ADVERTISEMENT

ಫಲವತ್ತಾದ ಭೂಮಿ ಸ್ಮಶಾನವಾದೀತು: ಎಸ್ಸಾರ್

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 6:55 IST
Last Updated 6 ಜೂನ್ 2011, 6:55 IST

ಆಲಮಟ್ಟಿ: ಜಿಲ್ಲೆಯ ಕೂಡಗಿಯಲ್ಲಿ ಸ್ಥಾಪಿಸಲ್ಪಡುವ ಕಲ್ಲಿದ್ದಲು ಆಧಾರಿತ 4 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್  ಸ್ಥಾವರದಿಂದ ಅಧಿಕ ಪ್ರಮಾಣದ ವಿಷಪೂರಿತ ಹಾರುವ ಬೂದಿ ಹಾಗೂ ಅನಿಲದಿಂದ ಜಿಲ್ಲೆಯ ವಾಯು-ಜಲ-ನೆಲ ಕಲುಷಿತವಾಗು ವುದು. ಇದನ್ನು ಎಲ್ಲರೂ ಪಕ್ಷಾತೀತ ವಾಗಿ ವಿರೋಧಿಸಬೇಕೆಂದು ವಿಧಾನ ಪರಿಷತ್ ಉಪನಾಯಕ ಎಸ್.ಆರ್. ಪಾಟೀಲ ಹೇಳಿದರು.

ನಿಡಗುಂದಿ ಪಟ್ಟಣದ ಶ್ರೀ ಮುದ್ದೇಶ್ವರ ಗುಡಿ ಹತ್ತಿರ ಸ್ವಾಭಿಮಾನ ಯಾತ್ರೆಯ ಎರಡನೇ ದಿನದ ಅಂಗವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಆಲಮಟ್ಟಿ ಜಲಾಶಯ ದಿಂದ ಸಾಕಷ್ಟು ಭೂಮಿ ಕೃಷ್ಣಾರ್ಪಣ ಗೊಂಡಿದೆ. ಆಲಮಟ್ಟಿ ಜಲಾಶಯದ ಎತ್ತರ 524 ಮೀ. ಆದಾಗ ಇನ್ನೂ ಸುಮಾರು ಒಂದು ಲಕ್ಷ ಎಕರೆ ಭೂಮಿ ಮುಳುಗಡೆಯಾಗಲಿದೆ. ಈಗಾಗಲೇ ಆಲಮಟ್ಟಿ ಜಲಾಶಯದ ಮೊದಲ ಹಂತದ ಹಿನ್ನೀರಿನಿಂದ ಸಾಕಷ್ಟು ಹೊಲ ಮನೆಗಳನ್ನು ಕಳೆದುಕೊಂಡು ನಿರಾಶ್ರಿತ ರಾಗಿರುವ ಜನರಿಗೆ ಮೂಲಸೌಕರ‌್ಯ ಒದಗಿಸಿಲ್ಲ. ಇನ್ನು ಕೂಡಗಿ ಯೋಜನೆ ಯಿಂದ ಇನ್ನಷ್ಟು ಭೂಮಿ ಕಳೆದು ಕೊಂಡರೆ ಅದು ಜಿಲ್ಲೆಯ ಕೃಷಿ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರಲಿದೆ. ಜಿಲ್ಲೆಯಲ್ಲಿ ಸ್ಥಾಪನೆಯಾಗುವ ಉದ್ದಿಮೆಗಳಿಗೆ ಸಾಕಷ್ಟು ನೀರು ಬೇಕಾಗುವುದರಿಂದ ಕಷ್ಣಾ ಮೇಲ್ದಂಡೆ ಯೋಜನೆಯಡಿ ಅನುಷ್ಟಾನಗೊಳ್ಳ ಬೇಕಾದ ಚಿಮ್ಮಲಗಿ, ಮರೋಳ, ಮುಳವಾಡ ಮುಂತಾದ  ಏತ ನೀರಾವರಿ ಯೋಜನೆಗಳು ಸ್ಥಗಿತ ಗೊಳ್ಳುವ ಭೀತಿ ಇದೆ ಎಂದರು.

