ADVERTISEMENT

ಬಸವನ ಆಶಯ ಅನುಷ್ಠಾನ: ಮುಖ್ಯಮಂತ್ರಿ

ವಿವಿಧ ಇಲಾಖೆಗಳ ಕಟ್ಟಡ ಉದ್ಘಾಟನೆ; ಕ್ಷೇತ್ರದ ಅಭಿವೃದ್ಧಿ ಪಟ್ಟಿ ಬಿಚ್ಚಿಟ್ಟ ಶಾಸಕ ವಿಜಯಾನಂದ ಕಾಶಪ್ಪನವರ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 7:22 IST
Last Updated 1 ಮಾರ್ಚ್ 2018, 7:22 IST
ಇಳಕಲ್‌ನಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ನೆರೆದ ಜನಸಾಗರ
ಇಳಕಲ್‌ನಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ನೆರೆದ ಜನಸಾಗರ   

ಇಳಕಲ್: ‘ಬಸವ ಜಯಂತಿಯ ಪುಣ್ಯ ದಿನ ಅಧಿಕಾರ ವಹಿಸಿಕೊಂಡ ನಾನು ಬಸವಣ್ಣನವರ ಆಶಯ ಕಾಯಕವೇ ಕೈಲಾಸವನ್ನು ಆಡಳಿತದಲ್ಲಿ ಅಳವಡಿಸಿಕೊಂಡು ನುಡಿದಂತೆ ನಡೆದಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ಆರ್.ವೀರಮಣಿ ಕ್ರೀಡಾಂಗಣದಲ್ಲಿ ಬುಧವಾರ ವಿವಿಧ ಇಲಾಖೆಗಳ ಕಟ್ಟಡ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹನಿ ನೀರಾವರಿ ಯೋಜನೆಯಿಂದ ವಂಚಿತವಾದ 28 ಗ್ರಾಮಗಳಿಗೆ ನಂದವಾಡಗಿ ಏತನೀರಾವರಿ ಯೋಜನೆಯಿಂದ 1 ಟಿಎಂಸಿ ಅಡಿ ನೀರು ಕೊಡಲಾಗುವುದು ಎಂದರು.

ADVERTISEMENT

‘ಅಧಿಕಾರಕ್ಕೆ ಬಂದ ಇಲ್ಲಿಯವರೆಗೂ ಮೂರು ಬಾರಿ ನೇಕಾರರ ಸಾಲ ಮನ್ನಾ ಮಾಡಲಾಗಿದೆ. ಒಟ್ಟು ₹53 ಕೋಟಿ ಋಣಭಾರ ಮುಕ್ತರಾಗಿದ್ದಾರೆ. ಕೃಷಿ ಭಾಗ್ಯದಿಂದ 1.20 ಕೋಟಿ ರೈತರಿಗೆ ಅನಿಭಾಗ್ಯದಿಂದ 30 ಲಕ್ಷ ಫಲಾನುಭವಿಗಳಿಗೆ ಉಚಿತ ಅನಿಲ ದೊರಕಿಸಿ ಕೊಡಲಾಗಿದೆ. 1.43 ಕೋಟಿ ಕುಟುಂಬಗಳು ಆರೋಗ್ಯ ಭಾಗ್ಯ ಯೋಜನೆಯ ಫಲ ಉಣ್ಣಲಿವೆ’ ಎಂದರು.

ಒಣ ಭೂಮಿ ಹೊಂದಿದ ರೈತರು ಬೇಸಾಯ ಮಾಡಲಿ ಮಾಡದೇ ಇರಲಿ ಒಂದು ಹೆಕ್ಟೇರ್‌ಗೆ ₹5ರಿಂದ 10 ಸಾವಿರ ಸಹಾಯಧನ ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುವುದು. ಇದರಿಂದ 70 ಲಕ್ಷ ರೈತರಿಗೆ ಅನುಕೂಲವಾಗಲಿದೆ. ಇದಕ್ಕಾಗಿ ₹3500 ಕೋಟಿ ಮೀಸಲಿಡಲಾಗಿದೆ ಎಂದರು.

ರಾಜ್ಯದ 6.5 ಕೋಟಿ ಜನರಲ್ಲಿ ಶೇ 90 ಮಂದಿ ಸರ್ಕಾರದ ಒಂದಿ
ಲ್ಲೊಂದು ಯೋಜನೆಯ ಫಲಾನುಭವಿ
ಗಳಾಗಿದ್ದಾರೆ. ರಾಜ್ಯದ 3.45 ಕೋಟಿ ಜನರಿಗೆ ಉಚಿತವಾಗಿ ಅಕ್ಕಿ ವಿತರಣೆ ಮಾಡಲಾಗಿದೆ. ಮಾತೃ ಪೂರ್ಣ ಯೋಜನೆಯಡಿ 9 ಲಕ್ಷ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ. ಮಹಿಳೆಯರಿಗೆ ಉಚಿತ ಶಿಕ್ಷಣ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ದೊರಕಿಸಿಕೊಡಲಾಗಿದೆ ಎಂದರು.

ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಮಾತನಾಡಿ ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ ₹10 ಸಾವಿರ ಕೋಟಿ ಕೊಡುವ ಭರವಸೆ ನೀಡಿತ್ತು. ಅದರಂತೆ ಈಗಾಗಲೇ 50 ಸಾವಿರ ಕೋಟಿ ಖರ್ಚು ಮಾಡಲಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ‘ಕ್ಷೇತ್ರದ ಅಭಿವೃದ್ಧಿಗಾಗಿ ₹ 4000 ಕೋಟಿ ಅನುದಾನ ತಂದು ಅದರಲ್ಲಿ ₹1 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ, ಕನಕದಾಸ ಭವನ, ರಾಮಥಾಳ ಹನಿ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಜೊತೆಗೆ 30 ಹಾಸಿಗೆ ಆಸ್ಪತ್ರೆ, ಕೂಡಲಸಂಗಮದಲ್ಲಿ ₹ 94 ಕೋಟಿ ವೆಚ್ಚದಲ್ಲಿ ಬಸವ ಅಕ್ಷರಧಾಮ ಮಾದರಿಯ ಸಮುಚ್ಛಯ ನಿರ್ಮಿಸಲಾಗುತ್ತಿದೆ.

‘ಇಳಕಲ್‌ನಲ್ಲಿ 1560 ಜಿ+1 ಕೆಳಮನೆ ನಿವೇಶನ ಹಕ್ಕು ಪತ್ರ ನೀಡಲಾಗಿದೆ. ವಿಜಯ ಮಹಾಂತೇಶ ತಪೋವನದ ಹಿಂದುಗಡೆ 94 ಹಕ್ಕು ಪತ್ರ ಹಾಗೂ ಹುನಗುಂದದಲ್ಲಿ 728 ಹಕ್ಕು ಪತ್ರಗಳನ್ನು ವಿತರಿಸಲಾಗುತ್ತಿದೆ ಎಂದರು.

ಹುನಗುಂತ ತಾಲ್ಲೂಕಿನ 10 ಪುನರ್ವಸತಿ ಕೇಂದ್ರಗಳಿಗೆ ಅಗತ್ಯ ಸೌಕರ್ಯ ಒದಗಿಸಲಾಗಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ, ರಾಜ್ಯ ಗ್ರಾಮೀಣ ನೈರ್ಮಲ್ಯ ಹಾಗೂ ಕುಡಿಯುವ ನೀರು ಮಂಡಳಿ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ, ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ, ಎಸ್ಪಿ ಸಿ.ಬಿ.ರಿಷ್ಯಂತ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಇದ್ದರು.
***
ರಾಮಥಾಳ ಏತ ನೀರಾವರಿಗೆ ಚಾಲನೆ

ಇಳಕಲ್‌ : ‘ಇಡೀ ಜಗತ್ತಿನಲ್ಲಿಯೇ ಒಂದೇ ಕಡೆ ಇಷ್ಟೊಂದು ದೊಡ್ಡ ಪ್ರಮಾಣದ ಹನಿ ನೀರಾವರಿ ಯೋಜನೆ ಎಲ್ಲಿಯೂ ಅನುಷ್ಠಾನಗೊಂಡಿಲ್ಲ. ರಾಮಥಾಳ (ಮರೋಳ) ಏತ ನೀರಾವರಿ ಯೋಜನೆ ಮೂಲಕ ಅಂತಹದ್ದೊಂದು ಸಾಹಸ ಕೈಗೆತ್ತಿಕೊಂಡು ಅನ್ನದಾತನ ಕನಸು ನನಸಾಗಿಸಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ಇಲ್ಲಿನ ಆರ್‌. ವೀರಮಣಿ ಕ್ರೀಡಾಂಗಣದಲ್ಲಿ ಬುಧವಾರ ರಾಮಥಾಳ (ಮರೋಳ) ಹನಿ ನೀರಾವರಿ ಯೋಜನೆಯ ಲೋಕಾರ್ಪಣೆ, ಕೊಪ್ಪಳ ಏತ ನೀರಾವರಿ ಯೋಜನೆಯ ಕಾಲುವೆ ಮೇಲ್ಭಾಗದಲ್ಲಿ 10 ಮೆಗಾವಾಟ್ ಸೋಲಾರ್ ಫಲಕ ಅಳವಡಿಕೆ, 220 ಕೆವಿ ಸ್ಟೇಶನ್ ಸೇರಿದಂತೆ ಇಳಕಲ್‌–ಹುನಗುಂದ ತಾಲ್ಲೂಕುಗಳ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಹುನಗುಂದ ವಿಧಾನಸಭಾ ಕ್ಷೇತ್ರದಲ್ಲಿ ₹ 965 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಿದ್ದೇವೆ. ಹಿಂದೆಂದೂ ಇಷ್ಟು ಅಭಿವೃದ್ಧಿ ಕಾಮಗಾರಿ ಇಲ್ಲಿ ನಡೆದಿರಲಿಲ್ಲ. ‘ಬಾಯಿ ಇರೋನು ಬರದಲ್ಲಿ ಗೆದ್ದ’ ಎನ್ನುವ ಗಾದೆಯಂತೆ ಸರ್ಕಾರದಿಂದ ತನ್ನ ಕ್ಷೇತ್ರಕ್ಕೆ ಇಷ್ಟೊಂದು ಕೆಲಸಗಳನ್ನು ಶಾಸಕ ವಿಜಯಾನಂದ ಕಾಶಪ್ಪನವರ ಮಾಡಿಸಿಕೊಂಡಿದ್ದಾರೆ. ಅವರ ಕೆಲಸ ಗಮನಿಸಿ ಮತದಾರರು ಅವರನ್ನು ಪುನರಾಯ್ಕೆ ಮಾಡಬೇಕು’ ಎಂದು ಹೇಳುವ ಮೂಲಕ ಮುಂಬರುವ ಚುನಾವಣೆಯ ಅಭ್ಯರ್ಥಿ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.