ADVERTISEMENT

ಪ್ರಮುಖರ ಸಭೆ ನಡೆಸಿದ ಶಾ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 4:23 IST
Last Updated 29 ಏಪ್ರಿಲ್ 2018, 4:23 IST

ಬಾಗಲಕೋಟೆ: ಇಳಕಲ್‌ನಿಂದ ಮಧ್ಯಾಹ್ನ ಬಾಗಲಕೋಟೆಗೆ ಬಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಲ್ಲಿ ಪಕ್ಷದ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡರು.

ನಗರಕ್ಕೆ ಬಂದವರೇ ಬಿ.ವಿ.ವಿ ಸಂಘದ ಅಂತಾರಾಷ್ಟ್ರೀಯ ಅತಿಥಿ ಗೃಹದಲ್ಲಿ ಭೋಜನ ಸ್ವೀಕರಿಸಿ ಕೆಲಕಾಲ ವಿಶ್ರಾಂತಿ ಪಡೆದರು. ಅಲ್ಲಿಂದ ಬಾಗಲಕೋಟೆಯ ಸಂಘದ ಕ್ಯಾಂಪಸ್‌ನಲ್ಲಿರುವ ಹೊಸ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡರು. ಮಾಧ್ಯಮ ಪ್ರತಿನಿಧಿಗಳನ್ನು ದೂರವಿಟ್ಟು ಗೋಪ್ಯ ಸಭೆ ನಡೆಸಲಾಯಿತು.

ಸಭೆಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದು ಸವದಿ, ಶಾಸಕರಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ಪಿ.ಎಚ್.ಪೂಜಾರ, ಮುರುಗೇಶ ನಿರಾಣಿ, ಶ್ರೀಕಾಂತ ಕುಲಕರ್ಣಿ, ನಾರಾಯಣ ಸಾ ಭಾಂಡಗೆ. ರಾಷ್ಟ್ರೀಯ ನಾಯಕ ಭೂಪಿಂದರ್ ಸಿಂಗ್ ಹಾಗೂ ಪಕ್ಷದ ಪ್ರಮುಖ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ADVERTISEMENT

ಮುಜುಗರ ತಪ್ಪಿಸಿದರು: ಜಮಖಂಡಿಯಲ್ಲಿ ಉದ್ಯಮಿ ಸಂಗಮೇಶ ನಿರಾಣಿ ಪಕ್ಷೇತರರಾಗಿ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಬೆಂಬಲಿಗರು ಹೊಸ ಸಭಾಂಗಣದ ಎದುರು ಕೆಲ ಕಾಲ ಧರಣಿ ನಡೆಸಿದರು. ಸಂಗಮೇಶ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಅಮಿತ್ ಶಾ ಬಂದ ವೇಳೆ ಅವರ ಗಮನ ಸೆಳೆಯುವುದು ಪ್ರತಿಭಟನಾಕಾರರ ಉದ್ದೇಶವಾಗಿತ್ತು. ಆದರೆ ಅಮಿತ್ ಶಾ ಬಂದ ವೇಳೆ ಪ್ರತಿಭಟನೆ ನಡೆದಲ್ಲಿ ಮಾಧ್ಯಮಗಳ ಮುಂದೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲಿದೆ. ಆ ಬಗ್ಗೆ ಗೌಪ್ಯ ಸಭೆಯಲ್ಲಿ ಚರ್ಚೆ ನಡೆಸೋಣ ಎಂದು ಹೇಳಿದ ಪಕ್ಷದ ಹಿರಿಯರು ಧರಣಿ ಕುಳಿತವರ ಮನವೊಲಿಸಿದರು.

ಬಾಗಲಕೋಟೆ ಸಭೆ ಮುಗಿಸಿಕೊಂಡು ಅಮಿತ್ ಶಾ, ವಿಜಯಪುರ ಜಿಲ್ಲೆ ಬಬಲೇಶ್ವರದತ್ತ ತೆರಳಿದರು.

ಅಮಿತ್ ಶಾ ಊಟದ ಮೆನು..

ಬಿ.ವಿ.ವಿ ಸಂಘದ ಅತಿಥಿ ಗೃಹದಲ್ಲಿ ಅಮಿತ್ ಶಾ ಜೋಳದ ರೊಟ್ಟಿ, ಚಪಾತಿ, ಶೇಂಗಾ ಚಟ್ನಿ, ಹಸಿ ಕೆಂಪು ಚಟ್ನಿ, ಮೊಸರು, ಬ್ಯಾಳಿ, ಬೀನ್ಸ್ ಪಲ್ಲೆ, ಮೊಸರನ್ನ, ಶಾವಿಗೆ ಪಾಯಸ, ಮಜ್ಜಿಗೆ, ಪಾಪಡ್‌ ಸೇವಿಸಿದರು.ಈ ವೇಳೆ ಪಿ.ಎಚ್.ಪೂಜಾರ ಹಾಗೂ ಪ್ರಕಾಶ ತಪಶೆಟ್ಟಿ ಅಮಿತ್ ಶಾ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದರು. ಮಹೇಶ ಅಥಣಿ, ಅಶೋಕ ಸಜ್ಜನ್, ಸಿ.ಎಸ್.ಪಾಟೀಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.