ADVERTISEMENT

ಬಯಲು ಶೌಚಾಲಯದ ವಿರುದ್ಧ ಜನಜಾಗೃತಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 11:05 IST
Last Updated 19 ಅಕ್ಟೋಬರ್ 2011, 11:05 IST

ಮಹಾಲಿಂಗಪುರ: ಇಲ್ಲಿಗೆ ಸಮೀಪದ ಬಿಸನಾಳ ಗ್ರಾಮದಲ್ಲಿ ಕೆಸರಗೊಪ್ಪ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದ ವಿಶೇಷ ಶಿಬಿರದ ಶಿಬಿರಾರ್ಥಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಯಲು ಶೌಚದ ವಿರುದ್ಧ ಜನ ಜಾಗೃತಿ ಮೂಡಿಸಲು ಮೆರವಣಿಗೆ ನಡೆಸಿದರು.

ಮನೆಗೊಂದು ಮರವಿರಲಿ. ಮನೆಗೊಂದು ಶೌಚವಿರಲಿ. ಬಯಲು ಶೌಚ ಅಜ್ಞಾನದ ಪ್ರತೀಕ. ಬಯಲು ಶೌಚ ಅನಾರೋಗ್ಯದ ಆಹ್ವಾನ. ಮನೆ ಇರಲಿ, ಮನೆಗೆ ಮೊದಲು ಶೌಚವಿರಲಿ ಎಂಬ ಭಿತ್ತಿಪತ್ರಗಳನ್ನು, ಘೋಷಣಾ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿ ಜನರ ಗಮನ ಸೆಳೆದರು. ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡು ಬಯಲು ಶೌಚ ನಿರ್ಮೂಲನೆಗೆ ದನಿಗೂಡಿಸಿದರು.

ಸದರ ಬಿಸನಾಳ- ಕೆಸರಗೊಪ್ಪ ಗ್ರಾಮಗಳಲ್ಲಿ ಕಳೆದ 25 ವರ್ಷಗಳಲ್ಲಿ ಅನೇಕ ವಿಶೇಷ ಶಿಬಿರಗಳು ನಡೆದಿದ್ದರೂ ಬಯಲು ಶೌಚ ಮಾತ್ರ ನಿರ್ಮೂಲನೆಯಾಗದಿರುವುದಕ್ಕೆ ಕಳವಳ ವ್ಯಕ್ತವಾಯಿತು. ಪ್ರತಿ ಮನೆಗೆ ಶೌಚಾಲಯ ಕಟ್ಟಿಸಲು ಶಾಸಕರು ರೂ ಏಳು ಸಾವಿರ ಮಂಜೂರು ಮಾಡಿಕೊಳ್ಳಲು ಎಲ್ಲರಿಗೂ ಅವಕಾಶವಿದೆ ಎಂದು ಹೇಳಿದರು. 

ಮುರಿಗೆಪ್ಪಾ ಶಿರೋಳ, ನರಸಪ್ಪ ಹಳ್ಳೂರ, ಶಂಕರೆಪ್ಪ ಚನಾಳ, ಚಂದ್ರಪ್ಪ ಶಿರೋಳ, ಚನ್ನು ದೇಸಾಯಿ, ದುಂಡಪ್ಪ ಜಾಧವ, ಭೀಮಪ್ಪ ಸೊಸಾಲಟ್ಟಿ, ಭೀಮಪ್ಪ ಸಂಶಿ, ಪರಪ್ಪ ಡವಳೇಶ್ವರ, ಶ್ರೀಶೈಲ ಉಳ್ಳಾಗಡ್ಡಿ, ಪರಪ್ಪ ಬ್ಯಾಕೋಡ, ಬಸಪ್ಪಜಾಲಿಕಟ್ಟಿ ಹಾಗೂ ಯೋಜನಾಧಿಕಾರಿ ಪ್ರೊ.ಬಿ.ಆರ್.ಶೇಗುಣಶಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.