ADVERTISEMENT

ಫೆ.4ರಂದು ಅಮೂಲ್ಯ ಗ್ರಂಥಗಳ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 7:10 IST
Last Updated 1 ಫೆಬ್ರುವರಿ 2011, 7:10 IST

ಕೆರೂರ: ನಾಡಿಗೆ ಮೊಟ್ಟ ಮೊದಲ ಶರಣ ಸಾಹಿತ್ಯ ಗ್ರಂಥ  ಕೊಟ್ಟ ಕೀರ್ತಿ ಹೊಂದಿರುವ ಧಾರವಾಡದ ಮುರುಘಾಮಠವು ಫೆ,4ರಂದು ಮಠದ ಜಾತ್ರೆ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರಿಗೆ ಉಪಲಬ್ಧವಿರದ ಗತಕಾಲದ ಅಮೂಲ್ಯ ಗ್ರಂಥಗಳನ್ನು ಬಿಡುಗಡೆಗೆ ಮಾಡಲಿದೆ ಎಂದು ಪೀಠಾಧಿಪತಿ ಮಲ್ಲಿಕಾರ್ಜುನ ಶ್ರೀಗಳು ತಿಳಿಸಿದರು.

ಪಟ್ಟಣದ ವಿರಕ್ತಮಠದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಶ್ರೀಗಳು, ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊತ್ತಿಗೆಗಳನ್ನು ಹೊರತರಲಾಗಿದೆ ಎಂದು ತಿಳಿಸಿದರು. ಬಾಲ ಶಿವಯೋಗಿಶ್ವರ ಶ್ರೀಗಳು 1930ರಲ್ಲಿಯೇ ಮಠದಿಂದ ಸಾಹಿತ್ಯ ಗ್ರಂಥ ಪ್ರಕಟಣೆಗೆ ನಾಂದಿ ಹಾಡಿದರು. ಗುರುವಿನ ಹಿಂದಿನ ಪರಂಪರೆಯನ್ನೇ ಈಗಲೂ ಮುಂದುವರಿಕೆಗೆ ನಿರ್ಧರಿಸಲಾಗಿದೆ.
 
ಅಮೂಲ್ಯ ಕೃತಿಗಳಾದ ಭೀಮಕವಿ ಬಸವ ಪುರಾಣ, ಸಂಸ್ಕೃತ ಗ್ರಂಥ ಶ್ಲೋಕ ಹಾಗೂ ವಚನ ಸಾಹಿತ್ಯಗಳ ತೌಲನಿಕ ಅಧ್ಯಯನ ಇರುವ, ಪಂಡಿತ ರತ್ನಾಕರ ಶಾಸ್ತ್ರಿ ವಿರಚಿತ ‘ಬಸವ ತತ್ವ ರತ್ನಾಕರ’ ಗುಬ್ಬಿ ಮಲ್ಲನಾರ್ಯರು ರಚಿಸಿದ ‘ಘನಬಾಸಿತ ರತ್ನಮಾಲೆ’ ಹಾಗು ವಿಜಯನಗರ ಸಾಮ್ರಾಜ್ಯ ಖ್ಯಾತ ಕವಿ ಮೊಗ್ಗೆ ಮಹಾದೇವ ಬರೆದ ‘ಶತಕತ್ರಯ’ (ಇವೆರಡು ಈಗ ಉಪಲಬ್ಧವಿಲ್ಲ), ಮುರುಘಾಮಠ ಮೃತ್ಯುಂಜಯ ಶ್ರೀಗಳ ಜೀವನ ಚರಿತ್ರೆ ಮತ್ತು ತಾವೇ ರಚಿಸಿದ ‘ಮಹಾಂತ ಅಪ್ಪಗಳ ಜೀವನ ಗಾಥೆ’ ಸೇರಿದಂತೆ ಒಟ್ಟು 6 ಗ್ರಂಥಗಳನ್ನು ದಾನಿಗಳ ಸಹಾಯದಿಂದ ಬಿಡುಗಡೆ ಮಾಡಲಾಗುವುದು ಎಂದು ಮಲ್ಲಿಕಾರ್ಜುನ ಶ್ರೀ ವಿವರಿಸಿದರು.

ಇದೇ ವೇಳೆ ಮಠಕ್ಕೆ ಮೂವರು ಆಧಾರ ಸ್ತಂಭದಂತಿದ್ದ ಅಥಣಿ ಶಿವಯೋಗೀಶ್ವರ, ಮೃತ್ಯುಂಜಯ ಶ್ರೀ ಹಾಗು ಮಹಾಂತ ಅಪ್ಪರವರನ್ನು ಕುರಿತು ನಾಲ್ವಡಿ ಶ್ರೀಕಂಠ ಶಾಸ್ತ್ರಿಗಳು ರಚಿಸಿದ್ದ ಭಕ್ತಿ-ಭಾವದ ಪದ್ಯಗಳ ಸಿಡಿಗಳನ್ನು ಹೊರ ತರಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದರು.

ಬಸವಜಯಂತಿ ಶತಮಾನೋತ್ಸವ : 1911ರಲ್ಲಿ ಲಿಂ,ಮೃತ್ಯುಂಜಯ ಶ್ರೀಗಳು ಹರ್ಡೇಕರ ಮಂಜಪ್ಪನವರೊಂದಿಗೆ ಕೂಡಿ ಹುಟ್ಟು ಹಾಕಿದ ‘ಬಸವ ಜಯಂತಿ’ಯ ಶತಮಾನೋತ್ಸವವನ್ನು ಮೇನಲ್ಲಿ ರಾಜ್ಯದಾದ್ಯಂತ ವೈಭವದಿಂದ ಆಚರಿಸಲು ನಿರ್ಧರಿಸಲಾಗಿದೆ. ದಾಸೋಹಕ್ಕೆ ಈಗಾಗಲೇ ಸಾಕಷ್ಟು ಆಹಾರ ಧಾನ್ಯ ಸಂಗ್ರಹಿಸಲಾಗಿದೆ ಎಂದರು.  ಜಗದ್ಗುರು ಮುರುಘರಾಜೇಂದ್ರ ಉಚಿತ ಪ್ರಸಾದ ನಿಲಯದ ಟ್ರಸ್ಟ್ ಧಾರವಾಡದ ಸಹಾಯ- ಸಹಕಾರದೊಂದಿಗೆ ಮಠವು ಹಿಂದೆ ಗಳಿಸಿದ್ದ ಕಾರ್ಯಕ್ಷೇತ್ರದ ವೈಭವ ಮತ್ತೆ ಮರುಕಳಿಸಿದ್ದಕ್ಕೆ ಸ್ಥಳೀಯ ವಿರಕ್ತಮಠದವರೇ ಆದ ಮಲ್ಲಿಕಾರ್ಜುನ ಶ್ರೀಗಳು ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.