ADVERTISEMENT

ಪ್ರಯಾಣಿಕರ ಎಬ್ಬಿಸಲು ಅಲಾರಾಂ!

ವೆಂಕಟೇಶ್ ಜಿ.ಎಚ್
Published 11 ಸೆಪ್ಟೆಂಬರ್ 2017, 4:41 IST
Last Updated 11 ಸೆಪ್ಟೆಂಬರ್ 2017, 4:41 IST
ಪ್ರಯಾಣಿಕರ ಎಬ್ಬಿಸಲು ಅಲಾರಾಂ!
ಪ್ರಯಾಣಿಕರ ಎಬ್ಬಿಸಲು ಅಲಾರಾಂ!   

ಬಾಗಲಕೋಟೆ: ರೈಲಿನಲ್ಲಿ ರಾತ್ರಿ ಪ್ರಯಾಣ ಮಾಡುತ್ತಿದ್ದೀರಾ? ಹಾಗಾದರೆ, ಇನ್ನು ಮುಂದೆ ಗಾಡಿ ನಿಂತಾಗಲೆಲ್ಲಾ ‘ನಮ್ಮೂರು ಬಂದಿತೇ’ ಎಂದು ಕಿಟಕಿಯಾಚೆ ಇಣುಕಿ ನೋಡುವ ಅಗತ್ಯವಿಲ್ಲ. ನಿದ್ರೆಗೆಟ್ಟು ಕುಳಿತು ಗಳಿಗೆಗೊಮ್ಮೆ ‘ಇದು ಯಾವ ಸ್ಟೇಶನ್’ ಎಂದು ಕೇಳುತ್ತಾ ಅಕ್ಕಪಕ್ಕದವರ ಗೊಣಗಾಟಕ್ಕೆ ಆಹಾರವಾಗುವ ಪ್ರಶ್ನೆಯೂ ಇಲ್ಲ.

ನೀವು ಇಳಿಯಬೇಕಾದ ಸ್ಟೇಶನ್‌ನಲ್ಲಿ ರೈಲು ನಿಲ್ಲುವ ಅರ್ಧಗಂಟೆ ಮುಂಚೆ ಅಲಾರಾಂ ಮೊಳಗಿಸಿ, ರೈಲ್ವೆ ಇಲಾಖೆಯೇ ನಿಮ್ಮನ್ನು ನಿದ್ರೆಯಿಂದ ಎಚ್ಚರಿಸಲಿದೆ. ಪ್ರಯಾಣಿಕರಿಗೆ ನೆರವಾಗಲೆಂದು ‘ನಿದ್ದೆಯಿಂದ ಎಬ್ಬಿಸುವ ಕರೆ’ಯನ್ನು ಭಾರತೀಯ ರೈಲ್ವೆ ಪರಿಚಯಿಸಿದ್ದು, ಈ ವ್ಯವಸ್ಥೆ ಮುಂಗಡ ಕಾಯ್ದಿರಿಸಿದ ಸ್ಲೀಪರ್ ದರ್ಜೆಯ ಪ್ರಯಾಣಿಕರಿಗೆ ಲಭ್ಯವಿದೆ.

ದೂರದ ಪ್ರಯಾಣಕ್ಕೆ ಅನುಕೂಲ: ರೈಲಿನಲ್ಲಿ ಗಾಢನಿದ್ರೆಗೆ ಜಾರಿದ ಪ್ರಯಾಣಿಕರು ಇಳಿಯಬೇಕಾದ ನಿಲ್ದಾಣ ಬಿಟ್ಟು ಮುಂದಕ್ಕೆ ಹೋಗುವ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಒಮ್ಮೊಮ್ಮೆ ವಿದ್ಯುತ್ ವ್ಯತ್ಯಯ, ಜೋರು ಮಳೆಯಿಂದಾಗಿ ಕೂಡ ನಿಲ್ದಾಣದ ಗುರುತು ತಿಳಿಯಲು ಸಾಧ್ಯವಾಗದೇ ಪ್ರಯಾಣಿಕರು ಮುಂದೆ ಸಾಗಿರುತ್ತಾರೆ. ಇಲ್ಲವೇ ಮೊದಲೇ ಇಳಿದಿರುತ್ತಾರೆ.

ADVERTISEMENT

‘ಹೀಗೆ ಇಳಿಯಬೇಕಾದ ತಾಣ ತಪ್ಪಿಸಿಕೊಂಡು ಮುಂದೆ ಹೋದವರು, ಇಲ್ಲವೇ ಮೊದಲೇ ಇಳಿದವರು ಮತ್ತೆ ಪ್ರಯಾಣದ ವ್ಯವಸ್ಥೆ ಮಾಡಿಕೊಂಡು ನಿಗದಿತ ಸ್ಥಳ ತಲುಪುವ ವೇಳೆಗೆ ಕಚೇರಿ ಸಮಯ, ಪರೀಕ್ಷೆ, ಸಂದರ್ಶನ, ಶುಭ ಸಮಾರಂಭಗಳನ್ನು ತಪ್ಪಿಸಿಕೊಂಡು ಪೇಚಿಗೀಡಾಗಬಹುದು. ಕೆಲ ಹೊತ್ತಿನ ಮೈಮರೆವಿಗೆ ತಮ್ಮನ್ನೇ ಹಳಿದುಕೊಂಡು ಸಿಹಿ ನಿದ್ರೆಯನ್ನೇ ಶಪಿಸಬಹುದು. ಅದನ್ನು ತಪ್ಪಿಸಲು ಈ ಪ್ರಯಾಣಿಕ ಸ್ನೇಹಿ ವ್ಯವಸ್ಥೆ ಪರಿಚಯಿಸಲಾಗಿದೆ’ ಎಂದು ಹುಬ್ಬಳ್ಳಿಯ ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಇ.ವಿಜಯಾ ತಿಳಿಸಿದರು.

