ADVERTISEMENT

ಪಾಸ್‌ಗಾಗಿ ಅಂಗವಿಕಲರ ಪರದಾಟ!

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2013, 10:29 IST
Last Updated 19 ಏಪ್ರಿಲ್ 2013, 10:29 IST

ಬಾಗಲಕೋಟೆ:  ಅಂಗವಿಕಲರಿಗೆ ನೀಡುವ ಬಸ್‌ಪಾಸ್ ಅನ್ನು ನವೀಕರಣ ಮಾಡಿಕೊಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವರ್ಷದಿಂದ ವರ್ಷಕ್ಕೆ ನಿಯಮಗಳನ್ನು ಬದಲಿಸುತ್ತಿರುವುದರಿಂದ ಅಂಗವಿಕಲರು ಪರದಾಡುವಂತಾಗಿದೆ.

ಕಳೆದ ವರ್ಷ ಅಂಗವಿಕಲರ ಬಸ್‌ಪಾಸ್ ನವೀಕರಣ ಮಾಡಲು ನಾಲ್ಕು ಭಾವಚಿತ್ರ ಮತ್ತು ರೂ.550 ಡಿ.ಡಿ ಅನ್ನು ನೀಡಿದರೆ ಸಾಕಾಗುತ್ತಿತ್ತು ಆದರೆ, ಈ ವರ್ಷ ಅಂಗವಿಕಲರು ಬಸ್‌ಪಾಸ್ ನವೀಕರಿಸಿಕೊಳ್ಳಲು ತೆರಳಿದರೆ ಮತ್ತೊಮ್ಮೆ ಅಸಲಿ ವೈದ್ಯಕೀಯ, ಆದಾಯ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ಸೇರಿದಂತೆ ವಿವಿಧ ದಾಖಲೆಗಳನ್ನು ಕೇಳುತ್ತಿರುವುದರಿಂದ ಅಂಗವಿಕಲರು ತೊಂದರೆಗೆ ಒಳಗಾಗಿದ್ದಾರೆ.

ಈಗಾಗಲೇ ಬಸ್‌ಪಾಸ್ ಪಡೆದುಕೊಂಡಿರುವ ಅಂಗವಿಕಲರು ಮೊದಲೇ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದಾರೆ. ಈಗ ಮತ್ತೊಮ್ಮೆ ಹೊಸ ದಾಖಲೆಗಳನ್ನು ಕೇಳುತ್ತಿದ್ದಾರೆ. ದಾಖಲೆಗಾಗಿ ವಿವಿಧ ಕಚೇರಿ ಅಲೆಯುತ್ತಿದ್ದಾರೆ.

`ರೂ.550 ಡಿ.ಡಿ. ನೀಡಿ ಬಸ್‌ಪಾಸ್ ಪಡೆಯುವ ಹೊತ್ತಿಗೆ ನಮ್ಮ ಜೇಬಿನಿಂದ ರೂ.400ಕ್ಕೂ ಹೆಚ್ಚು ಖರ್ಚಾಗುತ್ತಿದೆ' ಎಂದು ಮುಚಖಂಡಿಯ ಬಸವರಾಜ ಶಿರೂರ `ಪ್ರಜಾವಾಣಿ' ಗೆ ತಿಳಿಸಿದರು.

`ಕಳೆದ ವರ್ಷ ಈ ರೀತಿ ನಿಮಯಗಳು ಇರಲಿಲ್ಲ. ಈಗ ಕೆಎಸ್‌ಆರ್‌ಟಿಸಿ  ನಿಯಮಗಳನ್ನು ಬದಲಿಸಿದ್ದರಿಂದ ತುಂಬಾ ತೊಂದರೆಯಾಗಿದೆ. ಮೊದಲು ಅರ್ಜಿಯನ್ನು ಪಡೆದು ರೂ.20 ಕೊಟ್ಟು ಅರ್ಜಿ ಭರ್ತಿ ಮಾಡಿಕೊಳ್ಳಬೇಕು. ವೈದ್ಯಕೀಯ ಪ್ರಮಾಣ ಪತ್ರ ಪಡೆಯಲು ಸರ್ಕಾರಿ ಆಸ್ಪತ್ರೆಗೆ ಹೋಗಬೇಕು. ನಂತರ ಮಹಿಳಾ ಮತ್ತು ಮಕ್ಕಳು ಅಭಿವೃದ್ಧಿ (ಅಂಗವಿಕಲರ) ಇಲಾಖೆ ಅಧಿಕಾರಿಗಳ ಸಹಿ ಮಾಡಿಸಿಕೊಂಡು ಬಳಿಕ ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿರುವ ಅಂಗವಿಕಲರ ಸದಸ್ಯನೊಬ್ಬನು ಸಹಿ ಮಾಡಿಸಿಕೊಂಡು ಕೆಎಸ್‌ಆರ್‌ಟಿಸಿ ಬಸ್ ಪಾಸ್ ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ' ಎಂದು ತಿಳಿಸುತ್ತಾರೆ.

`ಇಳಕಲ್‌ನಲ್ಲಿ ಇದೇ ರೀತಿ ಅಧಿಕಾರಿಗಳು ಬಸ್‌ಪಾಸ್ ನೀಡಲು ಸತಾಯಿಸುತ್ತಿದ್ದರು. ಅಂಗವಿಕಲರು ಪ್ರತಿಭಟನೆ ಮಾಡಿದ ಬಳಿಕ ಡಿಡಿ ಮತ್ತು ಭಾವಚಿತ್ರವನ್ನು ನೀಡಿದರೆ ನವೀಕರಣ ಪಾಸ್ ನೀಡುತ್ತಿದ್ದಾರೆ. ಮೊದಲೇ ನಮಗೆ ಅಡ್ಡಾಡಲು ತೊಂದರೆ ಇರುತ್ತದೆ. ಕಚೇರಿಗಳು ಒಂದೇ ಸ್ಥಳದಲ್ಲಿ ಇರದ ಕಾರಣ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಅಡ್ಡಾಡುವುದೇ ಒಂದು ಕೆಲಸವಾಗಿದೆ' ಎನ್ನುತ್ತಾರೆ.

`ಈ ಹಿಂದಿನ ವರ್ಷಗಳಲ್ಲಿ ಈ ರೀತಿ ನಿಯಮಗಳು ಇರಲಿಲ್ಲ. ಹೊಸ ಹೊಸ ಹೊಸ ನಿಯಮಗಳನ್ನು ಮಾಡುವುದರಿಂದ ಊರಿಂದ ಊರಿಗೆ ಬಂದು ಬಸ್‌ಪಾಸ್ ನವೀಕರಣ ಮಾಡಿಕೊಂಡಬೇಕಾದರೆ ತುಂಬಾ ಕಷ್ಟ ಆಗುತ್ತಿದೆ' ಎನ್ನುತ್ತಾರೆ ಶಿರೂರಿನ ಅಂಗವಿಕಲ ಶಿವಾನಂದ ಗಾಳಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.