ADVERTISEMENT

ಪರಿಹಾರಕ್ಕೆ ಸಾಕ್ಷ್ಯ ಸಂಗ್ರಹಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 8:42 IST
Last Updated 9 ಡಿಸೆಂಬರ್ 2013, 8:42 IST

ಬಳ್ಳಾರಿ: ಹುಲುಸಾಗಿ ಬೆಳೆದರೂ ಕಾಯಿ ಬಿಡದೆ ಕೈಕೊಟ್ಟ ಮಹಿಕೋ ಕಂಪೆನಿಯ ‘ಕನಕ’ ಬಿ.ಟಿ ಹತ್ತಿ ಬೆಳೆದಿರುವ ರೈತರಿಗೆ ಪರಿಹಾರ ನೀಡಲು ಅರ್ಜಿ ಆಹ್ವಾನಿಸಿರುವ ಕೃಷಿ ಇಲಾಖೆ, ಬಿತ್ತನೆ ಬೀಜ ಖರೀದಿ ಸಾಬೀತುಪಡಿಸಲು ಕಡ್ಡಾಯವಾಗಿ ರಸೀತಿ ನೀಡುವಂತೆ ಸೂಚಿಸಿರುವುದು ರೈತರಲ್ಲಿ ಗೊಂದಲ ಉಂಟುಮಾಡಿದೆ.

ಜಿಲ್ಲೆಯ ಕೂಡ್ಲಿಗಿ, ಹಗರಿಬೊಮ್ಮನ­ಹಳ್ಳಿ ಹಾಗೂ ಹೂವಿನ ಹಡಗಲಿ ತಾಲ್ಲೂಕುಗಳಲ್ಲಿ ಕನಕ ಬಿ.ಟಿ ಹತ್ತಿ ಬೀಜವನ್ನು ರೈತರು ಕಾಳಸಂತೆಯಲ್ಲಿ ಖರೀದಿಸಿದ್ದರಿಂದ ರಸೀತಿ ಪಡೆದಿರಲಿಲ್ಲ. ಈಗ ಅತ್ತ ಬೆಳೆಯೂ ಇಲ್ಲ, ಇತ್ತ ಪರಿಹಾರವೂ ಇಲ್ಲ ಎಂಬ ಸ್ಥಿತಿಗೆ ಸಿಲುಕಿದ್ದಾರೆ.

ಕಳೆದ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ 8,000 ಹೆಕ್ಟೇರ್‌ ಪ್ರದೇಶ­ದಲ್ಲಿ ಬಹುತೇಕ ರೈತರು ಮಹಿಕೋ ಕಂಪೆನಿಯ ‘ಕನಕ’ ಬೀಜ ಬಿತ್ತಿದ್ದರು. ಗಿಡ ಹುಲುಸಾಗಿ ಬೆಳೆ­ದರೂ ಹೂ ಬಿಡುವ ಹಂತದಲ್ಲೇ ಮಿರಿಡ್‌ ಫ್ಲೈ ಎಂಬ ಕೀಟದ ದಾಳಿಯಿಂ­ದಾಗಿ, ಕಾಯಿ ಬಿಡಲಿಲ್ಲ. ಸೆಪ್ಟೆಂಬರ್‌­ನಲ್ಲಿ ಕೃಷಿ ಇಲಾಖೆ ಸಿಬ್ಬಂದಿ ಕೆಲವು ರೈತರ ಜಮೀನಿಗೆ ತೆರಳಿ ಪ್ರಾಥಮಿಕ ಸಮೀಕ್ಷೆ ನಡೆಸಿತ್ತು. ಆದರೆ ಹತ್ತಿ ಕಾಯಿ ಬಿಡದ ಕಾರಣ, ಕೆಲ ರೈತರು ಹಿಂಗಾರು ಬಿತ್ತನೆಗಾಗಿ ಜಮೀನನ್ನು ಸ್ವಚ್ಛಗೊಳಿಸಿ­ದ್ದಾರೆ. ಅಲ್ಲಿ ಹತ್ತಿ ಬೆಳೆದಿದ್ದ ಕುರುಹೂ ಇಲ್ಲ. ಅವರ ಬಳಿ ರಸೀತಿಯೂ ಇಲ್ಲದಿ­ರು­ವು­ದರಿಂದ ಪರಿಹಾರ ಪಡೆಯುವುದು ಹೇಗೆ ಎಂಬ ಚಿಂತೆ ರೈತರಲ್ಲಿ ಮೂಡಿದೆ.

