಸಿಂಗ್‌, ಸುಭಾಷ್‌ಚಂದ್ರ ಬೋಸ್‌, ಚೆಗೆವಾರ, ಬಸವ ಪ್ರಜ್ಞೆ, ಬಸವಣ್ಣ ಮತ್ತು ಅಂಬೇಡ್ಕರ್‌, ಗಾಂಧಿ ಮತ್ತು ಅಸ್ಪೃಶ್ಯತೆ ವಿಮೋಚನೆ ಸೇರಿದಂತೆ ಹಲವು ಕೃತಿಗಳ ವಿತರಣೆ ಕಾರ್ಯ ಕ್ಷೇತ್ರ ವ್ಯಾಪ್ತಿಯ ಮತದಾರರಿಗೆ ವಿತರಿಸುವ ಕಾರ್ಯಭರದಿಂದ ನಡೆದಿದೆ’ ಎಂದು ಅವರು ನಗರದಲ್ಲಿ ಶುಕ್ರವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ವಿಚಾರ ಕ್ರಾಂತಿ:

‘ಜಾತ್ಯತೀತ ನಿಲುವು, ಸಮ ಸಮಾಜದ ನಿರ್ಮಾಣ, ದಮನಿತರ ಪರವಾದ ನಡೆಯನ್ನು ಉತ್ತೇಜಿಸುವಂಥ ಕೃತಿಗಳನ್ನೇ ಆಯ್ಕೆ ಮಾಡಿಕೊಂಡಿದ್ದೇವೆ. ನಿರ್ದಿಷ್ಟ ಪಕ್ಷ ಅಥವಾ ವ್ಯಕ್ತಿಯ ಪರ ಅಥವಾ ವಿರುದ್ಧ ಅಭಿಪ್ರಾಯ ಮೂಡಿಸುವಂಥ ಉದ್ದೇಶವೂ ನಮಗಿಲ್ಲ. ಪುಸ್ತಕವನ್ನು ವಿತರಿಸುವ ಖುಷಿ ಬಿಟ್ಟರೆ ನಮ್ಮ ಪ್ರಚಾರಕ್ಕೆ ಅದರಿಂದ ಯಾವ ಲಾಭವೂ ಇಲ್ಲ’ ಎಂದರು.

‘ಇದೇನೂ ಆಮಿಷ ಅಲ್ಲ. ಪದವೀಧರರಲ್ಲಿ ಓದುವ ಅಭಿರುಚಿ ವಿಸ್ತಾರಗೊಳ್ಳಲಿ. ವಿಚಾರ ಕ್ರಾಂತಿ ಹಬ್ಬಲಿ ಎಂಬುದಷ್ಟೇ ನಮ್ಮ ಉದ್ದೇಶ. ಇದುವರೆಗೂ ಸುಮಾರು ಇಪ್ಪತ್ತು ಸಾವಿರ ಕೃತಿಗಳನ್ನು ವಿತರಿಸಲಾಗಿದೆ. ಲಡಾಯಿ ಪ್ರಕಾಶನ ನಮಗೆ ನೆರವು ನೀಡಿದೆ’ ಎಂದು ಅವರ ಬೆಂಬಲಿಗರಾದ ಹೊಸಹಳ್ಳಿ ಮಲ್ಲೇಶಪ್ಪ ತಿಳಿಸಿದರು.

ಹೋರಾಟಕ್ಕೆ ಜಯ: ‘ನಿರುದ್ಯೋಗಿ ಪದವೀಧರರು, ಶಿಕ್ಷಕರು, ವಕೀಲರು, ಉಪನ್ಯಾಸಕರು, ಅತಿಥಿ ಉಪನ್ಯಾಸಕರು ಹಾಗೂ ವಿಶ್ವವಿದ್ಯಾಲಯಗಳ ಸಿಬ್ಬಂದಿಯ ಪರವಾಗಿ ಇದುವರೆಗೆ ನಡೆಸಿರುವ ಹೋರಾಟವೇ ನನ್ನ ಗೆಲುವಿಗೆ ದಾರಿ ಮಾಡುತ್ತದೆ’ ಎಂದು ಸುಭಾಷ್‌ ಚಂದ್ರ, ನಂತರ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.

**
ಪುಸ್ತಕಗಳನ್ನು ಕೊಡಲು ಇಂಥದ್ದೇ ಸಂದರ್ಭ ಇರಬೇಕು ಎಂದೇನಿಲ್ಲ. ನಾವು ಪುಸ್ತಕ ಕೊಟ್ಟು ಮತ ಕೇಳುತ್ತಿಲ್ಲ
ಎಲ್‌.ಪಿ.ಸುಭಾಷ್‌ಚಂದ್ರ, ಪಕ್ಷೇತರ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.