ADVERTISEMENT

ಪೂರ್ಣ ಅನುದಾನ ಬಳಕೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 10:05 IST
Last Updated 13 ಮಾರ್ಚ್ 2012, 10:05 IST

ಬಾಗಲಕೋಟೆ: ಏಪ್ರಿಲ್ ಅಂತ್ಯದೊಳಗೆ ನಿಗದಿತ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ನೆರ ವಾಗಬೇಕು ಎಂದು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಜಿ.ಪಂ.ಅಧ್ಯಕ್ಷೆ ಕವಿತಾ ದಡ್ಡೇನವರ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನವನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ  ನಡೆದ ಜಿಲ್ಲಾಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬಂದಿರುವ ಅನುದಾನ ಯಾವುದೇ ಕಾರಣಕ್ಕೂ ವಾಪಸ್ಸಾಗಬಾರದು, ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿ ಅನುದಾನ ಬಳಕೆಯಾಗಬೇಕು ಎಂದರು.
ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಬೇಕಾದ ಎಲ್ಲ ಸಹಕಾರವನ್ನು ಜಿ.ಪಂ. ನೀಡಲಿದೆ ಎಂದು ಹೇಳಿದರು.

ನಿಗದಿತ ಗುರಿ ಸಾಧಿಸದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡ ಅವರು, ಈ ತಿಂಗಳ ಅಂತ್ಯ ದೊಳಗೆ ಶೇ.100ರಷ್ಟು ಅನುದಾನ ಬಳಕೆ ಮಾಡಬೇಕು ಎಂದು ಆದೇಶಿಸಿದರು.

ಜಿ.ಪಂ.ನ 33 ಇಲಾಖೆಗಳ ಮಾಹಿತಿಯನ್ನು ಪರಿಶೀಲಿಸಿದ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಇಲಾಖೆ ಹೊರತು ಪಡಿಸಿ ಉಳಿದ ಇತರೆ ಇಲಾಖೆಗಳ ಸಾಧನೆಗೆ ತೃಪ್ತಿ ವ್ಯಕ್ತಪಡಿಸಿದರು.

ಜಿ.ಪಂ. ಸಿಇಒ ಎಸ್.ಜಿ. ಪಾಟೀಲ ಮಾತನಾಡಿ, ಜಿ.ಪಂ. ಎಲ್ಲ 33 ಇಲಾಖೆಯ ಒಟ್ಟು ಸಾಧನೆ ಶೇ. 79 ಆಗಿರುವುದು ತೃಪ್ತಿದಾಯಕವಾಗಿದೆ. ನಾಲ್ಕೈದು ಇಲಾಖೆ ಹೊರತು ಪಡಿಸಿ ಬಹುತೇಕ ಇಲಾಖೆಗಳು ಶೇ. 75ಕ್ಕಿಂತ ಅಧಿಕ ಅನುದಾನ ಬಳಕೆ ಮಾಡಿಕೊಂಡಿವೆ ಎಂದರು.ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಹೂವಪ್ಪ ರಾಠೋಡ ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.