ಪರಿಹಾರ ನೀಡಲು ಕನಕ ಬಿ.ಟಿ ಹತ್ತಿ ಬೆಳೆದವರ ಸಮೀಕ್ಷೆ ನಡೆಸಿ, ವರದಿ ಸಲ್ಲಿಸುವಂತೆ ಇಲಾಖೆ ಸೂಚಿಸಿದ್ದು,  ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯೊಂದಿಗೆ ಬಿತ್ತನೆ ಬೀಜ ಖರೀದಿಸಿದ್ದಕ್ಕೆ ರಸೀತಿ ಅಂಟಿಸುವುದು ಕಡ್ಡಾಯ. ರಸೀತಿ ಇಲ್ಲದಿದ್ದಲ್ಲಿ ಖಾಲಿ ಡಬ್ಬಿಯನ್ನಾದರೂ ನೀಡುವಂತೆ ಸೂಚಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ರಾಮಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಪರಿಹಾರವನ್ನು ಸರ್ಕಾರ ನೀಡುತ್ತದೆಯೋ ಅಥವಾ ಕಂಪೆನಿಗೆ ಸೂಚಿಸುತ್ತದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ, ರೈತರು ರಸೀತಿ ಅಥವಾ ಖಾಲಿ ಡಬ್ಬಿ ಹಾಗೂ ಜಮೀನಿನ ಪಹಣಿಯೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.

‘ಕನಕ ಬೀಜದ ಒಂದು ಡಬ್ಬಿಗೆ ₨ 930 ಇದ್ದರೂ, ಕಾಳಸಂತೆಯಲ್ಲಿ ₨ 1,400 ನೀಡಿ ಖರೀದಿಸಿದ್ದು, ಅದಕ್ಕೆ ವರ್ತಕರು ರಸೀತಿ ನೀಡಿಲ್ಲ. ಬಿತ್ತನೆ ನಂತರ ಡಬ್ಬಿಯನ್ನು ಎಸೆದಿದ್ದೇನೆ. ಈಗ ರಸೀತಿ ಅಥವಾ ಡಬ್ಬಿ ನೀಡುವಂತೆ ತಿಳಿಸಿರುವುದರಿಂದ ಏನು ಮಾಡಬೇಕೆಂಬುದೇ ತೋಚುತ್ತಿಲ್ಲ’ ಎಂದು ಜಿಲ್ಲೆಯ ಕೊಟ್ಟೂರು ಸಮೀಪದ ಕುಡುತಿನಿಮೊಗ್ಗೆ (ಕುಡುತಿನಿಮಗ್ಗಿ) ಗ್ರಾಮದ ರೈತ ರೇವಯ್ಯ ಹೇಳಿದರು.

‘ಸಮೀಕ್ಷೆ ಮಾಡುವುದಾಗಿ ಹೇಳಿ ಎಂಟು ದಿನ ಕಳೆದರೂ ನಮ್ಮ ಜಮೀನಿಗೆ ಕೃಷಿ ಇಲಾಖೆ ಸಿಬ್ಬಂದಿ ಬಂದಿಲ್ಲ. ಈ ಹಿಂದೆಯೂ ನಮ್ಮ ಊರಿನಲ್ಲಿ ಸಮೀಕ್ಷೆ ನಡೆಸಿಲ್ಲ. ಕನಕ ಬಿ.ಟಿ. ಹತ್ತಿ ಬೆಳೆದವರಿಗೆ ಪರಿಹಾರ ನೀಡುವ ವಿಷಯವೂ ಊರಿನ ಬಹುತೇಕ ರೈತರಿಗೆ ಗೊತ್ತೇ ಇಲ್ಲ’ ಎಂದು ಕೊಟ್ಟೂರಿನ ರೈತರಾದ ರಾಮಣ್ಣ, ಮಂಜುನಾಥ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.