ADVERTISEMENT

ಬರ ಪರಿಹಾರ ಕಾಮಗಾರಿ ಚುರುಕಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 6:20 IST
Last Updated 16 ಫೆಬ್ರುವರಿ 2012, 6:20 IST

ಬಾಗಲಕೋಟೆ:  ಜಿಲ್ಲೆಯಲ್ಲಿ ಬರಪರಿಹಾರ ಕಾಮಗಾರಿಗಳನ್ನು ಚುರುಕುಗೊಳಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ  ಬುಧವಾರ ಬರಪರಿಹಾರ ಕಾಮಗಾರಿ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕ್ರಿಯಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಪೈಕಿ ಹಲವಾರು ಕಾಮಗಾರಿಗಳು ಈ ವರೆಗೆ ಪ್ರಾರಂಭವಾಗದಿರುವುದನ್ನು ಗಮನಿಸಿ ಕೂಡಲೇ ಪ್ರಾರಂಭಿಸಲು ತಿಳಿಸಿದರು. 

ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ತಿಳಿಸಿದ ಸಚಿವರು ಮೇವು, ಬರಪರಿಹಾರ ಕಾಮಗಾರಿ, ಉದ್ಯೋಗ ಖಾತ್ರಿ ಯೋಜನೆಯ ಕಾಮಗಳಾರಿ ಹಾಗೂ ಆಸರೆ ಮನೆಗಳ ಕುರಿತು ಮಾಹಿತಿ ಪಡೆದರು.

ಬಾದಾಮಿ ತಾಲ್ಲೂಕಿನ ಅನಂತಗಿರಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು,  ದಿನಂಪ್ರತಿ 4 ಟ್ಯಾಂಕರ್‌ನಂತೆ ನೀರು ಸರಬರಾಜು ಮಾಡಲಾಗುತ್ತದೆ ಎಂದು ಸಹಾಯಕ ಆಯುಕ್ತರಾದ ಗೋವಿಂದ ರೆಡ್ಡಿ ಅವರು ಸಭೆಗೆ ಮಾಹಿತಿ ನೀಡಿದರು.

75 ಗ್ರಾಮಗಳಿಗೆ 276 ಬೋರ್‌ವೆಲ್‌ಗಳ ಪುನಶ್ಚೇತನಕ್ಕಾಗಿ ರೂ. 45.20 ಲಕ್ಷ ಬಿಡುಗಡೆ ಮಾಡಲಾಗಿದೆ. ಪ್ರತಿ ಬೋರ್‌ವೆಲ್ ಪುನಶ್ಚೇತನಕ್ಕೆ ರೂ. 16 ಸಾವಿರ  ಖರ್ಚಾಗುತ್ತಿದ್ದು, ಅಗತ್ಯವಿರುವ ಕಡೆಗಳಲ್ಲಿ ಮಾತ್ರ ಬೋರ್‌ವೆಲ್ ಕೊರೆಯಲು ಸಚಿವರು ತಿಳಿಸಿದರು.

 ಬರಪರಿಹಾರಕ್ಕಾಗಿ ರೂ. 2.28 ಕೋಟಿ ಹಣ ಬಿಡುಗಡೆಯಾಗಿದ್ದು, ಈಗಾಗಲೇ ರೂ. 2.01 ಕೋಟಿ ಹಣ ಖರ್ಚು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ತಿಳಿಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಬೀಳಗಿ ಹೊರತುಪಡಿಸಿ ಹುನಗುಂದ, ಜಮಖಂಡಿ ಮತ್ತು ಇತರ ತಾಲ್ಲೂಕುಗಳಿಗೆ ಅಗತ್ಯ ಹಣ ಬಿಡುಗಡೆ ಮಾಡಲು ಅಥವಾ ಅಗತ್ಯವಿಲ್ಲದ ತಾಲ್ಲೂಕುಗಳ ಹಣವನ್ನು ಅಗತ್ಯವಿರುವ ಕಡೆ ವರ್ಗಾವಣೆ ಮಾಡಲು ತಿಳಿಸಿದರು.

ಹುನಗುಂದ ತಾಲ್ಲೂಕಿನ ನರೆನೂರ ಗ್ರಾಮದಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಲು ಸಚಿವರು ತಿಳಿಸಿದರು.

ಆಸರೆ ಮನೆಗಳ ಹಸ್ತಾಂತರದಲ್ಲಿ ಎಲ್ಲಾ ಅರ್ಹ ಫಲಾನುಭವಿಗಳಿಗೆ ಮನೆಗಳು ದೊರೆಯುವಂತಾಗಬೇಕು, ಮನೆಗಳ ಹಂಚಿಕೆಯಲ್ಲಿ ಗೊಂದಲಗಳಿಗೆ ಅವಕಾಶವಾಗದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ತಿಳಿಸಿದರು.
 
ಈಗಾಗಲೇ ಪೂರ್ಣಗೊಂಡಿರುವ 6 ಗ್ರಾಮಗಳ ಮನೆಗಳ ಹಸ್ತಾಂತರವನ್ನು ಇದೇ 26 ಕ್ಕೆ, ಹುನಗುಂದ ತಾಲ್ಲೂಕಿನ 4 ಗ್ರಾಮಗಳ ಮನೆಗಳನ್ನು  ಇದೇ 27ಕ್ಕೆ ಮತ್ತು ಜಮಖಂಡಿ ತಾಲ್ಲೂಕಿನ 1 ಗ್ರಾಮದ ಆಸರೆ ಮನೆಗಳನ್ನು  ಇದೇ 28 ರಂದು ವಿತರಿಸಲು ಕಾರ್ಯಕ್ರಮ ರೂಪಿಸುವಂತೆ ಸಚಿವರು ಸೂಚಿಸಿದರು.

ಬರಪರಿಹಾರ ಮತ್ತು ಉದ್ಯೋಗಖಾತ್ರಿ ಯೋಜನೆಯಡಿ ಜನರ ಅಗತ್ಯಗಳಿಗನುಗುಣವಾಗಿ ಕಾಮಗಾರಿಗಳನ್ನು ಕೈಗೊಳ್ಳಲು ತಿಳಿಸಿದ ಸಚಿವರು ವಿಳಂಬಕ್ಕೆ ಅವಕಾಶ ಮಾಡಕೊಡಬೇಡಿ ಎಂದರು.
ಸಭೆಗೆ ಮುನ್ನ ಉನ್ನತ ಶಿಕ್ಷಣ ಸಚಿವರಾಗಿದ್ದ  ವಿ.ಎಸ್.ಆಚಾರ್ಯ ನಿಧನಕ್ಕೆ ಎರಡು ನಿಮಿಷಗಳ ಕಾಲ ಮೌನಾಚರಣೆ ನಂತರ ಸಭೆ ಪ್ರಾರಂಭಿಸಲಾಯಿತು.

ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಸರ್ಕಾರದ ಮುಖ್ಯ ಸಚೇತಕ ಸಿದ್ದು ಸವದಿ, ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜಿ.ಪಾಟೀಲ, ಅಪರ ಜಿಲ್ಲಾಧಿಕಾರಿ ಸಿರಸಗಿ ನಾಗಪ್ಪ, ಉಪ ಕಾರ್ಯದರ್ಶಿ ವಿ.ಎಸ್.ಹಿರೇಮಠ, ಲೆಕ್ಕಾಧಿಕಾರಿ ಶಾಂತಾ ಕಡಿ, ಸಹಾಯಕ ಆಯುಕ್ತ ಗೋವಿಂದ ರೆಡ್ಡಿ ಸೇರಿದಂತೆ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.