ADVERTISEMENT

ಬಡವರ ಕಾಳಜಿ ಮಾಡಿ: ನಿಡಸೋಸಿ ಶ್ರೀ

ಬಾಗಲಕೋಟೆ: ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ: ನೂತನ ಚಿಕಿತ್ಸಾ ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2018, 5:14 IST
Last Updated 15 ಏಪ್ರಿಲ್ 2018, 5:14 IST
ಬಾಗಲಕೋಟೆಯ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನೂತನ ನೇತ್ರ ಚಿಕಿತ್ಸಾ ಘಟಕವನ್ನು ಶನಿವಾರ ನಿಡಸೋಸಿ ಸಿದ್ಧಸಂಸ್ಥಾನ ಮಠದ ಶಿವಲಿಂಗೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಸಂಸ್ಥೆಯ ಸಂಸ್ಥಾಪಕ ಡಾ.ಎಂ.ಎಂ.ಜೋಶಿ ಇದ್ದಾರೆ.
ಬಾಗಲಕೋಟೆಯ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನೂತನ ನೇತ್ರ ಚಿಕಿತ್ಸಾ ಘಟಕವನ್ನು ಶನಿವಾರ ನಿಡಸೋಸಿ ಸಿದ್ಧಸಂಸ್ಥಾನ ಮಠದ ಶಿವಲಿಂಗೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಸಂಸ್ಥೆಯ ಸಂಸ್ಥಾಪಕ ಡಾ.ಎಂ.ಎಂ.ಜೋಶಿ ಇದ್ದಾರೆ.   

ಬಾಗಲಕೋಟೆ: ‘ಉತ್ತರ ಕರ್ನಾಟಕ ಭಾಗದಲ್ಲಿ ಬಡಜನರ ಬಗ್ಗೆ ವಿಶೇಷ ಕಾಳಜಿ ವಹಿಸಿ ಉಚಿತ ನೇತ್ರ ಚಿಕಿತ್ಸೆ ನೀಡುವ ಮೂಲಕ ಡಾ.ಎಂ.ಎಂ. ಜೋಶಿ ಸಾಮಾಜಿಕ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಕಾರ್ಯ’ ಎಂದು ನಿಡಸೋಸಿ ಸಿದ್ಧಸಂಸ್ಥಾನ ಮಠದ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ನಗರದ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನೂತನ ನೇತ್ರ ಚಿಕಿತ್ಸಾ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ‘ವೈದ್ಯರು ರೋಗಿಗಳಲ್ಲಿ ದೇವರನ್ನು ಕಾಣುತ್ತಾರೆ. ರೋಗಿಗಳು ವೈದ್ಯರಲ್ಲಿ ದೇವರನ್ನು ಕಾಣುತ್ತಾರೆ. ಇದೊಂದು ಮಾನವೀಯ ದೃಷ್ಟಿಕೋನ. ಜೋಶಿ ಅವರ ಸಾಮಾಜಿಕ ಕಾರ್ಯಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ, ಜತೆಗೆ ಸಮಾಜದ ಋಣ ತೀರಿಸುವುದು ಅವಶ್ಯಕ’ ಎಂದರು.

ಆಸ್ಪತ್ರೆಯ ಸಂಸ್ಥಾಪಕ ಡಾ.ಎಂ.ಎಂ.ಜೋಶಿ ಮಾತನಾಡಿ, ‘ಎಲ್ಲ ವರ್ಗದ ಜನರಿಗೆ ಉತ್ತಮ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ನೀಡುವುದು ನಮ್ಮ ಧ್ಯೇಯ. ಈ ಭಾಗದ ಜನತೆಗೆ ಇದರ ಸೇವೆ ಲಭ್ಯವಾಗಬೇಕು ಎಂಬ ಸದುದ್ದೇಶದಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.