‘ದೂರದ ಊರುಗಳಿಗೆ ಪ್ರಯಾಣಿಸುವಾಗ, ಮಧ್ಯರಾತ್ರಿ ಇಲ್ಲವೇ ನಸುಕಿನಲ್ಲೇ ನಿಲ್ದಾಣಗಳಲ್ಲಿ ಇಳಿಯಬೇಕಾದ ಪ್ರಯಾಣಿಕರಿಗೆ ಈ ವ್ಯವಸ್ಥೆ ಹೆಚ್ಚು ನೆರವಾಗಲಿದೆ. ರಾತ್ರಿ ನಿದ್ರೆಗೆಟ್ಟು ತಮ್ಮ ಸ್ಟೇಷನ್‌ಗಾಗಿ ಕಾಯುತ್ತ ಕೂರುವ ಬದಲು ನಿದ್ರೆಗೆ ಜಾರಬಹುದು. ಇದರಿಂದ ವಿಶ್ರಾಂತಿಯ ಜೊತೆಗೆ ಮರು ದಿನದ ಕೆಲಸಗಳಿಗೆ ಹೊಸ ಉತ್ಸಾಹದಿಂದ ಸಿದ್ಧರಾಗಲು ಅನುಕೂಲವಾಗುತ್ತದೆ.

ಒಂಟಿಯಾಗಿ ಪ್ರಯಾಣಿಸುವ ವೃದ್ಧರು, ಮಹಿಳೆಯರಿಗೆ ಅಲಾರಾಂ ವ್ಯವಸ್ಥೆ ವರದಾನವಾಗಿದೆ’ ಎಂದು ಅವರು ಹೇಳುತ್ತಾರೆ. ‘ಪ್ರಯಾಣಿಕರು ಮುಂಗಡ ಟಿಕೆಟ್‌ ಕಾಯ್ದಿರಿಸುವಾಗ ನಮೂದಿಸಿದ ಮೊಬೈಲ್‌ ಸಂಖ್ಯೆಗೇ ಅಲಾರಾಂ ಕರೆ ಬರುವುದರಿಂದ ಅದೇ ಫೋನನ್ನು ಪ್ರಯಾಣದ ವೇಳೆ ಮರೆಯದೇ ತಮ್ಮ ಜೊತೆಗೊಯ್ಯಬೇಕು’ ಎಂದು ವಿಜಯಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

139ಗೆ ಕರೆ ಮಾಡಿ
ಸ್ಲೀಪರ್‌ ಕೋಚ್‌ನಲ್ಲಿ ಪ್ರಯಾಣಿಸುವವರು ಮೂರು ವಿಧದಲ್ಲಿ ಈ ಸವಲತ್ತು ಪಡೆಯಬಹುದಾಗಿದೆ.

* ‘139’ ಸಂಖ್ಯೆಗೆ ಕರೆ ಮಾಡಿ ಅಲ್ಲಿ ‘Destination Alert’ ಆಯ್ಕೆ ಮಾಡಿಕೊಂಡು ಟಿಕೆಟ್‌ನ ಪಿಎನ್‌ಆರ್ ಸಂಖ್ಯೆಯನ್ನು ದಾಖಲಿಸಬೇಕಿದೆ. ನಂತರ ‘1’ನ್ನು ಒತ್ತಿದರೆ ಅವರ ಮೊಬೈಲ್‌ ಸಂಖ್ಯೆ ಅಲಾರಾಮ್ ಸೌಲಭ್ಯದ ವ್ಯಾಪ್ತಿಗೆ ಒಳಪಡಲಿದೆ. 

* 139 ಸಂಖ್ಯೆಗೆ ಕರೆ ಮಾಡಿ  ನಮ್ಮ ಕರೆಯನ್ನು ಅಲ್ಲಿನ ಗ್ರಾಹಕ ಸೇವಾ ಕೇಂದ್ರಕ್ಕೆ ವರ್ಗಾಯಿ ಸಿಕೊಂಡು ಅಲ್ಲಿನ ಪ್ರತಿನಿಧಿಗೆ ‘Destination Alert’ ಅಲಾರಾಂ ವ್ಯವಸ್ಥೆಗೆ ಒಳಪಡಿಸಲು ಮನವಿ ಮಾಡಬಹುದಾಗಿದೆ.

* ALERT <PNR> ಈ ಮಾದರಿಯಲ್ಲಿ ಪಿಎನ್‌ಆರ್‌ ಸಂಖ್ಯೆ ನಮೂದಿಸಿ 139ಗೆ ಎಸ್‌ಎಂಎಸ್‌ ಕಳುಹಿಸಿಯೂ ಈ ಸೌಲಭ್ಯ ಪಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.