ADVERTISEMENT

‘ಪೊಲೀಸ್ ಸಿಬ್ಬಂದಿ ಕಾರ್ಯ ಶ್ಲಾಘನೀಯ’

ಧ್ವಜ ದಿನಾಚರಣೆ: ನಿವೃತ್ತರಾದ 27 ಮಂದಿ ಅಧಿಕಾರಿ, ಸಿಬ್ಬಂದಿಗೆ ಸನ್ಮಾನ; ಗಮನ ಸೆಳೆದ ಆಕರ್ಷಕ ಕವಾಯತು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2018, 5:18 IST
Last Updated 3 ಏಪ್ರಿಲ್ 2018, 5:18 IST
ಬಾಗಲಕೋಟೆಯಲ್ಲಿ ಸೋಮವಾರ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಆಕರ್ಷಕ ಕವಾಯತು ಗಮನ ಸೆಳೆಯಿತು
ಬಾಗಲಕೋಟೆಯಲ್ಲಿ ಸೋಮವಾರ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಆಕರ್ಷಕ ಕವಾಯತು ಗಮನ ಸೆಳೆಯಿತು   

ಬಾಗಲಕೋಟೆ: ‘ಸದಾ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಇಲಾಖೆ ಸಿಬ್ಬಂದಿಯ ಬಗ್ಗೆ ಸಾರ್ವಜನಿಕರಿಂದ ನಿರೀಕ್ಷೆಗಳು ಹೆಚ್ಚಾಗಿವೆ. ಕಡಿಮೆ ಬಲ ಪ್ರಯೋಗದ ಮೂಲಕ ಎಂತಹ ಪ್ರಚೋದನೆಯನ್ನು ಕೂಡ ಸುಲಭವಾಗಿ ನಿವಾರಿಸುತ್ತಾರೆ. ಅವರ ಸಂಯಮ ನಿಜಕ್ಕೂ ಶ್ಲಾಘನೀಯ’ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಹೇಳಿದರು.ನವನಗರದ ಪೊಲೀಸ್ ಕವಾಯತ್ ಮೈದಾನದಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಧ್ವಜ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

‘ಇಲಾಖೆಯ ಸೇವೆಯಲ್ಲಿದ್ದಾಗ ಸಿಗುವ ಸೌಲಭ್ಯಗಳು ಅವರಿಗೆ ನಿವೃತ್ತಿಯ ನಂತರವೂ ಸಿಗಬೇಕು. ಅವರ ಆರೋಗ್ಯ ಹಾಗೂ ಕುಟುಂಬದ ಸಂರಕ್ಷಣೆ ಮುಖ್ಯ ಎಂಬ ಕಾರಣಕ್ಕೆ 1951ರಿಂದ ಪೊಲೀಸ್ ಧ್ವಜ ದಿನಾಚರಣೆ ಆರಂಭಿಸಲಾಯಿತು. ಇಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಪರಿಕಲ್ಪನೆ ಕೂಸು. ನಿವೃತ್ತಿ ನಂತರ ಪೊಲೀಸರ ಕಲ್ಯಾಣಕ್ಕೆ ಇದು ನೆರವಾಗಲಿದೆ’ ಎಂದರು.ಪೊಲೀಸ್ ಕಲ್ಯಾಣ ನಿಧಿ ಬೇರೆ ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಸರಿಯಾಗಿ ಬಳಕೆಯಾಗುತ್ತಿಲ್ಲ ಎಂಬ ಆರೋಪಗಳಿವೆ. ಆದರೆ ಜಿಲ್ಲೆಯಲ್ಲಿ ಅದರ ಸಂಪೂರ್ಣ ಸದ್ಬಳಕೆಯಾಗುತ್ತಿರುವುದು ಸಂತಸದ ವಿಚಾರ. ನಿವೃತ್ತಿಯ ನಂತರವೂ ನೌಕರ ಸ್ನೇಹಿ ಕಾರ್ಯಕ್ರಮಗಳನ್ನು ರೂಪಿಸಿ, ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಲು ಸಲಹೆ ನೀಡಿದರು.