ADVERTISEMENT

‘ಕೆಲವರು ಯಾಕೆ ನೀವು ಉಚಿತ ಚಿಕಿತ್ಸಾ ಶಿಬಿರಗಳನ್ನು ಹಮ್ಮಿಕೊಳ್ಳುತ್ತೀರಿ ಎಂದು ಪ್ರಶ್ನಿಸುತ್ತಾರೆ. ನಾವು ಉತ್ತಮ ಸಂಸ್ಕಾರ ಪಡೆದಿದ್ದೇವೆ. ಮಾತೃ ದೇವೋಭವ, ಪಿತೃ ದೇವೋಭವ, ಅತಿಥಿ ದೇವೋಭವ ಎನ್ನುವ ಹಾಗೇ ಸಮಾಜ ದೇವೋಭವ ಎಂಬ ನೀತಿ ಪಾಲಿಸುತ್ತಿದ್ದೇವೆ’ ಎಂದರು.

‘ಉತ್ತಮ ಸೇವೆ ನೀಡುವುದರಿಂದ ಭಗವಂತನ ಕೃಪೆಗೆ ಪಾತ್ರರಾಗುತ್ತೇವೆ. ಆರೋಗ್ಯ ಸೇವೆಯನ್ನು ಉತ್ತಮ ದರ್ಜೆಗೆ ತೆಗೆದುಕೊಂಡು ಹೋಗುವುದು ನಮ್ಮ ಗುರಿ. ಸಮಾಜ ನಮ್ಮನ್ನು ಎತ್ತರಕ್ಕೆ ಬೆಳೆಸಿದೆ. ಬಡವರಿಗೆ ಚಿಕಿತ್ಸೆ ಪಡೆದುಕೊಳ್ಳುವುದು ಇಂದು ಕಷ್ಟಕರವಾಗಿದೆ. ಹಾಗಾಗಿ ಉಚಿತ ಶಿಬಿರಗಳನ್ನು ಆಯೋಜಿಸುವ ಮೂಲಕ ಅವರ ಸೇವೆ ಮಾಡುತ್ತಿದ್ದೇವೆ’ ಎಂದರು.

‘ನಾವು ಯಾರೊಂದಿಗೂ ಸ್ಪರ್ಧೆ ಮಾಡಲು ಬಂದಿಲ್ಲ. ಜನರಿಗೆ ಉತ್ತಮ ಸೇವೆ ನೀಡುವುದೇ ನಮ್ಮ ಮೂಲ ಉದ್ದೇಶ. ಬೇರೆ ಬೇರೆ ಕಡೆಯಿಂದ ಬರುವ ಜನರಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಸಂಸ್ಥೆಯ ಶಾಖೆಗಳನ್ನು ಎಲ್ಲ ಕಡೆ ವಿಸ್ತರಿಸಲಾಗುತ್ತಿದೆ’ ಎಂದರು.

ಸಂಸ್ಥೆಯ ನಿರ್ದೇಶಕ ಡಾ.ಎ.ಎಸ್. ಗುರುಪ್ರಸಾದ ಮಾತನಾಡಿ, ‘ಸಂಸ್ಥೆ ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುವ ಮೂಲಕ ಮಾದರಿಯಾಗಿದೆ. ಸಂಸ್ಥೆಯಲ್ಲಿ ಪರಿಣಿತಿ ಹೊಂದಿದ ವೈದ್ಯ ಸಿಬ್ಬಂದಿ ಇದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ಈ ಸಂದರ್ಭದಲ್ಲಿ ಡಾ.ಸತ್ಯಮೂರ್ತಿ, ಡಾ.ಕೃಷ್ಣ ಪ್ರಸಾದ, ಡಾ.ಶ್ರೀನಿವಾಸ ಜೋಶಿ, ಡಾ.ಶಿವಕುಮಾರ ಹಿರೇಮಠ, ಡಾ.ಅಬ್ದುಲ್ ರೆಹಮಾನ್ ಖಾನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.