ರೈತರ ಫಲವತ್ತಾದ ಭೂಮಿಯನ್ನು ಈ ಯೋಜನೆಗಾಗಿ ವಶಪಡಿಸಿ ಕೊಳ್ಳುತ್ತಿರುವುದು ರೈತರನ್ನು ಕಾಯಂ ಆಗಿ ಭಿಕ್ಷಾಟನೆಗೆ ಹಚ್ಚಿದಂತಾಗಿದೆ ಎಂದ ಅವರು ಕೂಡಗಿಯ ಉಷ್ಣ ಸ್ಥಾವರದ ಹಾರು ಬೂದಿಯಿಂದಾಗಿ ಬಸವಣ್ಣ ನವರ ಸ್ಮಾರಕಕ್ಕೆ ಧಕ್ಕೆಯಾಗಲಿದೆ. ಈ ಹೋರಾಟದಲ್ಲಿ ಎಲ್ಲರೂ ಪಕ್ಷಾತೀತ ವಾಗಿ ಭಾಗವಹಿಸಬೇಕೆಂದರು.
ಈ ಹೋರಾಟ ಯಾವ ವ್ಯಕ್ತಿ- ಪಕ್ಷ- ಸರಕಾರದ ವಿರುದ್ಧವಲ್ಲ. ಇದು ಅವಳಿ ಜಿಲ್ಲೆಗಳ ಅಳಿವು ಉಳಿವಿನ ಪ್ರಶ್ನೆಯಾಗಿದೆ ಎಂದರು.

ಮುಂದಿನ ಪೀಳಿಗೆಗೆ ಈ ಜಿಲ್ಲೆಯ ಭೂಮಿಯನ್ನು ಸುರಕ್ಷಿತವಾಗಿ ಇಡ ಬೇಕಾಗಿದೆ. ನಾನು ಈ ವಿಷಯವಾಗಿ ಜಾಗತಿ ಮೂಡಿಸಲು ಪಕ್ಷಾತೀತವಾಗಿ ಹಾಲಿ-ಮಾಜಿ 8000 ಜನಪ್ರತಿನಿಧಿ ಗಳಿಗೆ ಪತ್ರ ಬರೆದಿದ್ದು ಇದು ಅವಳಿ ಜಿಲ್ಲೆಗಳ ಸ್ವಾಭಿಮಾನದ ಪ್ರಶ್ನೆಯಾಗಿದೆ ಎಂದರು. ಮಾಜಿ ಸಚಿವ ಎಚ್.ವೈ. ಮೇಟಿ ಮಾತನಾಡಿ ನವೀಕರಿಸ ಬಹುದಾದ ಇಂಧನ ಮೂಲಗಳಾದ ಸೌರ ಶಕ್ತಿ ಜಿಲ್ಲೆಯಲ್ಲಿ ಹೇರಳವಾಗಿದೆ. ಅದನ್ನು ಬಳಿಸಿಕೊಂಡು ಶಕ್ತಿಯನ್ನು ಉತ್ಪಾದಿಸುವ ನಿಟ್ಟಿನಲ್ಲಿ ಪ್ರಯತ್ನ ಆಗಬೇಕು ಎಂದರು.

ಅಣು ವಿಜ್ಞಾನಿ ಎಮ್.ಪಿ. ಪಾಟೀಲ ಮಾತನಾಡಿ, ಶಾಖೋತ್ಪನ್ನ ಕೇಂದ್ರ ಸ್ಥಾಪನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಸುದೀರ್ಘ ವಾಗಿ ವಿವರಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಯಶವಂತ್ರಾಯಗೌಡ ಪಾಟೀಲ  ಉಪಸ್ಥಿತರಿದ್ದರು.
ಎಸ್.ಆರ್.ಪಾಟೀಲರ ಸ್ವಂತ ತಾಲ್ಲೂಕಾದ ಬೀಳಗಿಯ ಕೆಲ ರೈತಾಪಿ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ  ಆರ್.ಸಿ. ರೇವಡಿ, ಜಿ.ಎಸ್. ಪರಡಿಮಠ, ಬಸವರಾಜ ಮೇಟಿ, ನಾಗಲಿಂಗಪ್ಪ ಕಂಬಾರ, ನಾಗಯ್ಯ ಗಣಾಚಾರಿ, ವಿಶ್ವನಾಥ ಮಠ, ಮುದ್ದಪ್ಪ ಯಳ್ಳಿಗುತ್ತಿ, ಸಂಗಪ್ಪ ವಂದಾಲ ಹಾಗೂ ಬಾಗಲಕೋಟೆ ಜಿಲ್ಲೆಯ ಬೇವೂರ ಜಿ.ಪಂ.ಸದಸ್ಯ ಬಸವಂತ ಮೇಟಿ, ಪರಿಸರ ವಿಜ್ಞಾನಿ ಎಂ.ಪಿ.ಪಾಟೀಲ ಹಾಜರಿದ್ದರು. ಬಸವರಾಜ ಬಾಗೇವಾಡಿ ನಿರೂಪಿಸಿ ವಂದಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.