ನಿವೃತ್ತ ಪೊಲೀಸ್ ಉಪನಿರೀಕ್ಷಕ ಎಚ್.ಸಿ.ಭಜಂತ್ರಿ ಮಾತನಾಡಿ, ‘ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಕಾರ್ಯ ಪೊಲೀಸ್ ಇಲಾಖೆ ಮಾಡುತ್ತಿದೆ. ಸಾಧನೆ ಶಾಶ್ವತವಾಗಿರಬೇಕಾದರೆ ವೃತ್ತಿಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಅಗತ್ಯ’ ಎಂದರು.‘ಜೀವನದಲ್ಲಿ ಎಷ್ಟು ವರ್ಷ ಬದುಕಿದ್ದೇವೆ ಎಂಬುದು ಮುಖ್ಯವಲ್ಲ. ಏನು ಸಾಧಿಸಿದ್ದೇವೆ ಎಂಬುದು ಬಹಳ ಮುಖ್ಯವಾಗಿದೆ. ಸಮಾಜದ ಪತ್ರಿಯೊಂದು ವರ್ಗದ ಜನರ ರಕ್ಷಣೆಗೆ ಬದ್ಧರಾಗಬೇಕು. ಪೊಲೀಸ್ ಸಮವಸ್ತ್ರದ ನೀತಿ–ನಿಯಮಗಳನ್ನು ಪಾಲಿಸಬೇಕು’ ಎಂದು ಸಲಹೆ ನೀಡಿದರು.ಜಿಲ್ಲೆಗೆ ಬೇರೆ ಬೇರೆ ಕಡೆಗಳಿಂದ ಕೆಲಸ ಕಾರ್ಯಗಳಿಗೆ ಬರುವ ನಿವೃತ್ತ ಪೊಲೀಸ್ ಸಿಬ್ಬಂದಿಗೆ ತಂಗಲು ಸರಿಯಾದ ವ್ಯವಸ್ಥೆ ಇಲ್ಲ. ಇಲಾಖೆಯ ಕಲ್ಯಾಣ ನಿಧಿಯಿಂದ ವ್ಯವಸ್ಥೆ ಕಲ್ಪಿಸಿಕೊಡುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಅವರು ಮನವಿ ಮಾಡಿದರು.

ADVERTISEMENT

ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ವರದಿ ವಾಚನ ಮಾಡಿದರು. ನಿವೃತ್ತರಾದ 27 ಜನ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಅಲ್ಲದೇ ರಾಜ್ಯ ಮಟ್ಟದ ಕರ್ತವ್ಯಕೂಟ-2017ರಲ್ಲಿ ಭಾಗವಹಿಸಿದ ಡಿ.ಎಸ್. ಅಡಗಿಮನಿ, ಬಿ.ಬಿ. ಪಾಟೀಲ (ರೈಫಲ್ ಶೂಟಿಂಗ್) ಹಾಗೂ ಎಸ್.ಎಸ್. ಪಾಟೀಲ (ಶ್ವಾನದಳ- ಮಾದಕ ವಸ್ತು ಪತ್ತೆ ವಿಭಾಗ) ಅವರನ್ನು ಸನ್ಮಾನಿಸಿ ಪ್ರಮಾಣ ಪತ್ರ ವಿತರಿಸಲಾಯಿತು. ಆರ್‌ಪಿಐ ಜೆ.ಎಚ್. ಶೇಖ್ ಹಾಗೂ ಪೊಲೀಸ್ ಸಿಬ್ಬಂದಿಯವರಿಂದ ಗೌರವ ಶ್ರೀರಕ್ಷೆ ಮತ್ತು ಪಥ ಸಂಚಲನ ನಡೆಯಿತು. ಡಿವೈಎಸ್‌ಪಿ ಎಸ್.ಎಂ. ಓಲೇಕಾರ ವಂದಿಸಿದರು. ಜಾಸ್ಮೀನ್ ಕಿಲ್ಲೆದಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.